Manu Bhaker: ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಡಬಲ್ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಅವರನ್ನು ಪರಿಗಣಿಸದ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಹಾಗೂ ವ್ಯಾಪಕ ಆಕ್ರೋಶಗಳು ಕೇಳಿಬಂದಿವೆ. 12 ಸದಸ್ಯರ ಆಯ್ಕೆ ಸಮಿತಿಯು ಪ್ರಶಸ್ತಿಗೆ ಶಿಫಾರಸು ಮಾಡಿದ ಪಟ್ಟಿಯಲ್ಲಿ ಪದಕ ಗೆದ್ದ ಕ್ರೀಡಾಪಟು ಮನು ಭಾಕರ್ ಹೆಸರಿಲ್ಲ ಎಂಬುದು ಸದ್ಯ ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಬೆಳಗ್ಗೆ ನಿದ್ರೆಯಿಂದ ಏಳುವುದಿಲ್ಲವೆ?; ನಿಮಗಾಗಿಯೇ ಈ ಸಿಂಪಲ್ ಟಿಪ್ಸ್ | Health Tips
ಶೂಟಿಂಗ್‌ನಲ್ಲಿ ಐತಿಹಾಸಿಕ ಸಾಧನೆಗೈದ ಹೊರತಾಗಿಯೂ ತಮ್ಮ ಮಗಳ ಹೆಸರನ್ನು ಖೇಲ್ ರತ್ನ ಪ್ರಶಸ್ತಿ ಶಿಫಾರಸು ಪಟ್ಟಿಯಿಂದ ಹೊರಗಿಟ್ಟಿರುವುದನ್ನು ಖಂಡಿಸಿರುವ ಮನು ಭಾಕರ್ ತಂದೆ ರಾಮ್ ಕಿಶನ್ ಭಾಕರ್, ಸರ್ಕಾರದ ವಿರುದ್ಧ ಕಟುವಾಗಿ ಟೀಕಿಸಿದ್ದಾರೆ. ನಮ್ಮ ಮಗಳನ್ನು ಕ್ರೀಡೆಗೆ ಪ್ರೋತ್ಸಾಹಿಸಿದ್ದು ಮೊದಲು ನಮ್ಮ ತಪ್ಪು. ಅದರಲ್ಲೂ ಪ್ರತ್ಯೇಕವಾಗಿ ಶೂಟಿಂಗ್ ವಿಭಾಗಕ್ಕೆ ಸೇರಿಸಿದ್ದು ಪೋಷಕರಾಗಿ ನಾವು ಮಾಡಿದ ದೊಡ್ಡ ತಪ್ಪು ಎಂದು ಹೇಳಿದ್ದಾರೆ.
"ಪೋಷಕರಲ್ಲಿ ನಾನು ಮಾಡಿಕೊಳ್ಳುವ ಕಳಕಳಿ ಎಂದರೆ ನಿಮ್ಮ ಮಕ್ಕಳನ್ನು ದಯವಿಟ್ಟು ಕ್ರೀಡೆಗೆ ಸೇರಿಸಬೇಡಿ. ನಿಮಗೆ ಹಣ ಬೇಕಿದ್ದಲ್ಲಿ ಅವರನ್ನು ಕ್ರಿಕೆಟ್‌ಗೆ ಸೇರಿಸಿ ಮತ್ತು ಅಧಿಕಾರ ಬೇಕಾದರೆ ಐಎಎಸ್/ ಐಪಿಎಸ್ ಅಥವಾ ಯುಪಿಎಸ್ಸಿ ಆಕಾಂಕ್ಷಿಗಳನ್ನಾಗಿ ಮಾಡಿ. ಇವರು 2036ರ ಒಲಿಂಪಿಕ್ಸ್ ಆಯೋಜನೆ ಮಾಡುವುದರ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಅಷ್ಟಕ್ಕೂ ಮಕ್ಕಳನ್ನು ನಿರುತ್ಸಾಹಗೊಳಿಸುವುದಾದರೆ ಇದನ್ನು ಆಯೋಜಿಸಿ ಏನು ಪ್ರಯೋಜನ" ಎಂದು ಕಿಡಿಕಾರಿದ್ದಾರೆ.
"ನಿಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ. ಅವರನ್ನು ಐಎಎಸ್/ಐಪಿಎಸ್ ಅಥವಾ ಯುಪಿಎಸ್ಸಿ ಅಧಿಕಾರಿಗಳನ್ನಾಗಿ ಮಾಡಿ. ಆಗ ಖೇಲ್ ರತ್ನ ಪ್ರಶಸ್ತಿ ಯಾರಿಗೆ ಕೊಡಬೇಕು ಎಂಬ ನಿರ್ಧಾರ ಕೈಗೊಳ್ಳುವ ಅಧಿಕಾರ ಅವರಿಗಿರುತ್ತದೆ" ಎಂದು ಜಾಲತಾಣದಲ್ಲಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ,(ಏಜೆನ್ಸೀಸ್).