ಕ್ರೀಡೆ

ವಕೀಲೆಯನ್ನು ವಿವಾಹವಾದ ಕ್ರಿಕೆಟಿಗ ಜೈದೇವ್ ಉನಾದ್ಕತ್

ರಾಜ್‌ಕೋಟ್: ಟೀಮ್ ಇಂಡಿಯಾ ಪರ ಆಡಿರುವ ಸೌರಾಷ್ಟ್ರದ ಎಡಗೈ ವೇಗಿ ಜೈದೇವ್ ಉನಾದ್ಕತ್, ವಕೀಲೆ ರಿನ್ನಿ ಜತೆಗೆ ಮಂಗಳವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುವ ಉನಾದ್ಕತ್, ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಇದನ್ನು ಪ್ರಕಟಿಸಿದ್ದಾರೆ.

ಕಳೆದ ವರ್ಷ ಮಾರ್ಚ್‌ನಲ್ಲಿ ಸೌರಾಷ್ಟ್ರ ತಂಡ ತಮ್ಮ ಸಾರಥ್ಯದಲ್ಲಿ ಚೊಚ್ಚಲ ರಣಜಿ ಟ್ರೋಫಿ ಜಯಿಸಿದ ಬೆನ್ನಲ್ಲೇ ಉನಾದ್ಕತ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 29 ವರ್ಷದ ಉನಾದ್ಕತ್ ಭಾರತ ಪರ 1 ಟೆಸ್ಟ್, 7 ಏಕದಿನ, 10 ಟಿ20 ಪಂದ್ಯ ಆಡಿದ್ದಾರೆ.

ರೆಸಾರ್ಟ್‌ನಲ್ಲಿ ಖಾಸಗಿಯಾಗಿ ನಡೆದ ಸಮಾರಂಭದಲ್ಲಿ ಉಭಯ ಕುಟುಂಬದ ಸದಸ್ಯರು ಮತ್ತು ಆಪ್ತರು ಮಾತ್ರ ಹಾಜರಿದ್ದರು. ಜೈದೇವ್ ಉನಾದ್ಕತ್ ಐಪಿಎಲ್‌ನಲ್ಲಿ ಈ ಹಿಂದೆ ಆರ್‌ಸಿಬಿ ತಂಡದ ಪರವಾಗಿಯೂ ಆಡಿದ್ದರು. ಇತ್ತೀಚೆಗೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯಲ್ಲಿ ಸೌರಾಷ್ಟ್ರ ತಂಡವನ್ನು ಮುನ್ನಡೆಸಿದ್ದ ಉನಾದ್ಕತ್ 6 ವಿಕೆಟ್ ಕಬಳಿಸಿದ್ದರು. ಆದರೆ ತಂಡವನ್ನು ನಾಕೌಟ್‌ಗೇರಿಸಲು ಯಶಸ್ವಿಯಾಗಿರಲಿಲ್ಲ.