ಕ್ರೀಡೆ

ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್; ಕರ್ನಾಟಕಕ್ಕೆ ಮುಂಬೈ ಸವಾಲು,

ನವದೆಹಲಿ: ದೇಶೀಯ ಕ್ರಿಕೆಟ್‌ನ ಬಲಿಷ್ಠ ತಂಡಗಳಾದ ಹಾಲಿ ಚಾಂಪಿಯನ್ ಕರ್ನಾಟಕ ಹಾಗೂ ಮುಂಬೈ ತಂಡಗಳು ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಗುರುವಾರ ಮುಖಾಮುಖಿಯಾಗಲಿವೆ. ರನ್‌ಹೊಳೆಯನ್ನೇ ಹರಿಸುತ್ತಿರುವ ಯುವ ಆಟಗಾರರಾದ ದೇವದತ್ ಪಡಿಕಲ್ ಹಾಗೂ ಪೃಥ್ವಿ ಷಾ ನಡುವಿನ ಕದನ ಎಂದೇ ವಿಶ್ಲೇಷಿಸಲಾಗುತ್ತಿದೆ. ಪಾಲಂನ ಏರ್ ಫೋರ್ಸ್​ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಟಾಸ್ ಪ್ರಮುಖ ಪಾತ್ರವಹಿಸಲಿದೆ. ಎರಡನೇ ಇನಿಂಗ್ಸ್ ಬ್ಯಾಟಿಂಗ್ ಮಾಡುವ ತಂಡಕ್ಕೆ ಹೆಚ್ಚು ಅನುಕೂಲವಿದೆ. ಹೀಗಾಗಿ ಟಾಸ್ ಜಯಿಸಿದ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳಲಿದೆ.

ಆತ್ಮವಿಶ್ವಾಸದಲ್ಲಿ ಹಾಲಿ ಚಾಂಪಿಯನ್: ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಸತತ 4 ಶತಕ ಸಿಡಿಸಿ ದಾಖಲೆ ನಿರ್ಮಿಸಿರುವ ದೇವದತ್ ಪಡಿಕಲ್ ಹಾಗೂ ಟೂರ್ನಿಯಲ್ಲಿ 3 ಶತಕ ಸಿಡಿಸಿರುವ ನಾಯಕ ಆರ್. ಸಮರ್ಥ್ ಜೋಡಿ ಟೂರ್ನಿಯುದ್ದಕ್ಕೂ ಎದುರಾಳಿ ತಂಡಗಳ ಮೇಲೆ ಸವಾರಿ ಮಾಡುತ್ತ ಬಂದಿದೆ. ಸತತ 6 ಇನಿಂಗ್ಸ್‌ಗಳಲ್ಲಿ 50ಕ್ಕಿಂತ ಹೆಚ್ಚು ರನ್ ಪೇರಿಸಿರುವ ಪಡಿಕಲ್ ರಾಷ್ಟ್ರೀಯ ತಂಡದ ಕದ ತಟ್ಟುತ್ತಿದ್ದಾರೆ. ಟೂರ್ನಿಯಲ್ಲಿ ದೇವದತ್ ಪಡಿಕಲ್ 673 ರನ್ ಗಳಿಸಿದ್ದರೆ, ಸಮರ್ಥ್ 605 ರನ್ ಕಲೆಹಾಕಿದ್ದಾರೆ. ಅನುಭವಿಗಳಾದ ಮನೀಷ್ ಪಾಂಡೆ, ಕೆ.ಗೌತಮ್, ಆಲ್ರೌಂಡರ್ ಶ್ರೇಯಸ್ ಗೋಪಾಲ್, ವೇಗಿಗಳಾದ ಪ್ರಸಿದ್ಧ್ ಕೃಷ್ಣ, ರೋನಿತ್ ಮೋರೆ ಒಳಗೊಂಡ ಕರ್ನಾಟಕ ತಂಡ ಉತ್ತಮ ನಿರ್ವಹಣೆ ಮುಂದುವರಿಸುವ ವಿಶ್ವಾಸದಲ್ಲಿದೆ.

ಮುಂಬೈಗೆ ಪೃಥ್ವಿ ಷಾ ಬಲ: ಕಳಪೆ ಫಾರ್ಮ್‌ನಿಂದಾಗಿ ರಾಷ್ಟ್ರೀಯ ತಂಡದಿಂದ ಹೊರಬಿದ್ದಿರುವ ಯುವ ಆಟಗಾರ ಪೃಥ್ವಿ ಷಾ, ದೇಶೀಯ ಏಕದಿನ ಟೂರ್ನಿಯಲ್ಲಿ ಭರ್ಜರಿ ಲಯ ಕಂಡುಕೊಂಡಿದ್ದಾರೆ. ಪುದುಚೇರಿ ವಿರುದ್ಧ ದ್ವಿಶತಕ (227) ಸಿಡಿಸಿದ್ದ ಪೃಥ್ವಿ ಷಾ, ಮತ್ತೆರಡು ಶತಕಗಳ ಸಹಿತ 589 ರನ್ ಕಲೆಹಾಕಿದ್ದಾರೆ. ಮುಂಬೈ ತಂಡ 2018-19ನೇ ಸಾಲಿನಲ್ಲಿ ಕಡೇ ಬಾರಿಗೆ ಪ್ರಶಸ್ತಿ ಜಯಿಸಿತ್ತು.

ಗುಜರಾತ್‌ಗೆ ಯುಪಿ ಎದುರಾಳಿ: ಮಾಜಿ ಚಾಂಪಿಯನ್ ಗುಜರಾತ್ ಹಾಗೂ ಉತ್ತರ ಪ್ರದೇಶ ತಂಡಗಳು ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ ದಿನದ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಎದುರಾಗಲಿವೆ.

ಪಂದ್ಯಗಳು ಆರಂಭ: ಬೆಳಗ್ಗೆ 9.00