ಸುಮಿತ್ ನಗಾಲ್‌ಗೆ ಸ್ಟ್ಯಾನಿಸ್ಲಾಸ್ ವಾವ್ರಿಂಕಾ ಎದುರಾಳಿ

nagal
Published on

ಪರುಗ್ವೆ (ಚೆಕ್ ಗಣರಾಜ್ಯ): ಭಾರತದ ಅಗ್ರ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್, ಪರುಗ್ವೆ ಓಪನ್ ಟೆನಿಸ್ ಟೂರ್ನಿಯ ಎಂಟರಘಟ್ಟದ ಹೋರಾಟದಲ್ಲಿ ಮೂರು ಬಾರಿ ಗ್ರಾಂಡ್ ಸ್ಲಾಂ ವಿಜೇತ ಸ್ಟ್ಯಾನಿಸ್ಲಾಸ್ ವಾವ್ರಿಂಕಾ ಅವರನ್ನು ಎದುರಿಸಲಿದ್ದಾರೆ. 6ನೇ ಶ್ರೇಯಾಂಕಿತ ಹಾಗೂ ವಿಶ್ವ ನಂ.127 ಸುಮಿತ್ 2ನೇ ಸುತ್ತಿನ ಹೋರಾಟದಲ್ಲಿ ಸ್ಥಳೀಯ ಪ್ರತಿಭೆ ವಿಶ್ವ ನಂ.617 ಕಿರಿ ಲೆಹೆಚ್ಕಾ ಅವರನ್ನು 5-7, 7-6 (4), 6-3 ರಿಂದ 2 ಗಂಟೆ 21 ನಿಮಿಷಗಳ ಹೋರಾಟದಲ್ಲಿ ಮಣಿಸಿದರು. ಡಬಲ್ಸ್ ವಿಭಾಗದಲ್ಲಿ ದಿವಿಜ್ ಶರಣ್, ಎನ್ ಶ್ರೀರಾಮ್ ಬಾಲಾಜಿ ಎಂಟರಘಟ್ಟಕ್ಕೇರಿದ್ದಾರೆ.

ನಗಾಲ್ ಕಳೆದ ವರ್ಷ ಯುಎಸ್ ಓಪನ್‌ನಲ್ಲಿ ರೋಜರ್ ಫೆಡರರ್ ಅವರನ್ನು ಎದುರಿಸಿದ್ದರು. ಇದೀಗ ಮತ್ತೋರ್ವ ಬಲಿಷ್ಠ ಆಟಗಾರನ ಎದುರು ಸೆಣಸಾಟಕ್ಕೆ ಸಜ್ಜಾಗಿದ್ದಾರೆ. ವಾವ್ರಿಂಕಾ ಎರಡನೇ ಸುತ್ತಿನಲ್ಲಿ ಜರ್ಮನಿಯ ಅಸ್ಕರ್ ಓಟ್ಟೆ ಅವರನ್ನು 3-6, 7-5, 6-1 ರಿಂದ ಒಂದು ಗಂಟೆ 54 ನಿಮಿಷಗಳ ಹೋರಾಟದಲ್ಲಿ ಮಣಿಸಿದ್ದರು.

ಡಬಲ್ಸ್ ವಿಭಾಗದಲ್ಲಿ 2ನೇ ಶ್ರೇಯಾಂಕಿತ ಭಾರತದ ದಿವಿಜ್ ಶರಣ್- ನೆದರ್ಲೆಂರ್ಡ್ಸ್‌ನ ರಾಬಿನ್ ಹಾಸೆ ಜೋಡಿ 6-3, 6-2 ರಿಂದ ಜೊನ್ಸ್ ಫೋರ್ ತೆಕ್ ಹಾಗೂ ಮೈಕಲ್ ವಬೆನ್‌ಸ್ಕೈ ಜೋಡಿ ಎದುರು ಜಯ ದಾಖಲಿಸಿ ಎಂಟರಘಟ್ಟಕ್ಕೇರಿತು. ಭಾರತದ ಮತ್ತೋರ್ವ ಆಟಗಾರ ಎನ್.ಶ್ರೀರಾಮ್ ಬಾಲಾಜಿ ಹಾಗೂ ಬೆಲ್ಜಿಯಂನ ಕಿಮ್ಮರ್ ಕೊಪ್ಪೆಜಾನ್ಸ್ ಜೋಡಿ 2ನೇ ಸುತ್ತಿನಲ್ಲಿ 7-5, 4-6, 10-6 ರಿಂದ ಹುಗೊ ನೈಯ್ಸ ಜೋಡಿಯನ್ನು ಮಣಿಸಿ ಕ್ವಾರ್ಟರ್ ಫೈನಲ್‌ಗೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net