Jitesh Sharma : ಐಪಿಎಲ್ 2025ರ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಭರ್ಜರಿ ಪ್ರದರ್ಶನ ನೀಡಿದೆ. ಮಂಗಳವಾರ (ಮೇ 27) ನಡೆದ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ (LSG) ತಂಡವನ್ನು ಸೋಲಿಸಿತು. ಈ ಗೆಲುವಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನಕ್ಕೇರಿದೆ. ಇದರೊಂದಿಗೆ ಕ್ವಾಲಿಫೈಯರ್-1 ರಲ್ಲಿ ಸ್ಥಾನ ಪಡೆದುಕೊಂಡಿರುವ ಆರ್‌ಸಿಬಿ, 29 ರಂದು ಮುಲ್ಲನ್ಪುರದಲ್ಲಿ ನಡೆಯಲಿರುವ ಕ್ವಾಲಿಫೈಯರ್ 1 ರಲ್ಲಿ ಟೇಬಲ್-ಟಾಪರ್ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಉತ್ತರ ಪ್ರದೇಶದ ಲಖನೌ ಏಕನಾ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ತಂಡ ನಾಯಕ ರಿಷಭ್ ಪಂತ್ (ಅಜೇಯ 118 ರನ್, 61 ಎಸೆತ, 11 ಬೌಂಡರಿ, 8 ಸಿಕ್ಸರ್) ಭರ್ಜರಿ ಶತಕ, ಮಿಚೆಲ್ ಮಾರ್ಷ್ (67 ರನ್, 37 ಎಸೆತ, 4 ಬೌಂಡರಿ, 5 ಸಿಕ್ಸರ್) ಅವರ ಅರ್ಧಶತಕ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ 227 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಆರ್‌ಸಿಬಿ ಬೌಲರ್‌ಗಳಲ್ಲಿ ನುವಾನ್ ತುಷಾರ, ಭುವನೇಶ್ವರ್ ಕುಮಾರ್ ಮತ್ತು ರೊಮಾರಿಯೊ ಶೆಫರ್ಡ್ ತಲಾ ಒಂದು ವಿಕೆಟ್ ಪಡೆದರು.
ಬೃಹತ್ ಗುರಿ ಬೆನ್ನತ್ತಿದ ಆರ್‌ಸಿಬಿ, ಜಿತೇಶ್ ಶರ್ಮಾ (ಅಜೇಯ 85 ರನ್, 33 ಎಸೆತ 8 ಬೌಂಡರಿ, 6 ಸಿಕ್ಸರ್), ವಿರಾಟ್ ಕೊಹ್ಲಿ (54 ರನ್, 30 ಎಸೆತ, 10 ಬೌಂಡರಿ) ಮತ್ತು ಮಾಯಾಂಕ್ ಅಗರ್ವಾಲ್ (ಅಜೇಯ 41 ರನ್, 23 ಎಸೆತಗಳಲ್ಲಿ 5 ಬೌಂಡರಿ) ಭರ್ಜರಿ ಬ್ಯಾಟಿಂಗ್ ಪ್ರದರ್ಶನದೊಂದಿಗೆ 18.4 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಿತು. ಲಖನೌ ಬೌಲರ್‌ಗಳಲ್ಲಿ ವಿಲಿಯಂ ಒ ರೂರ್ಕ್ ಎರಡು ವಿಕೆಟ್ ಪಡೆದರೆ, ಆಕಾಶ್ ಮಹಾರಾಜ್ ಸಿಂಗ್ ಮತ್ತು ಆವೇಶ್ ಖಾನ್ ತಲಾ ಒಂದು ವಿಕೆಟ್ ಪಡೆದರು.
ಲಖನೌ ವಿರುದ್ಧದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಆರ್‌ಸಿಬಿ ಹಂಗಾಮಿ ನಾಯಕ ಜಿತೇಶ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ನಂತರ ಮಾತನಾಡಿದ ಜಿತೇಶ್, ಏನು ಹೇಳಬೇಕೆಂದು ತೋಚುತ್ತಿಲ್ಲ. ಇಂಥಾ ಒಂದು ಇನ್ನಿಂಗ್ಸ್ ಆಡಿದ್ದೇನೆ ಅಂದರೆ ನನ್ನಿಂದಲೇ ನಂಬೋಕೆ ಆಗುತ್ತಿಲ್ಲ. ಈ ಪಂದ್ಯದಲ್ಲಿ ವಿರಾಟ್ ಭಾಯ್, ಔಟಾದ ನಂತರ, ಪಂದ್ಯವನ್ನು ಸಾಧ್ಯವಾದಷ್ಟು ಕೊನೆಯವರೆಗೂ ಕೊಂಡೊಯ್ಯುವ ಬಗ್ಗೆ ಯೋಚಿಸಿದೆ. ನಮ್ಮ ಮಾರ್ಗದರ್ಶಕ ಹಾಗೂ ಗುರು ದಿನೇಶ್ (ಕಾರ್ತಿಕ್) ಅಣ್ಣ ಕೂಡ ಅದೇ ಮಾತನ್ನು ಹೇಳಿದರು ಎಂದು ಜಿತೇಶ್ ಹೇಳಿದರು. ನಿಮ್ಮ ಸಾಮರ್ಥ್ಯದ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸ ಇದೆ ಮತ್ತು ಯಾವುದೇ ಪರಿಸ್ಥಿತಿಯಲ್ಲಿ ನೀವು ಆಟವನ್ನು ಮುಗಿಸಬಹುದು ಎಂದು ದಿನೇಶ್ ಅಣ್ಣ ಹೇಳಿದರು. ಈ ಒಂದು ಮಾತು ಸ್ಫೂರ್ತಿ ನೀಡಿತು ಎಂದರು ಜಿತೇಶ್.
ರಾಯಲ್ ಚಾಲೆಂಜರ್ಸ್ ಬೆಂಗಳೂರಿನಂತಹ ದೊಡ್ಡ ಫ್ರಾಂಚೈಸಿಯನ್ನು ಮುನ್ನಡೆಸುವ ಒತ್ತಡವನ್ನು ನಾನು ಆನಂದಿಸುತ್ತೇನೆ. ಈ ಆಟಗಾರರನ್ನು (ವಿರಾಟ್, ಕೃನಾಲ್, ಭುವಿ ಅವರಂತಹ) ನೋಡಿದಾಗ ನಾನು ಅವರೊಂದಿಗೆ ಆಡುತ್ತಿರುವುದು ಸಂತೋಷವಾಗುತ್ತದೆ. ನಾವು ಈ ಕ್ಷಣವನ್ನು ಆನಂದಿಸುತ್ತೇವೆ. ಈ ಆಟದಲ್ಲಿ ನಮಗೆ ಯಾವುದೇ ಆವೇಗ ಸಿಕ್ಕರೂ, ನಾವು ಅದನ್ನು (ಮುಂದಿನ ಪಂದ್ಯಕ್ಕೆ) ಮುಂದಕ್ಕೆ ಕೊಂಡೊಯ್ಯುತ್ತೇವೆ ಎಂದು ಜಿತೇಶ್ ಹೇಳಿದರು.
ಇನ್ನು ಆರ್‌ಸಿಬಿ ಗೆಲುವಿನಲ್ಲಿ ರಜತ್ ಪಾಟಿದಾರ್ ಅವರ ಪಾತ್ರವನ್ನು ಜಿತೇಶ್ ಶರ್ಮಾ ಶ್ಲಾಘಿಸಿದರು. ಈ ಋತುವಿನಲ್ಲಿ ತವರಿನಿಂದಾಚೆಗಿನ ಮೈದಾನದಲ್ಲಿ ಗೆಲುವನ್ನು ಮುಂದುವರಿಸಲು ನನಗೆ ಈ ಜವಾಬ್ದಾರಿಯನ್ನು ನೀಡಿದ್ದಕ್ಕಾಗಿ ರಜತ್ ಅವರಿಗೆ ನಾನು ಕ್ರೆಡಿಟ್ ನೀಡಬೇಕು. ಜೋಶ್ ಹ್ಯಾಜಲ್‌ವುಡ್ ಫಿಟ್ ಆಗಿದ್ದಾರೆ. ನಮ್ಮ ತಂಡದಲ್ಲಿ ನಮಗೆ ಸಾಕಷ್ಟು ವಿಶ್ವಾಸಾರ್ಹ ಆಟಗಾರರಿದ್ದಾರೆ. ನೀವು ಯಾವುದೇ ಆಟಗಾರರನ್ನು ನೋಡಿದರೂ, ಅವರೆಲ್ಲರೂ ಪಂದ್ಯ ವಿಜೇತರು. ನಾವು ಒಂದು ಪಂದ್ಯದಲ್ಲಿ 3-4 ವಿಕೆಟ್‌ಗಳನ್ನು ಕಳೆದುಕೊಂಡರೂ, ನಾವು ಎಂದಿಗೂ ಚಿಂತಿಸುವುದಿಲ್ಲ ಎಂದು ಜಿತೇಶ್ ಹೇಳಿದರು.
ಅಂದಹಾಗೆ, ಈ ಋತುವಿನಲ್ಲಿ ಆರ್‌ಸಿಬಿ ತವರು ಮೈದಾನದಿಂದಾಚೆಗೆ ಉತ್ತಮ ದಾಖಲೆಯನ್ನು ಹೊಂದಿದೆ. ಒಂದು ಪಂದ್ಯವನ್ನು ಹೊರತುಪಡಿಸಿ, ಆರ್‌ಸಿಬಿ ತವರಿನಿಂದಾಚೆಗೆ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದಿದೆ. ಎಸ್ಆರ್ಎಚ್ ವಿರುದ್ದ ಲಖನೌ ಕ್ರೀಡಾಂಗಣದಲ್ಲಿ ಆರ್‌ಸಿಬಿ ಸೋಲುಂಡಿತು. (ಏಜೆನ್ಸೀಸ್)