ಕ್ರೀಡೆ

ಪ್ರಧಾನಿಗೆ ಟೋಪಿ ಗಿಫ್ಟ್​ ಕೊಟ್ಟ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ನವದೀಪ್ ಸಿಂಗ್

ಮೋಹನ್​ ಶೆಟ್ಟಿ

ನವದೆಹಲಿ: ಪ್ಯಾರಿಸ್​ನಲ್ಲಿ ನಡೆದ ಪ್ಯಾರಾಲಿಂಪಿಕ್ 2024ರ ಪದಕದಾಟದಲ್ಲಿ ಭಾರತಕ್ಕೆ ಕೀರ್ತಿ ತಂದ ಕ್ರೀಡಾಪಟುಗಳು, ಬರೋಬ್ಬರಿ 29 ಮೆಡಲ್​ಗಳನ್ನು ಗೆದ್ದು ಬೀಗಿದರು. ಇನ್ನು ಪ್ಯಾರಾಲಿಂಪಿಕ್ಸ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಕ್ರೀಡಾಪಟುಗಳನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿದ ಪ್ರಧಾನಿ ನರೇಂದ್ರ ಮೋದಿ, ಎಲ್ಲರಿಗೂ ಅಭಿನಂದನೆ ತಿಳಿಸಿ, ಪ್ರಶಂಸೆ ವ್ಯಕ್ತಪಡಿಸಿದರು. ಈ ವೇಳೆ ಕ್ರೀಡಾಪಟು ನವದೀಪ್ ಸಿಂಗ್ ಪ್ರಧಾನಿಗೆ ಹೊಸ ಕ್ಯಾಪ್​ವೊಂದನ್ನು ವಿಶೇಷ ಉಡುಗೊರೆಯಾಗಿ ನೀಡಿರುವ ವಿಡಿಯೋ ಇದೀಗ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ಯಾರಿಸ್ 2024ರ ಪ್ಯಾರಾಲಿಂಪಿಕ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಜಾವೆಲಿನ್ ಎಸೆತಗಾರ ನವದೀಪ್ ಸಿಂಗ್​ಗೆ ನರೇಂದ್ರ ಮೋದಿ ಅವರು ಅಭಿನಂದನೆ ಜತೆ ಗೌರವ ಸಲ್ಲಿಸಿದರು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ನವದೀಪ್ ತಾವು ತಂದ ಟೋಪಿಯನ್ನು ಮೋದಿ ಕೆಳಗೆ ಕುಳಿತುಕೊಳ್ಳುವ ಮೂಲಕ ಅವರಿಂದಲೇ ಹಾಕಿಸಿಕೊಂಡರು. ಪ್ಯಾರಾಲಿಂಪಿಕ್ಸ್​ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದಕ್ಕೆ ಅಭಿನಂದನೆ ತಿಳಿಸಿದ ಮೋದಿ, ಕೆಲವು ನಿಮಿಷ ಅವರೊಂದಿಗೆ ಸಂಭಾಷಣೆ ನಡೆಸಿದರು. ಈ ವೇಳೆ ಪ್ರಧಾನಿ ಅವರ ಸರಳತೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ತಮ್ಮ ಗೆಲುವಿನ ಬಗ್ಗೆ ಮಾತನಾಡಿದ ನವದೀಪ್, "ನಾವು ಎಲ್ಲರಂತೆ ಗೌರವಕ್ಕೆ ಅರ್ಹರು. ನಾನು ಕೂಡ ದೇಶಕ್ಕೆ ಕೀರ್ತಿ ತಂದಿದ್ದೇನೆ. ಈ ಜಗತ್ತಿನಲ್ಲಿ ನಾವು ಸಹ ಎಲ್ಲರಂತೆ ಸಾಮಾನರು. ಯಾರೂ ನಮ್ಮನ್ನು ಗೇಲಿ ಮಾಡಬಾರದು ಎಂದು ಸಮಾಜಕ್ಕೆ ಶಿಕ್ಷಣ ನೀಡುವುದು ನನ್ನ ಮಹತ್ವದ ಗುರಿಯಾಗಿದೆ. ನಾವು ಕೂಡ ನಮ್ಮ ದೇಶವನ್ನು ಹೆಮ್ಮೆಪಡಿಸಬಹುದು. ಅಂತಹ ಅನೇಕ ಪ್ರತಿಭೆಗಳು ನಮ್ಮಲಿದ್ದಾರೆ. ಆರಂಭದಲ್ಲಿ ಸಾಕಷ್ಟು ಅಡೆತಡೆಗಳು ಎದುರಾದವು. ಆದರೆ ಅದನ್ನೆಲ್ಲಾ ಮೆಟ್ಟಿ, ಇಂದು ಬಲವಾಗಿ ನಿಂತಿದ್ದೇನೆ. ಇದು ನನ್ನ ಜೀವನದ ದೊಡ್ಡ ಕ್ಷಣ" ಎಂದು ಹೆಮ್ಮೆಯಿಂದ ಹೇಳಿದ್ದಾರೆ,(ಏಜೆನ್ಸೀಸ್).