ಕ್ರೀಡೆ

ಕರ್ನಾಟಕದ ಪುರುಷೋತ್ತಮ್ ರೈ ಹೆಸರು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು

ಬೆಂಗಳೂರು: ಕರ್ನಾಟಕದ ಹಿರಿಯ ಅಥ್ಲೆಟಿಕ್ಸ್ ಕೋಚ್ ಪುರುಷೋತ್ತಮ್ ರೈ ಹೆಸರನ್ನು ಜೀವಮಾನ ಸಾಧನೆ ವಿಭಾಗದಲ್ಲಿ ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಒಳಗೊಂಡ 12 ಸದಸ್ಯರ ಆಯ್ಕೆ ಸಮಿತಿ ಮಂಗಳವಾರ, 5 ಮಂದಿ ಖೇಲ್‌ರತ್ನ ಪ್ರಶಸ್ತಿಗೆ, 29 ಮಂದಿ ಹೆಸರನ್ನು ಅರ್ಜುನ ಪ್ರಶಸ್ತಿಗೆ, 7 ಮಂದಿ ಹೆಸರನ್ನು ಜೀವಮಾನ ಸಾಧನೆ ವಿಭಾಗದಲ್ಲಿ ಹಾಗೂ 5 ಮಂದಿ ಹೆಸರನ್ನು ಸಾಮಾನ್ಯ ವಿಭಾಗದಲ್ಲಿ ದ್ರೋಣಾಚಾರ್ಯ ಪ್ರಶಸ್ತಿಗೆ ಕ್ರೀಡಾ ಸಚಿವಾಲಯಕ್ಕೆ ಶಿಫಾರಸು ಮಾಡಿದೆ. ಕರ್ನಾಟಕ ಹೆಸರಾಂತ ಅಥ್ಲೀಟ್‌ಗಳಿಗೆ ಪುರುಷೋತ್ತಮ್ ತರಬೇತಿ ನೀಡಿದ್ದಾರೆ. ರಾಜ್ಯದ ಜೂಡೆ ಫೆಲಿಕ್ಸ್ ದ್ರೋಣಾಚಾರ್ಯ ಪ್ರಶಸ್ತಿಗೆ ಹಾಗೂ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಅದಿತಿ ಅಶೋಕ್, ಅರ್ಜುನ ಪ್ರಶಸ್ತಿ ಪಟ್ಟಿಯಲ್ಲಿರುವ ಕರ್ನಾಟಕದ ಏಕೈಕ ಕ್ರೀಡಾಪಟುವಾಗಿದ್ದಾರೆ. ಕ್ರಿಕೆಟಿಗ ರೋಹಿತ್ ಶರ್ಮ, ಕುಸ್ತಿ ಪಟು ವಿನೇಶ್ ಪೋಗಟ್, ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ, ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್, ಪ್ಯಾರಾಲಂಪಿಕ್ ಮರಿಯಪ್ಪನ್ ತಂಗವೇಲು ಹೆಸರುಗಳನ್ನು ಖೇಲ್ ರತ್ನಗೆ ಶಿಫಾರಸು ಮಾಡಲಾಗಿದೆ.

ಕರೊನಾ ವೈರಸ್ ಭೀತಿಯಿಂದಾಗಿ ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭ ವರ್ಚುವಲ್ ರೂಪದಲ್ಲಿ ನಡೆಯುವ ಸಾಧ್ಯತೆ ಇದೆ. ಹಾಕಿ ದಿಗ್ಗಜ ಮೇಜರ್ ಧ್ಯಾನ್‌ಚಂದ್ ಅವರ ಜನ್ಮದಿನವಾದ ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಗುತ್ತದೆ ಮತ್ತು ಅದೇ ದಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡುವುದು ವಾಡಿಕೆಯಾಗಿದೆ. ಆದರೆ ಈ ಬಾರಿ ಕೇಂದ್ರ ಸರ್ಕಾರದ ಸೂಚನೆಯಂತೆ ಸಮಾರಂಭ ಆನ್‌ಲೈನ್ ಮೂಲಕ ನಡೆಯುವ ನಿರೀಕ್ಷೆ ಇದ್ದು, ಅದೇ ದಿನ ಬೆಳಗ್ಗೆ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟುಗಳ ಹೆಸರು ಅಧಿಕೃತವಾಗಿ ೋಷಣೆಯಾಗಲಿದೆ ಎಂದು ಕ್ರೀಡಾ ಸಚಿವಾಲಯದ ಮೂಲಗಳು ತಿಳಿಸಿವೆ. ಕರೊನಾ ಹಾವಳಿ ಮತ್ತು ಲಾಕ್‌ಡೌನ್‌ನಿಂದಾಗಿ ಈ ವರ್ಷ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಒಂದು ತಿಂಗಳು ತಡವಾಗಿ ಆರಂಭಗೊಂಡಿತ್ತು.