Mohammed Siraj : ಅಡಿಲೇಡ್ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಬಳಿಕ ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್, ಆಸ್ಟ್ರೇಲಿಯಾ ಅಭಿಮಾನಿಗಳ ಪಾಲಿಗೆ ವಿಲನ್ ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದಕ್ಕೆ ಕಾರಣ ಈ ಪಂದ್ಯದಲ್ಲಿ ಆಸೀಸ್ ಸ್ಟಾರ್ ಬ್ಯಾಟ್ಸ್ಮನ್ ಟ್ರಾವಿಸ್ ಹೆಡ್ ಜತೆ ಸಿರಾಜ್ ನಡೆಸಿದ ವಾಗ್ವಾದ.
ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡುತ್ತಿದ್ದಂತೆ ಸಿರಾಜ್ ಅವರು ತೋರಿದ ಅತಿಯಾದ ಉತ್ಸಾಹವು ಭಾರೀ ಟೀಕೆಗೆ ಗುರಿಯಾಯಿತು. ಹೆಡ್‌ಗಿಂತ ಮೊದಲು ಮಾರ್ನಸ್ ಲಬುಸೇನ್ ಅವರೊಂದಿಗೆ ಸಿರಾಜ್ ವಾಗ್ವಾದ ನಡೆಸಿದ್ದರು. ಹೀಗಾಗಿ ಸಿರಾಜ್ ವಿರುದ್ಧ ಆಸೀಸ್ ಆಟಗಾರರು ಹಾಗೂ ಅಭಿಮಾನಿಗಳು ಆಕ್ರೊಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಸುನಿಲ್ ಗವಾಸ್ಕರ್ ಅವರಂತಹ ಭಾರತೀಯ ಕ್ರಿಕೆಟ್ ದಿಗ್ಗಜರು ಸಹ ಸಿರಾಜ್ ಅವರ ನಡವಳಿಕೆಯನ್ನು ಟೀಕಿಸಿದ್ದಾರೆ. ಕೊನೆಗೆ ಐಸಿಸಿ ಕೂಡ ಸಿರಾಜ್ ಅವರಿಗೆ ಶಾಕ್ ನೀಡಿದ್ದು, ಪಂದ್ಯ ಶುಲ್ಕದ ಶೇ.20ರಷ್ಟು ದಂಡ ವಿಧಿಸಿದೆ.
ಇದೆಲ್ಲದರ ನಡುವೆ ಆಸೀಸ್ ಸ್ಟಾರ್ ವೇಗಿ ಜೋಶ್ ಹ್ಯಾಸಲ್‌ವುಡ್ ಅವರು ಸಿರಾಜ್ ಅವರನ್ನು ಹೊಗಳಿರುವುದು ಗಮನಾರ್ಹ ಸಂಗತಿಯಾಗಿದೆ. ಸಿರಾಜ್ ಓರ್ವ ಉತ್ತಮ ವ್ಯಕ್ತಿ ಎಂದು ಶ್ಲಾಘಿಸಿದ್ದಾರೆ. ಅಂದಹಾಗೆ ಐಪಿಎಲ್‌ನಲ್ಲಿ ಸಿರಾಜ್ ಮತ್ತು ಹ್ಯಾಸಲ್‌ವುಡ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಒಟ್ಟಿಗೆ ಆಡಿದ್ದು ಗೊತ್ತೇ ಇದೆ.
ಸಿರಾಜ್ ತುಂಬಾ ಒಳ್ಳೆಯವರು. ಆದರೆ ಕೆಲವೊಮ್ಮೆ ಅವರು ಆಕ್ರಮಣಕಾರಿಯಾಗಿರಬಹುದು. ಆರ್‌ಸಿಬಿಯಲ್ಲಿ ಸಿರಾಜ್ ಅವರೊಂದಿಗೆ ಕಳೆದ ಸಮಯವನ್ನು ನಿಜವಾಗಿಯೂ ಆನಂದಿಸಿದ್ದೇನೆ. ವಿರಾಟ್ ಕೊಹ್ಲಿಯಂತೆ ಸಿರಾಜ್ ಕೂಡ ತುಂಬಾ ಆಕ್ರಮಣಕಾರಿ ಸ್ವಭಾವವನ್ನು ಹೊಂದಿದ್ದಾರೆ. ಅವರು ತುಂಬಾ ಭಾವೋದ್ವೇಗಕ್ಕೆ ಒಳಗಾಗುತ್ತಾರೆ ಎಂದು ಹ್ಯಾಸಲ್‌ವುಡ್ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮೈದಾನಕ್ಕಿಳಿದಾಗಲೆಲ್ಲ ಸಿರಾಜ್ ಅವರು ತಮ್ಮ ವ್ಯಕ್ತಿತ್ವದಿಂದ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಕೆಲ ಐಪಿಎಲ್ ಸೀಸನ್‌ಗಳಲ್ಲಿ ಸಿರಾಜ್ ಅವರು ಕೆಲವು ಅದ್ಭುತ ಬೌಲಿಂಗ್ ಸ್ಪೆಲ್‌ಗಳನ್ನು ಎಸೆದಿದ್ದಾರೆ ಎಂದು ಹ್ಯಾಸಲ್‌ವುಡ್ ಸಿರಾಜ್ ಅವರನ್ನು ಕೊಂಡಾಡಿದ್ದಾರೆ. ಅಂದಹಾಗೆ ಹ್ಯಾಸಲ್‌ವುಡ್ ಅವರು ಗಾಯದ ಸಮಸ್ಯೆಯಿಂದಾಗಿ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿರುವುದು ಗೊತ್ತೇ ಇದೆ.
ಇದನ್ನೂ ಓದಿ: ಕಳೆದ 5 ವರ್ಷದಲ್ಲಿ 11 ಬಾರಿ ಕಚ್ಚಿದ ಕಪ್ಪು ಬಣ್ಣದ ಹಾವು! ಯುವತಿಯ ಮಾತು ಕೇಳಿ ದಂಗಾದ ವೈದ್ಯರು | Snake
ಈಗಾಗಲೇ ಟೀಮ್ ಇಂಡಿಯಾ ಆಸಿಸ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದೆ. ಪರ್ತ್ನಲ್ಲಿ ನಡೆದ ಟೆಸ್ಟ್ನಲ್ಲಿ ಭರ್ಜರಿ ಜಯ ದಾಖಲಿಸಿದ ಭಾರತ, ಅಡಿಲೇಡ್ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ನಲ್ಲಿ ಹೀನಾಯವಾಗಿ ಸೋಲುಂಡಿತು. ಈ ಮೂಲಕ ಟೆಸ್ಟ್ ಸರಣಿಯಲ್ಲಿ 1-1ರ ಮೂಲಕ ಸಮಬಲ ಕಾಯ್ದುಕೊಂಡಿದೆ. ಇನ್ನುಳಿದ ಮೂರು ಟೆಸ್ಟ್ ಪಂದ್ಯಗಳು ಭಾರತದ ಪಾಲಿಗೆ ನಿರ್ಣಾಯಕವಾಗಿವೆ. (ಏಜೆನ್ಸೀಸ್)