ಕ್ರೀಡೆ

ಭಾರತ-ಪಾಕ್​​ ಪಂದ್ಯಕ್ಕೆ ಉಗ್ರರ ಬೆದರಿಕೆ; ಭದ್ರತೆ ಹೆಚ್ಚಿಸಿದ ಪೊಲೀಸರು

ಯುಎಸ್​ಎ: ಜೂನ್​ 02ರಿಂದಆರಂಭವಾಗಲಿರುವ ಟಿ-20 ವಿಶ್ವಕಪ್​ಗೆ ದಿನಗಣನೆ ಆರಂಭವಾಗಿದ್ದು, ಚುಟುಕು ವಿಶ್ವಸಮರವನ್ನು ಕಣ್ತುಂಬಿಕೊಳ್ಳಲು ಕ್ರೀಡಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಜೂನ್​ 05ರಂದು ಐರ್ಲೆಂಡ್​ ವಿರುದ್ಧ ಕಣಕ್ಕಿಳಿಯುವ ಮೂಲಕ ಟೀಮ್​ ಇಂಡಿಯಾ ತನ್ನ ಅಭಿಯಾನವನ್ನು ಆರಂಭಿಸಲಿದ್ದು, ಕ್ರಿಕೆಟ್​ ಪ್ರೇಮಿಗಳು ಜೂನ್​ 09ರಂದು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್​ ಪಂದ್ಯಕ್ಕೆ ಎದುರು ನೋಡುತ್ತಿದ್ದಾರೆ.

ಉಭಯ ದೇಶಗಳ ನಡುವಿನ ಕ್ರಿಕೆಟ್​ ಕಾದಾಟವನ್ನು ಕಣ್ತುಂಬಿಕೊಳ್ಳಲು ಕ್ರೀಡಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಪಂದ್ಯಕ್ಕೆ ಉಗ್ರರ ಕರಿನೆರಳು ತಾಗಿದೆ. ಐಸಿಸಿ ಉಗ್ರ ಸಂಘಟನೆಯಿಂದ ಬೆದರಿಕೆ ಕರೆ ಬಂದಿರುವುದಾಗಿ ಅಮೆರಿಕ ಪೊಲೀಸರು ತಿಳಿಸಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿ ಪ್ಯಾಟ್ರಿಕ್​ ರೈಡರ್​, ಐಸಿಸ್​ನೊಂದಿಗೆ ಗುರುತಿಸಿಕೊಂಡಿರುವ ಲೋನ್​ ವುಲ್ಫ್​ ಎಂಬ ಉಗ್ರ ಸಂಘಟನೆಯು ಭಾರತ ಹಾಗೂ ಪಾಕಿಸ್ತಾನ ಪಂದ್ಯ ನಡೆಯಲಿರುವ ನಸ್ಸೌ ಕೌಂಟಿ ಕ್ರಿಕೆಟ್​ ಕ್ಲಬ್​ ಮೇಲೆ ದಾಳಿ ಮಾಡುವುದಾಗಿ ವಿಡಿಯೋ ಸಂದೇಶದ ಮೂಲಕ ಬೆದರಿಕೆ ಹಾಕಿದ್ದಾರೆ.

ಪಂದ್ಯ ನಡೆಯುವ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಾಗ್ರತೆ ವಹಿಸಲಾಗಿದೆ. ಪಂದ್ಯ ನಡೆಯುವ ಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿ ಪ್ಯಾಟ್ರಿಕ್​ ರೈಡರ್​ ತಿಳಿಸಿದ್ದಾರೆ.