ಕ್ರೀಡೆ

ಮುಂದುವರಿದ ಮನು ಭಾಕರ್ ಪದಕ ಬೇಟೆ: ಹುಟ್ಟೂರಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ

ಪ್ಯಾರಿಸ್ ಒಲಂಪಿಕ್ಸ್​ 2024ರ ಶೂಟಿಂಗ್ ಸ್ಪರ್ದೆಯಲ್ಲಿ ಎರಡು ಕಂಚಿನ ಪದಕ ಗೆದ್ದಿರುವ ಮನು ಭಾಕರ್ ಇದೀಗ ಭಾರತದ ಒಲಂಪಿಕ್ಸ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಇಂದು (ಜುಲೈ 30) ನಡೆದ 10 ಮೀಟರ್ ಏರ್ ಪಿಸ್ತೂಲ್ ಡಬಲ್ಸ್​ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಜತೆ ಸೇರಿ ಕಂಚಿನ ಪದಕ ಗೆಲ್ಲುವ ಮೂಲಕ ಮನು ಭಾಕರ್ ಒಲಂಪಿಕ್ಸ್​ನ ಒಂದೇ ಅವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಭಾನುವಾರ (ಜುಲೈ 28) ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್​ನಲ್ಲಿ ಅವರು ಮೊದಲ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದರು. 2021ರಲ್ಲಿ ನಡೆದ ಟೋಕಿಯೋ ಒಲಂಪಿಕ್ಸ್​ನಲ್ಲಿ ಪಿಸ್ತೂಲ್ ಕೈ ಕೊಟ್ಟ ಕಾರಣ ಪದಕ ಗೆಲ್ಲದೆ ನಿರಾಸೆ ಅನುಭವಿಸಿದ ಅವರು ಈ ಬಾರಿ ಎರಡು ಪದಕಗಳನ್ನು ಗೆಲ್ಲುವ ಮುಖೇನ ತಮ್ಮ ಒಲಂಪಿಕ್ಸ್ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಭಾರತಕ್ಕೆ ಎರಡು ಪದಕ ಗೆದ್ದುಕೊಟ್ಟ ಭಾಕರ್​​ಗೆ ದೇಶವ್ಯಾಪಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದ್ದು, ಅವರ ಹುಟ್ಟೂರಲ್ಲಿ ಸಂಭ್ರಮ, ಸಡಗರ ಮನೆಮಾಡಿದೆ.

ಮನು ಭಾಕರ್ ಹುಟ್ಟೂರಾದ ಹರಿಯಾಣದ ಜಜ್ಜರ್​ನಲ್ಲಿನ ಸಂಭ್ರಮಾಚರಣೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ  ವೈರಲ್ ಆಗುತ್ತಿದೆ. ಊರಿನ ಜನರು ತಮ್ಮ ಮಣ್ಣಿನ ಮಗಳ ಪದಕ ಬೇಟೆಯನ್ನು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಜಜ್ಜರ್​ನ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳ ಜತೆ ಸೇರಿ ಸ್ಥಳೀಯರು ಸಂಭ್ರಮಿಸಿದ್ದಾರೆ. ಮನು ಭಾಕರ್ ಪದಕ ಗೆಲ್ಲುತ್ತಿದ್ದಂತೆಯೇ ಊರಿನ ಮಹಿಳೆಯರು ಪರಸ್ಪರ ಬಣ್ಣ ಹಚ್ಚಿ, ಕುಣಿದು ಕುಪ್ಪಳಿಸಿದ್ದಾರೆ.

ಮನು ಭಾಕರ್​​ರ ಸಾಧನೆಯನ್ನು ಇಡೀ ದೇಶವೇ ಕೊಂಡಾಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕಾರಣಿಗಳು, ಸಿನಿಮಾ ತಾರೆಯರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಎರಡು ಪದಕಗಳನ್ನು ಗೆದ್ದಿರುವ ಮನು ಭಾಕರ್​ ಮುಂದೆ ನಡೆಯಲಿರುವ ಮಹಿಳೆಯರ 25 ಮೀ. ಶೂಟಿಂಗ್ ಸ್ಪರ್ಧೆಯಲ್ಲಿ ಮತ್ತೊಂದು ಪದಕ ತರಲು ಕಣ್ಣಿಟ್ಟಿದ್ದು, ಹ್ಯಾಟ್ರಿಕ್​ ಹೊಡೆಯಲು ಎದುರುನೋಡುತ್ತಿದ್ದಾರೆ,(ಏಜೆನ್ಸೀಸ್).