ಕ್ರೀಡೆ

ಭಾರತಕ್ಕೆ ಮತ್ತೊಂದು ಪದಕ ಗ್ಯಾರಂಟಿ! ಬಾಕ್ಸಿಂಗ್​ನಲ್ಲಿ ಸೆಮಿಫೈನಲ್ಸ್ ತಲುಪಿದ ಲವ್ಲೀನಾ ಬೊರ್ಗೊಹೈನ್

ಟೋಕಿಯೋ : ಬಾಕ್ಸಿಂಗ್​ ವೆಲ್ಟರ್ ಕ್ಯಾಟಗರಿಯಲ್ಲಿ ಭಾರತದ ಲವ್ಲೀನಾ ಬೊರ್ಗೊಹೈನ್ ಸೆಮಿಫೈನಲ್ಸ್​ ತಲುಪಿದ್ದು, ಟೋಕಿಯೋ ಒಲಿಂಪಿಕ್ಸ್​ನಲ್ಲಿ ದೇಶಕ್ಕೆ ಎರಡನೇ ಪದಕ ಗ್ಯಾರಂಟಿಯಾಗಿದೆ. ಇಂದು ನಡೆದ ಕ್ವಾರ್ಟರ್​ ಫೈನಲ್ಸ್​ ಪಂದ್ಯದಲ್ಲಿ ಲವ್ಲೀನಾ ಅವರು, ಚೀನಾದ ಚೆನ್ ನೈನ್-ಚಿನ್ ಅವರನ್ನು 4:1 ಸ್ಕೋರ್​ನಿಂದ ಮಣಿಸಿದ್ದಾರೆ.

ಬಾಕ್ಸಿಂಗ್​ ವೆಲ್ಟರ್​ (64-69 ಕೆಜಿ) ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ, ಮೊದಲ ರೌಂಡ್​ನಲ್ಲಿ ಐವರು ಜಡ್ಜ್​ಗಳಲ್ಲಿ ಮೂವರು ಲವ್ಲೀನಾ ಪರವಾಗಿ ತೀರ್ಪು ಕೊಟ್ಟ ಹಿನ್ನೆಲೆಯಲ್ಲಿ 3:2 ಸ್ಕೋರ್​ ಬಂತು. ಎರಡನೇ ರೌಂಡ್​ನಲ್ಲಿ ಸರ್ವಾನುಮತವಾಗಿ ಲವ್ಲೀನಾ ಪರ ತೀರ್ಪು ಸಿಕ್ಕರೆ, ಮೂರನೇ ಅಂತಿಮ ರೌಂಡ್​ನಲ್ಲಿ ಸ್ಪ್ಲಿಟ್​ ಡಿಸಿಷನ್​ನಲ್ಲಿ 4:1 ಸ್ಕೋರ್​ಅನ್ನು ಗಳಿಸಿದರು. ತನ್ಮೂಲಕ ವಿಜಯ ಸಾಧಿಸಿದ ಲವ್ಲೀನಾ, ಸೆಮಿಫೈನಲ್ಸ್​ ಪ್ರವೇಶಿಸಿದರು.

ಇದಕ್ಕೂ ಮುನ್ನ, ರೌಂಡ್​ ಆಫ್​ 16 ಪಂದ್ಯದಲ್ಲಿ ಜರ್ಮನಿಯ ನಾಡೀನ್ ಅಪೆಟ್ಸ್​ರನ್ನು ಮಂಗಳವಾರ 3:2 ಸ್ಕೋರ್​ನೊಂದಿಗೆ ಅವರು ಮಣಿಸಿದ್ದರು. ಇದೀಗ ಸೆಮಿಫೈನಲ್ಸ್​ನಲ್ಲಿ ಟರ್ಕಿಯ ಬುಸೆನಾಸ್​ ಸುರ್ಮೆನೆಲಿ ಅವರ ವಿರುದ್ಧ ಸೆಣೆಸಲಿರುವ ಲವ್ಲೀನಾಗೆ ಕಂಚಿನ ಪದಕವಂತೂ ಕಟ್ಟಿಟ್ಟ ಬುತ್ತಿ. ಇನ್ನು ಯಾವ ಪದಕ ಗಳಿಸುವಲ್ಲಿ ಯಶಸ್ವಿಯಾಗುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಅವರ ಈ ಐತಿಹಾಸಿಕ ಗೆಲುವಿನೊಂದಿಗೆ ಒಲಿಂಪಿಕ್ಸ್​ನಲ್ಲಿ ಬಾಕ್ಸಿಂಗ್​ನಲ್ಲಿ ಭಾರತಕ್ಕೆ ಪದಕವನ್ನು ತರುತ್ತಿರುವ ಮೂರನೇ ವ್ಯಕ್ತಿಯಾಗಿದ್ದಾರೆ, ಅಸ್ಸಾಂನ ಆಟಗಾರ್ತಿ ಲವ್ಲೀನಾ. ಮತ್ತು ಬಾಕ್ಸಿಂಗ್​ನಲ್ಲಿ ಪದಕ ಗೆಲ್ಲುವ ಎರಡನೇ ಮಹಿಳೆಯಾಗಿದ್ದಾರೆ. ಈವರೆಗೆ ಮುಂಚಿನ ವರ್ಷಗಳ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದಿರುವ ಬಾಕ್ಸರ್​ಗಳೆಂದರೆ, ಮೇರಿ ಕೋಂ ಮತ್ತು ವಿಜೇಂದರ್​ ಸಿಂಗ್.

ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಜುಲೈ 24 ರಂದು ವೇಯ್ಟ್​ಲಿಫ್ಟಿಂಗ್​ನಲ್ಲಿ ಮೀರಾಬಾಯಿ ಚಾನು ಅವರು ಭಾರತದ ಮೊದಲ ಬೆಳ್ಳಿ ಪದಕವನ್ನು ಗಳಿಸಿದ್ದರು. (ಏಜೆನ್ಸೀಸ್)