ನವದೆಹಲಿ: ಟಿ20 ವಿಶ್ವಕಪ್ ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದ್ದು, ಕ್ರೀಡಾಭಿಮಾನಿಗಳು ಪ್ರತಿಷ್ಠಿತ ಟೂರ್ನಿಯನ್ನು ಕಣ್ತುಂಬಿಕೊಳ್ಳಲು ಎದುರು ನೋಡುತ್ತಿದ್ದಾರೆ. ಆದರೆ, ಟೂರ್ನಿ ಆರಂಭದ ಮೊದಲ ವಾರದಲ್ಲೇ ಭಾರತ ಹಾಗೂ ಪಾಕಿಸ್ತಾನದ ನಡುವೆ ಪಂದ್ಯ ನಡೆಯಲಿದ್ದು, ಹೈವೋಲ್ಟೇಜ್ ಕದನವನ್ನು ನೋಡಲು ಉಭಯ ದೇಶಗಳ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಈ ಎರಡು ತಂಡಗಳ ಕಾಳಗದಲ್ಲಿ ಯಾವ ತಂಡ ಗೆಲ್ಲಲಿದೆ ಎಂಬ ಚರ್ಚೆಗಳು ಈಗಾಗಲೇ ಶುರುವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗರು ನೀಡುತ್ತಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಭಾರತ ಪಾಕಿಸ್ತಾನ ನಡುವಿನ ಪಂದ್ಯದ ಕುರಿತಂತೆ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಭಾರತದ ಅಭಿಮಾನಿಗಳು ಇದಕ್ಕೆ ಬೆಂಬಲ ಸೂಚಿಸಿದ್ದಾರೆ.
ಟೂರ್ನಿಯ ವಿಚಾರಕ್ಕೆ ಬರುವುದಾದರೆ ಟೀಮ್ ಇಂಡಿಯಾ ಉತ್ತಮವಾಗಿ ಕಾಣುತ್ತಿದ್ದು, ನ್ಯೂಯಾರ್ಕ್ನಲ್ಲಿ ಪಾಕಿಸ್ತಾನದ ವಿರುದ್ಧ ಆಡಲಿದ್ದಾರೆ. ರೋಹಿತ್ನಿಜವಾಗಿಯೂ ತಂಡವನ್ನು ಚೆನ್ನಾಗಿ ಮುನ್ನಡೆಸುತ್ತಿದ್ದಾರೆ. ತಂಡ ಸಂಯೋಜನೆ ವಿಚಾರವಾಗಿ ಅವರಿಗೆ ಡ್ರೆಸ್ಸಿಂಗ್ ರೂಮ್ನಲ್ಲಿ ವಿಶೇಷ ಗೌರವವನ್ನು ಪಡೆಯುತ್ತಿದ್ದಾರೆ.
ಇದನ್ನೂ ಓದಿ: ದಕ್ಷಿಣ ಭಾರತದಲ್ಲಿ ಆ ರೀತಿಯ ಸಿನಿಮಾಗಳಿಗೆ ಹೆಚ್ಚಿನ ಬೇಡಿಕೆ ಇಲ್ಲ, ಇನ್ನೂ ಸಮಯ ಬೇಕಾಗುತ್ತದೆ: ನಟಿ ಖುಷ್ಬೂ ಸುಂದರ್
ನಾವು ಪಾಕಿಸ್ತಾನದ ವಿರುದ್ಧ ಸಾಕಷ್ಟು ಪಂದ್ಯಗಳನ್ನು ಆಡಿದ್ದೇವೆ. ದೇಶವನ್ನು ಪ್ರತಿನಿಧಿಸುವಾಗ, ನಿಮ್ಮ ಅತ್ಯುತ್ತಮವಾದುದನ್ನು ನೀಡಲು ಪ್ರಯತ್ನಿಸುತ್ತೀರಿ. ನಾನು ಯುವರಾಜ್, ಆರ್ಪಿ ಸಿಂಗ್ ಪಾಕಿಸ್ತಾನದ ವಿರುದ್ಧ ಸಾಕಷ್ಟು ಪಂದ್ಯಗಳನ್ನು ಆಡಿದ್ದೇವೆ. ಆದರೆ, ನಮಗೆ ತ್ರಿವರ್ಣ ಧ್ವಜವನ್ನು ನೋಡಿದಾಗ, ಬೇಕಿದ್ದರೆ ಪ್ರಾಣ ಬಿಡುತ್ತೇವ. ಆದರೆ, ಪಾಕಿಸ್ತಾನದ ವಿರುದ್ಧ ಮಾತ್ರ ಸೋಲುವುದಿಲ್ಲ ಎಂದು ಸುರೇಶ್ ರೈನಾ ಹೇಳಿದ್ದಾರೆ.
ಇತ್ತ ಸುರೇಶ್ ರೈನಾ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಅನೇಕ ಕ್ರೀಡಾಭಿಮಾನಿಗಳು ಇವರ ಹೇಳಿಕೆಯನ್ನು ಬೆಂಬಲಿಸಿ ಕಮೆಂಟ್ ಹಾಕಿದ್ದಾರೆ. ಐಸಿಸಿ ನಡೆಸುವ ಪ್ರತಿಷ್ಠಿತ ಟೂರ್ನಿಗಳಲ್ಲಿ ಪಾಕಿಸ್ತಾನ ವಿರುದ್ಧ ಉತ್ತಮ ದಾಖಲೆ ಹೊಂದಿರುವ ಟೀಮ್ ಇಂಡಿಯಾ ಜೂನ್ 09 ರಂದು ನಡೆಯುವ ಚುಟುಕು ವಿಶ್ವಸಮರದಲ್ಲಿ ತನ್ನ ಗೆಲುವಿನ ಲಯವನ್ನು ಮುಂದುವರೆಸಲು ಸಜ್ಜಾಗಿದೆ.