ಮುಂಬೈ: ಪ್ರಸಕ್ತ ಸಾಲಿನ ಐಪಿಎಲ್ ನಿರ್ಣಾಯಕ ಘಟ್ಟವನ್ನು ತಲುಪಿದ್ದು, ಈಗಾಗಲೇ ಹಲವು ತಂಡಗಳು ಪ್ಲೇಆಫ್ ಪ್ರವೇಶಿಸುವ ಕನಸು ಕಾಣುತ್ತಿವೆ. ಆದರೆ ಇಂಗ್ಲೆಂಡ್ನ ವೇಗದ ಬೌಲರ್ ಜೋಪ್ರಾ ಆರ್ಚರ್ ಇನ್ನುಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ಹಿನ್ನಡೆಯಾಗಿದೆ.
ಫಿಟ್ನೆಸ್ ಸಮಸ್ಯೆಯನ್ನು ಎದುರಿಸುತ್ತಿರುವ ಜೋಪ್ರಾ ಆರ್ಚರ್ ಐಪಿಎಲ್ನಿಂದ ಹೊರಬಿದ್ದಿದ್ದು, ಅವರ ಸ್ಥಾನಕ್ಕೆ ಇಂಗ್ಲೆಂಡ್ ಆಲ್ರೌಂಡರ್ ಕ್ರಿಸ್ ಜೋರ್ಡಾನ್ ಮುಂಬೈ ತಂಡವನ್ನು ಸೇರಿಕೊಂಡಿದ್ದಾರೆ. ಕಳೆದೆರಡು ವರ್ಷಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆರ್ಚರ್, ಮೇಲಿಂದ ಮೇಲೆ ಗಾಯಗೊಳ್ಳುತ್ತಿದ್ದಾರೆ.
ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಲು ವಿಫಲರಾಗಿದ್ದ ಆರ್ಚರ್, ಮುಂಬೈ ಪರ 5 ಪಂದ್ಯಗಳ ಮೂಲಕ ಕೇವಲ ಎರಡು ವಿಕೆಟ್ ಕಿತ್ತಿದ್ದಾರೆ. ಇನ್ನು, ತಂಡವನ್ನು ಸೇರಿಕೊಂಡಿರುವ ಜೋರ್ಡಾನ್ ಸಿಎಸ್ಕೆ, ಪಂಜಾಬ್ ಕಿಂಗ್ಸ್, ಆರ್ಸಿಬಿ, ಮತ್ತು ಹೈದರಾಬಾದ್ ತಂಡದ ಪರವಾಗಿ ಆಡಿದ್ದಾರೆ. ಇದುವರೆಗೆ 28 ಐಪಿಎಲ್ ಪಂದ್ಯಗಳನ್ನು ಆಡಿದ್ದು, ಒಟ್ಟು 27 ವಿಕೆಟ್ ಪಡೆದಿದ್ದಾರೆ.(ಏಜೆನ್ಸೀಸ್)