MS Dhoni : ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ತಮ್ಮ ವೃತ್ತಿಜೀವನದ ಆರಂಭದಲ್ಲಿ ಆಡಿದ ಎರಡು ಇನ್ನಿಂಗ್ಸ್‌ಗಳನ್ನು ಯಾರೂ ಮರೆಯುವುದಿಲ್ಲ. ಪಾಕಿಸ್ತಾನ ವಿರುದ್ಧ 148 ರನ್ ಹಾಗೂ ಶ್ರೀಲಂಕಾ ವಿರುದ್ಧ 183 ರನ್ ಗಳಿಸಿದ್ದರು. ಈ ಎರಡು ಕೂಡ ಮಹಿಯ ಅತ್ಯದ್ಭುತ ಇನ್ನಿಂಗ್ಸ್.
ಶ್ರೀಲಂಕಾ ವಿರುದ್ಧ ರಾಜಸ್ಥಾನದ ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಧೋನಿ 183 ರನ್ ಗಳಿಸಿದ ಬೃಹತ್ ಇನ್ನಿಂಗ್ಸ್ ಎಲ್ಲರಿಗೂ ನೆನಪಿದೆ. ಈ ಏಕದಿನದ ಪಂದ್ಯದಲ್ಲಿ ಧೋನಿ ಅವರು ಅಕ್ಷರಶಃ ಅಬ್ಬರಿಸಿ ಬೊಬ್ಬಿರಿದಿದ್ದರು. ಸಿಕ್ಸರ್ ಮತ್ತು ಬೌಂಡರಿಗಳೊಂದಿಗೆ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಕೇವಲ 145 ಎಸೆತಗಳಲ್ಲಿ 183 ರನ್ ಗಳಿಸಿದ ಮಹಿ ಅವರ ದಾಖಲೆಯನ್ನು ಕಳೆದ 19 ವರ್ಷಗಳಲ್ಲಿ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ.
ಎಂಎಸ್ ಧೋನಿ ಶ್ರೀಲಂಕಾ ವಿರುದ್ಧ 10 ಸಿಕ್ಸರ್ ಮತ್ತು 15 ಬೌಂಡರಿಗಳೊಂದಿಗೆ ಬ್ಯಾಟಿಂಗ್ನಲ್ಲಿ ಬಿರುಗಾಳಿ ಸೃಷ್ಟಿಸಿದ್ದರು. ಇದಕ್ಕೂ ಮುನ್ನ 2004ರಲ್ಲಿ ಆಸ್ಟ್ರೇಲಿಯಾದ ದಿಗ್ಗಜ ಆ್ಯಡಮ್ ಗಿಲ್ಕ್ರಿಸ್ಟ್ ಮಾಡಿದ್ದ 172 ರನ್ಗಳ ದಾಖಲೆಯನ್ನು ಧೋನಿ ಮುರಿದರು. ಇಂದಿಗೂ ಧೋನಿ, ಏಕದಿನ ಮಾದರಿ ಪಂದ್ಯದಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿದ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ಆಗಿಯೇ ಉಳಿದಿದ್ದಾರೆ.
ಮಹಿ ಅವರು ಈ ದಾಖಲೆಯನ್ನು ನಿರ್ಮಿಸಿ ನಿನ್ನೆಗೆ ಅಂದರೆ, ಅಕ್ಟೋಬರ್ 31ಕ್ಕೆ 19 ವರ್ಷಗಳಾಗಿವೆ. ಅನೇಕ ಆಟಗಾರರು ಈ ದಾಖಲೆಯನ್ನು ಮುರಿಯಲು ಪ್ರಯತ್ನಿಸಿದಾದರೂ ಈವರೆಗೂ ಯಾರಿಂದಲೂ ಸಾಧ್ಯವಾಗಿಲ್ಲ.
ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಹಲವಾರು ಸಂದರ್ಭಗಳಲ್ಲಿ ಎಂಎಸ್ ಧೋನಿ ಅವರ ದಾಖಲೆಯ ಸಮೀಪಕ್ಕೆ ಬಂದಿದ್ದಾರೆ. ಆದರೂ ದಾಖಲೆ ಮುರಿಯಲು ಸಾಧ್ಯವಾಗಲಿಲ್ಲ. ಡಿ ಕಾಕ್, ಬಾಂಗ್ಲಾದೇಶ ವಿರುದ್ಧ 2023ರಲ್ಲಿ 174 ರನ್ ಗಳಿಸಿದರು. 2016ರಲ್ಲಿ ಆಸ್ಟ್ರೇಲಿಯಾ ವಿರುದ್ಧ 178 ರನ್ ಗಳಿಸಿದ್ದರು. 2017ರಲ್ಲಿ ಬಾಂಗ್ಲಾದೇಶ ವಿರುದ್ಧ 168 ರನ್ ಗಳಿಸಿದ್ದರು. ಆದರೆ, ಎಷ್ಟೇ ಪ್ರಯತ್ನಿಸಿದರೂ ಧೋನಿ ದಾಖಲೆಯನ್ನು ಯಾರಿಂದಲೂ ದಾಟಲು ಸಾಧ್ಯವಾಗಲಿಲ್ಲ.
ಅಂದಹಾಗೆ ಎಂ.ಎಸ್. ಧೋನಿ ಅವರು ಟೆಸ್ಟ್ನಲ್ಲಿ 90, ಏಕದಿನ 350 ಮತ್ತು ಟಿ20ಯಲ್ಲಿ 98 ಪಂದ್ಯಗಳು ಸೇರಿ ಒಟ್ಟು 538 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 44.96 ಸರಾಸರಿಯಲ್ಲಿ 17266 ರನ್ ಗಳಿಸಿದ್ದಾರೆ. ಇದರಲ್ಲಿ 16 ಶತಕ ಹಾಗೂ 108 ಅರ್ಧಶತಕಗಳು ಸೇರಿವೆ. (ಏಜೆನ್ಸೀಸ್)