More

    87 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ರಣಜಿ ಟ್ರೋಫಿ ನಡೆಯಲ್ಲ

    ನವದೆಹಲಿ: ದೇಶೀಯ ಕ್ರಿಕೆಟ್‌ನಲ್ಲಿ ತನ್ನದೇ ಪ್ರತಿಷ್ಠೆ ಉಳಿಸಿಕೊಂಡಿರುವ ರಣಜಿ ಟ್ರೋಫಿ ಟೂರ್ನಿ 87 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ರದ್ದುಗೊಂಡಿದೆ. ಕರೊನಾ ವೈರಸ್ ಹಾವಳಿಯಿಂದಾಗಿ ಕಳೆದ 10 ತಿಂಗಳಿಂದ ದೇಶೀಯ ಕ್ರಿಕೆಟ್ ವೇಳಾಪಟ್ಟಿಯೇ ಅಸ್ತವ್ಯಸ್ಥಗೊಂಡಿದ್ದು, ಸಮಯದ ಅಭಾವದಿಂದಾಗಿ 2020-21ರ ಸಾಲಿನ ದೇಶೀಯ ಕ್ರಿಕೆಟ್ ಋತುವಿನಿಂದ ರಣಜಿ ಟ್ರೋಫಿಗೆ ಕೊಕ್ ನೀಡಲಾಗಿದೆ. 1934-35ರಿಂದ ಸತತವಾಗಿ 86 ವರ್ಷಗಳ ಕಾಲ ರಣಜಿ ಟ್ರೋಫಿ ಆಯೋಜಿಸುತ್ತಾ ಬರಲಾಗಿತ್ತು. ರಣಜಿ ಟ್ರೋಫಿ ರದ್ದುಗೊಂಡ ಹಿನ್ನೆಲೆಯಲ್ಲಿ ದೇಶೀಯ ಕ್ರಿಕೆಟ್ ಆಟಗಾರರ ಆದಾಯಕ್ಕೆ ಹೊಡೆತ ಬೀಳುವ ಭೀತಿ ಇದ್ದರೂ, ಇದಕ್ಕೆ ಪರಿಹಾರ ನೀಡುವ ಯೋಜನೆಯನ್ನು ಬಿಸಿಸಿಐ ಹಮ್ಮಿಕೊಂಡಿರುವುದು ಸಮಾಧಾನಕರ ವಿಷಯವಾಗಿದೆ.

    ‘ವಿಜಯ್ ಹಜಾರೆ ಟ್ರೊಫಿ, ಸೀನಿಯರ್ ಮಹಿಳಾ ಏಕದಿನ, ವಿನೂ ಮಂಕಡ್ ಟ್ರೋಫಿ ಟೂರ್ನಿಗಳನ್ನು ಆಯೋಜಿಸಲು ಮಂಡಳಿ ಉತ್ಸುಕವಾಗಿದೆ. ರಾಜ್ಯ ಕ್ರಿಕೆಟ್ ಸಂಸ್ಥೆಗಳ ಅಭಿಪ್ರಾಯದ ಮೇರೆಗೆ ಈ ನಿರ್ಧಾರಕೊಳ್ಳಲಾಗಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ, ರಾಜ್ಯ ಸಂಸ್ಥೆಗಳಿಗೆ ಬರೆದಿರುವ ಇ-ಮೇಲ್‌ನಲ್ಲಿ ತಿಳಿಸಿದ್ದಾರೆ. ಸದ್ಯ ನಡೆಯುತ್ತಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಗಾಗಿ ತೆಗೆದುಕೊಂಡಿರುವ ಕೆಲವೊಂದು ಕ್ರಮಗಳನ್ನೇ ಬಿಸಿಸಿಐ, ವಿಜಯ್ ಹಜಾರೆ ಟ್ರೋಫಿಗೂ ತೆಗೆದುಕೊಳ್ಳಲಿದೆ. ಅಲ್ಲದೆ ಅದೇ ಮಾದರಿಯ ಗುಂಪುಗಳು ಮತ್ತು ಬಯೋ-ಬಬಲ್ ವ್ಯವಸ್ಥೆಗಳು ಇರಲಿವೆ ಎನ್ನಲಾಗಿದೆ. ಕರೊನಾ ಕಾಲದಲ್ಲಿ ದೇಶೀಯ ಕ್ರಿಕೆಟ್ ಟೂರ್ನಿ ಹಮ್ಮಿಕೊಳ್ಳುವುದೇ ದೊಡ್ಡ ಸವಾಲಾಗಿದೆ ಎಂದು ಷಾ ಪತ್ರದಲ್ಲಿ ತಿಳಿಸಿದ್ದಾರೆ.

    2019-20ನೇ ಸಾಲಿನ ರಣಜಿ ಟ್ರೋಫಿ ಫೈನಲ್ ಪಂದ್ಯದ ಬಳಿಕ ದೇಶೀಯ ಕ್ರಿಕೆಟ್ ಚಟುವಟಿಕೆಯೇ ಸಂಪೂರ್ಣ ಸ್ಥಬ್ದಗೊಂಡಿತ್ತು. ಕರೊನಾ ಹಾವಳಿಯ ಆರಂಭಿಕ ದಿನಗಳಲ್ಲಿ ರಣಜಿ ಚಾಂಪಿಯನ್ ಹಾಗೂ ಶೇಷ ಭಾರತ ತಂಡಗಳ ನಡುವೆ ನಡೆಯಬೇಕಾಗಿದ್ದ ಸಾಂಪ್ರದಾಯಿಕ ಇರಾನಿ ಕಪ್ ಪಂದ್ಯವನ್ನು ರದ್ದುಗೊಳಿಸಲಾಗಿತ್ತು. ಬಳಿಕ ಇದೇ ತಿಂಗಳು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಆಯೋಜಿಸುವ ಮೂಲಕ ಮತ್ತೆ ದೇಶೀಯ ಕ್ರಿಕೆಟ್‌ಗೆ ಚಾಲನೆ ನೀಡಲಾಯಿತು.

    *ರಾಜ್ಯ ಸಂಸ್ಥೆಗಳ ಅಭಿಪ್ರಾಯಕ್ಕೆ ಮಣೆ
    ಸಾಂಪ್ರದಾಯಿಕ ರಣಜಿ ಟ್ರೋಫಿ ಟೂರ್ನಿಯನ್ನು ಬಿಸಿಸಿಐ ರದ್ದುಗೊಳಿಸಿದರೂ, ಇದು ಸರ್ವಾನುಮತದಿಂದ ತೆಗೆದುಕೊಳ್ಳಲಾಗಿರುವ ನಿರ್ಧಾರವಾಗಿದೆ. ದೇಶೀಯ ಕ್ರಿಕೆಟ್ ಟೂರ್ನಿಗಳ ಆಯೋಜನೆ ಕುರಿತಂತೆ ಬಿಸಿಸಿಐ, ರಾಜ್ಯ ಕ್ರಿಕೆಟ್ ಸಂಸ್ಥೆಗಳ ಅಭಿಪ್ರಾಯ ಕೇಳಿತ್ತು. ಬಹುತೇಕ ರಾಜ್ಯ ಸಂಸ್ಥೆಗಳು ರಣಜಿ ಟ್ರೋಫಿ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿಗಿಂತ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಗೆ ಮಣೆ ಹಾಕಿದ ಹಿನ್ನೆಲೆಯಲ್ಲಿ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ. ವಿಜಯ್ ಹಜಾರೆ ಟ್ರೋಫಿ ಅಲ್ಲದೆ, 19 ವಯೋಮಿತಿ ರಾಷ್ಟ್ರೀಯ ಏಕದಿನ ಟೂರ್ನಿ ವಿನೂ ಮಂಕಡ್ ಟ್ರೋಫಿ ಹಾಗೂ ಮಹಿಳಾ ರಾಷ್ಟ್ರೀಯ ಏಕದಿನ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸಲು ಬಿಸಿಸಿಐ ಮುಂದಾಗಿದೆ.

    *ಎಲ್ಲ ವಿಭಾಗಕ್ಕೂ ಮಣೆ ಹಾಕಿ ಬಿಸಿಸಿಐ
    ರಣಜಿ ಟ್ರೋಫಿ ಆಯೋಜನೆಗೆ ಕನಿಷ್ಠ ಮೂರು ತಿಂಗಳ ಸಮಯವಕಾಶ ಬೇಕು. ಆದರೆ ಕರೊನಾ ವೈರಸ್ ಹಾವಳಿಯಿಂದಾಗಿ ತಡವಾಗಿ ಆರಂಭಗೊಂಡಿರುವ ಈ ವರ್ಷದ ದೇಶೀಯ ಕ್ರಿಕೆಟ್ ಋತುವಿನಲ್ಲಿ ಅಷ್ಟು ಸಮಯ ಬಾಕಿ ಉಳಿದಿಲ್ಲ. ಯಾಕೆಂದರೆ ಐಪಿಎಲ್ 14ನೇ ಆವೃತ್ತಿ ಈ ಬಾರಿ ಮಾರ್ಚ್ ಕೊನೆಯ ವಾರವೇ ಆರಂಭಗೊಳ್ಳುವ ನಿರೀಕ್ಷೆ ಇದೆ. ಮುಂದಿನ 2 ತಿಂಗಳ ಅವಧಿಯಲ್ಲಿ ರಣಜಿ ಆಯೋಜಿಸುವುದು ಕಾರ್ಯಸಾಧುವಲ್ಲ. ಹೀಗಾಗಿ ಸಮಯದ ಅಭಾವವೊಂದೇ ರಣಜಿ ಟ್ರೋಫಿ ರದ್ದುಗೊಳ್ಳಲು ಪ್ರಮುಖ ಕಾರಣ ಎನ್ನಲಾಗಿದೆ. ಇದರಿಂದ ಸಿಕ್ಕ ಅಲ್ಪ ಅವಧಿಯಲ್ಲೇ ಮೂರು (ಸೀನಿಯರ್, ಜೂನಿಯರ್, ಮಹಿಳಾ) ವಿಭಾಗಕ್ಕೂ ಬಿಸಿಸಿಐ ಮಣೆ ಹಾಕಿದೆ. ಯುಎಇಯಲ್ಲಿ ನಡೆದ ಐಪಿಎಲ್ ವೇಳೆ ಮಹಿಳಾ ಟಿ20 ಚಾಲೆಂಜ್ ಆಯೋಜಿಸಲಾಗಿತ್ತು. ಇದೀಗ ಮಹಿಳಾ ಸೀನಿಯರ್ ವಿಭಾಗದಲ್ಲೂ ಟೂರ್ನಿ ಆಯೋಜಿಸುವ ಮೂಲಕ ಮಹಿಳಾ ಕ್ರಿಕೆಟ್‌ಗೂ ಬಿಸಿಸಿಐ ಮಣೆ ಹಾಕಿದೆ. ಇನ್ನು ವಿನೂ ಮಂಕಡ್ ಟೂರ್ನಿ ಆಯೋಜಿಸಿ ಜೂನಿಯರ್ ಕ್ರಿಕೆಟಿಗರಿಗೂ ಬಿಸಿಸಿಐ ಆಡುವ ಅವಕಾಶ ಕಲ್ಪಿಸಿದೆ.

    *ದೇಶೀಯ ಕ್ರಿಕೆಟಿಗರ ನಷ್ಟಕ್ಕೆ ಪರಿಹಾರ
    ದೇಶೀಯ ಕ್ರಿಕೆಟ್ ಆಟಗಾರರಿಗೆ ಹೆಚ್ಚಿನ ಲಾಭ ಸಿಗುವ ದೃಷ್ಟಿಯಿಂದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಷಾ ಈ ಬಾರಿ ರಣಜಿ ಟ್ರೋಫಿ ಆಯೋಜನೆಯತ್ತ ಹೆಚ್ಚಿನ ಒಲವು ತೋರಿದ್ದರು. ರಣಜಿ ಟ್ರೋಫಿಯ ಪಂದ್ಯವೊಂದರಿಂದ ಪ್ರತಿ ಆಟಗಾರನಿಗೆ ಸರಾಸರಿ 1.50 ಲಕ್ಷ ರೂಪಾಯಿ ಆದಾಯ ದಕ್ಕುತ್ತದೆ. ಆದರೆ ಏಕದಿನ ಮಾದರಿಯ ವಿಜಯ್ ಹಜಾರೆ ಟ್ರೋಫಿಯ ಪ್ರತಿ ಪಂದ್ಯದಿಂದ ಆಟಗಾರರಿಗೆ ಇಷ್ಟು ಮೊತ್ತದ ವೇತನ ಲಭಿಸುವುದಿಲ್ಲ. ಇದರಿಂದಾಗಿ ಪ್ರತಿ ಋತುವಿನಲ್ಲಿ ರಣಜಿ ಟ್ರೋಫಿಯ ಲೀಗ್ ಹಂತದಿಂದಲೇ ಸರಾಸರಿ 12-13 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದ ಆಟಗಾರರಿಗೆ ನಷ್ಟ ಉಂಟಾಗುತ್ತದೆ. ಹೀಗಾಗಿ ಬಿಸಿಸಿಐ, ದೇಶೀಯ ಕ್ರಿಕೆಟಿಗರ ಈ ನಷ್ಟವನ್ನು ತಪ್ಪಿಸುವ ಸಲುವಾಗಿ ಅವರಿಗೆ ಸೂಕ್ತ ಪರಿಹಾರ ನೀಡಲು ನಿರ್ಧರಿಸಿದೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿಯೇ ಈ ಬಗ್ಗೆ ತೀರ್ಮಾನಿಸಲಾಗಿತ್ತು. ಇದರಿಂದಾಗಿ ಹಾಲಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲೂ ಪ್ರತಿ ಪಂದ್ಯಕ್ಕೆ ತಂಡಗಳಿಗೆ ಭಾಗವಹಿಸುವಿಕೆ ಸಂಭಾವನೆಯನ್ನೂ 50ರಿಂದ 75 ಸಾವಿರ ರೂ.ಗಳಿಗೆ ಏರಿಸಲಾಗಿತ್ತು. ದೇಶೀಯ ಕ್ರಿಕೆಟಿಗರಿಗೆ ಆರ್ಥಿಕವಾಗಿ ಯಾವುದೇ ರೀತಿಯ ನಷ್ಟವಾಗದಂತೆ ನೋಡಿಕೊಳ್ಳಲಾಗುವುದು ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ತಿಳಿಸಿದ್ದಾರೆ.

    *ಇಂಥ ಕಠಿಣ ಸ್ಥಿತಿಯಲ್ಲಿ ಬಿಸಿಸಿಐ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹ. ಸಾಧ್ಯವಾದರೆ, ವಿಜಯ್ ಹಜಾರೆ ಟ್ರೋಫಿ ಹಾಗೂ ರಣಜಿ ಟ್ರೋಫಿ ಎರಡನ್ನೂ ನಡೆಸುವಂತೆ ಕೆಎಸ್‌ಸಿಎ ವತಿಯಿಂದ ಕೇಳಿಕೊಳ್ಳಲಾಗಿತ್ತು. ರಣಜಿ ಟ್ರೋಫಿ ನಡೆಯದಿರುವುದು ಬೇಸರ ತಂದಿದ್ದರೂ, ಸದ್ಯದ ಪರಿಸ್ಥಿತಿಯಲ್ಲಿ ಇದು ಅನಿವಾರ್ಯ. ಇಂಥ ಸಮಯದಲ್ಲಿ ಬಿಸಿಸಿಐಗೆ ಬೆಂಬಲವಾಗಿ ನಿಲ್ಲಬೇಕಾಗುತ್ತದೆ.
    ವಿನಯ್ ಮೃತ್ಯುಂಜಯ, ಕೆಎಸ್‌ಸಿಎ ಖಜಾಂಚಿ

    *ಆಟಗಾರರು, ಆಯ್ಕೆ ಸಮಿತಿ, ರಾಜ್ಯ ಸಂಸ್ಥೆಗಳಿಂದ ಪ್ರತಿಕ್ರಿಯೆ ಪಡೆಯಲಾಗಿತ್ತು. ಕರೊನಾ ವೈರಸ್ ಭೀತಿಯಿಂದ ಈಗಾಗಲೇ 2020 ಸಂಪೂರ್ಣ ವ್ಯರ್ಥಗೊಂಡಿದೆ. ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಎರಡು ರಣಜಿ ಟ್ರೋಫಿ ಆಯೋಜಿಸುವ ಬದಲಿಗೆ ಸೀಮಿತ ಓವರ್ ಟೂರ್ನಿ ನಡೆಸುವುದೇ ಸೂಕ್ತ ಎನಿಸಿತು. ಹೀಗಾಗಿ ಮಹಿಳಾ ಹಾಗೂ ಜೂನಿಯರ್ ವಿಭಾಗವನ್ನು ಪರಿಗಣಿಸಲಾಯಿತು. ಮುಂದಿನ ವರ್ಷ ನಡೆಯಲಿರುವ ಮಹಿಳಾ ವಿಶ್ವಕಪ್ ಮತ್ತು 19 ವಯೋಮಿತಿ ವಿಶ್ವಕಪ್ ದೃಷ್ಟಿಯಿಂದ ಇದು ಮಹತ್ವ ಪಡೆದಿದೆ.
    ಅರುಣ್ ಧುಮಾಲ್, ಬಿಸಿಸಿಐ ಖಜಾಂಚಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts