ಕ್ರೀಡೆ

ಗರ್ಲ್​ಫ್ರೆಂಡ್​ ಜೊತೆ ಸಾರ್ವಜನಿಕವಾಗಿ ಕಿತ್ತಾಡಿಕೊಂಡ ಮೈಕೆಲ್​ ಕ್ಲಾರ್ಕ್​ಗೆ ಶಾಕ್​ ಕೊಟ್ಟ ಬಿಸಿಸಿಐ!

ನವದೆಹಲಿ: ಗರ್ಲ್​ಫ್ರೆಂಡ್​ ಜೊತೆ ಸಾರ್ವಜನಿಕವಾಗಿ ಕಿತ್ತಾಡಿಕೊಂಡ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕೆಲ್​ ಕ್ಲಾರ್ಕ್​ಗೆ ಬಿಸಿಸಿಐ ಶಾಕ್​ ಕೊಟ್ಟಿದೆ. ಮುಂಬರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್​-ಗವಾಸ್ಕರ್​ ಟ್ರೋಫಿಗಾಗಿ ಕ್ಲಾರ್ಕ್​ ಅವರ ಕಾಮೆಂಟರಿ ಒಪ್ಪಂದವನ್ನು ಬಿಸಿಸಿಐ ಮುರಿದುಕೊಂಡಿದೆ.

ಕಳೆದ ವಾರ ನೂಸಾದ ಕ್ವೀನ್ಸ್​ಲ್ಯಾಂಡ್​ನಲ್ಲಿ ಮೈಕೆಲ್​ ಕ್ಲಾರ್ಕ್​ ಹಾಲಿಡೇ ಮೂಡಿನದಲ್ಲಿದ್ದರು. ಈ ವೇಳೆ ಮಾಜಿ ಪ್ರೇಯಸಿ ಪಿಪ್​ ಎಡ್ವರ್ಡ್​ ಜೊತೆ ಕ್ಲಾರ್ಕ್​ ಇರುವುದನ್ನು ಹಾಲಿ ಪ್ರೇಯಸಿ ಜೇಡ್ ಯಾರ್ಬ್ರೋ ರೆಡ್​ಹ್ಯಾಂಡ್​ ಆಗಿ ಹಿಡಿದಿದ್ದರು. ಬಳಿಕ ಎಲ್ಲರ ಮುಂದೆಯೇ ಕ್ಲಾರ್ಕ್​ ಕೆನ್ನೆಗೆ ಜೇಡ್ ಯಾರ್ಬ್ರೋ ಬಾರಿಸಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ಬಿಸಿಸಿಐ ಒಪ್ಪಂದವನ್ನು ಮುರಿದುಕೊಂಡಿದೆ.

ಬಾರ್ಡರ್​-ಗವಾಸ್ಕರ್​ ಟ್ರೋಫಿಯು ನಾಲ್ಕು ಟೆಸ್ಟ್​ ಮತ್ತು ಮೂರು ಏಕದಿನ ಪಂದ್ಯಗಳನ್ನು ಒಳಗೊಂಡಿದೆ. ಇದೀಗ ಕ್ಲಾರ್ಕ್​ ಅವರನ್ನು ಕಾಮೆಂಟರಿ ಒಪ್ಪಂದದಿಂದ ತೆಗೆದುಹಾಕಿರುವ ಬಿಸಿಸಿಐ, ಆ ಜಾಗಕ್ಕೆ ಅನೇಕ ಮಾಜಿ ಆಸ್ಟ್ರೇಲಿಯಾ ಆಟಗಾರರನ್ನು ನೇಮಿಸಲು ಮುಂದಾಗಿದೆ. ಮಾರ್ಕ್​ ವಾಘ್​ ಅವರು ನಾಗ್ಪುರ ಮತ್ತು ನವದೆಹಲಿಯಲ್ಲಿ ನಡೆಯಲಿರುವ ಮೊದಲ ಎರಡು ಟೆಸ್ಟ್​​ ಪಂದ್ಯಗಳಲ್ಲಿ ಕಾಮೆಂಟರಿ ತಂಡದ ಭಾಗವಾಗಲಿದ್ದಾರೆ.

ಧರ್ಮಶಾಲಾ ಮತ್ತು ಅಹಮದಾಬಾದ್​ನಲ್ಲಿ ನಡೆಯಲಿರುವ ಕೊನೆಯ ಎರಡು ಪಂದ್ಯಗಳಲ್ಲಿ ಆಸಿಸ್​ನ ಮಾಜಿ ವೇಗಿ ಮಿಚೆಲ್​ ಜಾನ್ಸನ್​ ಕಾಮೆಂಟರಿ ಮಾಡಲಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮಿಚೆಲ್​ ಜಾನ್ಸನ್​ ಅವರಿಗೆ ಆ್ಯರೂನ್​ ಫಿಂಚ್​ ಅವರು ಸಾಥ್​ ನೀಡಲಿದ್ದಾರೆ. ಇಷ್ಟೇ ಅಲ್ಲದೆ, ಬಿಸಿಸಿಐ, ರಿಕಿ ಪಾಂಟಿಂಗ್, ಮೈಕ್ ಹಸ್ಸಿ, ಸೈಮನ್ ಕ್ಯಾಟಿಚ್ ಮತ್ತು ಬ್ರಾಡ್ ಹ್ಯಾಡಿನ್ ಅವರಂತಹ ಹಲವಾರು ಮಾಜಿ ಆಸ್ಟ್ರೇಲಿಯಾದ ಕ್ರಿಕೆಟಿಗರೊಂದಿಗೆ ಸಂಪರ್ಕದಲ್ಲಿದೆ ಎಂದು ವರದಿಯಾಗಿದೆ.

ಅಂದಹಾಗೆ ಕಳೆದ ವಾರ ವೈರಲ್​ ಆದ ವಿಡಿಯೋದಲ್ಲಿ ಮೈಕೆಲ್​ ಕ್ಲಾರ್ಕ್​ ಅವರು ಮೇಲಿನ ಅಂಗಿ ಇಲ್ಲದೆ, ಕೇವಲ ಶಾರ್ಟ್ಸ್​ನಲ್ಲಿ ಕೂಗುತ್ತಾ ಬರುತ್ತಿರುವುದು ಮತ್ತು ಅವರ ಪ್ರೇಯಸಿ ಜೇಡ್ ಯಾರ್ಬ್ರೋ ಅವರು ಕ್ಲಾರ್ಕ್​ ಕೆನ್ನೆಗೆ ಬಾರಿಸಿರುವ ದೃಶ್ಯವಿತ್ತು. ಮಾಜಿ ಪ್ರೇಯಸಿ ಪಿಪ್​ ಎಡ್ವರ್ಡ್​ ಜೊತೆ ಕ್ಲಾರ್ಕ್​ ಸಿಕ್ಕಿಬಿದ್ದಿದ್ದೇ ಹಾಲಿ ಪ್ರೇಯಸಿಯ ಕಪಾಳಮೋಕ್ಷಕ್ಕೆ ಕಾರಣ ಎಂದು ತಿಳಿದುಬಂದಿದೆ. ಈ ಘಟನೆಯ ಬಳಿಕ ಕ್ಲಾರ್ಕ್​ ಅವರು ತನ್ನ ವರ್ತನೆಯ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಮುಂಬರುವ ಪಾಕಿಸ್ತಾನ ಸೂಪರ್​ ಲೀಗ್​ (ಪಿಎಸ್​ಎಲ್​)ನಲ್ಲಿ ಕಾಮೆಂಟರಿ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಆಸ್ಟ್ರೇಲಿಯಾ ತಂಡದ ಭಾರತದ ಪ್ರವಾಸದ ದಿನವೇ ಪಿಎಸ್​ಎಲ್​ ಟೂರ್ನಿ ನಡೆಯಲಿದೆ.

ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಪಂದ್ಯಗಳು ಫೆ. 9ರಿಂದ ಆರಂಭವಾಗಲಿದೆ. ಆಸಿಸ್​ ಆಟಗಾರರು ಮುಂದಿನ ವಾರ ಬೆಂಗಳೂರಿಗೆ ಬಂದಿಳಿಯಲಿದೆ. (ಏಜೆನ್ಸೀಸ್​)