ಬೆಂಗಳೂರು: ಬರಿಗಾಲಿನಲ್ಲಿ ಅಥವಾ ಶೂ ಹಾಕಿಕೊಂಡು ಫುಟ್ಬಾಲ್ನಲ್ಲಿ ಆಡುವವರನ್ನು ನೀವು ನೋಡಿರಬಹುದು. ಆದರೆ ಇಲ್ಲೊಬ್ಬಳು ಹುಡುಗಿ ಉದ್ದನೆಯ ಹೀಲ್ಸ್ ಚಪ್ಪಲಿ ಹಾಕಿಕೊಂಡು ಫುಟ್ಬಾಲ್ ಆಡುವ ಮೂಲಕ ಎಲ್ಲರ ಗಮನಸೆಳೆದಿದ್ದಾಳೆ. ಮಿಜೋರಾಂನ ಕ್ರೀಡಾ ಸಚಿವ ರಾರ್ಬಟ್ ರೊಮವಿಯ ರೊಯ್ಟೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಈಗ ವೈರಲ್ ಆಗಿದೆ.
ಐಜ್ವಾಲ್ನ ಸಿಂಡಿ ರೆಮ್ರೌಟ್ಪುಯಿ ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಹುಡುಗಿಯಾಗಿದ್ದು, ಅಂತರ್ಜಾಲದಲ್ಲಿ ಭಾರಿ ಸಂಚಲನ ಮೂಡಿಸಿದ್ದಾಳೆ. ವಿಶ್ವದೆಲ್ಲೆಡೆ ನಡೆಯುತ್ತಿರುವ ಕೀಪಿ-ಅಪ್ಪಿ ಚಾಲೆಂಜ್ನ ಅಂಗವಾಗಿ ಸಿಂಡಿ ಈ ವಿಡಿಯೋ ಮಾಡಿದ್ದಾರೆ ಎನ್ನಲಾಗಿದೆ. ಕಪ್ಪು ಬಣ್ಣದ ಹೀಲ್ಸ್ ಚಪ್ಪಲಿ ಹಾಕಿಕೊಂಡಿರುವ ಸಿಂಡಿ ಚೆಂಡು ನೆಲಕ್ಕೆ ಬೀಳದೆ ಗಾಳಿಯಲ್ಲೇ ಇರುವಂತೆ ನೋಡಿಕೊಂಡಿರುವುದಲ್ಲದೆ, ಹೀಲ್ಸ್ ಚಪ್ಪಲಿಯಲ್ಲೂ ಬ್ಯಾಲೆನ್ಸ್ ಮಾಡಿರುವುದು ಅಚ್ಚರಿ ಮೂಡಿಸಿದೆ.
ನನ್ನ ಕ್ಷೇತ್ರದಲ್ಲಿ ಬರುವ ಐಜ್ವಾಲ್ನ ಪ್ರತಿಭಾನ್ವಿತ ಫುಟ್ಬಾಲ್ ಆಟಗಾತಿರ್ ಸಿಂಡಿ ರೆಮ್ರೌಟ್ಪುಯಿ ಪೆನ್ಸಿಲ್ ಹೀಲ್ ಚಪ್ಪಲಿ ಹಾಕಿಕೊಂಡು ಚೆಂಡಿನೊಂದಿಗೆ ಆಡುತ್ತಿರುವುದನ್ನು ನೋಡಿ. ಫುಟ್ಬಾಲ್ ಆಟ ಬರೀ ಹುಡುಗರಿಗೆ ಅಲ್ಲ. ಇದು ಎಲ್ಲರ ಆಟ ಎಂದು ವಿಡಿಯೋದ ಜತೆಗೆ ಬರೆದುಕೊಂಡಿರುವ ರಾರ್ಬಟ್ ರೊಮವಿಯ, ಭಾರತೀಯ ಫುಟ್ಬಾಲ್ ಅನ್ನು ಎಲ್ಲರೂ ಒಟ್ಟಾಗಿ ಮುಂದಕ್ಕೆ ಕೊಂಡೊಯ್ಯೋಣ ಎಂಬ ಹ್ಯಾಷ್ಟ್ಯಾಗ್ ನೀಡಿದ್ದಾರೆ. ಸಿಂಡಿ ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲೂ ಹಂಚಿಕೊಂಡು ಫುಟ್ಬಾಲ್ ಪ್ರೇಮಿಗಳ ಹುಬ್ಬೇರಿಸಿದ್ದಾರೆ.