ಕ್ರೀಡೆ

ವಿಂಡೀಸ್​ ದಿಗ್ಗಜ ಕರ್ಟ್ನಿ ವಾಲ್ಶ್​ ಪ್ರಕಾರ, ಆಂಡರ್​ಸನ್​ ದಾಖಲೆಯನ್ನು ಮುರಿಯಬಲ್ಲ ಭಾರತದ ವೇಗಿ ಯಾರು ಗೊತ್ತೇ?

ನವದೆಹಲಿ: ಇಂಗ್ಲೆಂಡ್​ ವೇಗಿ ಜೇಮ್ಸ್​ ಆಂಡರ್​ಸನ್​ ಅವರು ಇತ್ತೀಚೆಗೆ ಟೆಸ್ಟ್​ ಕ್ರಿಕೆಟ್​ನಲ್ಲಿ 600 ವಿಕೆಟ್​ ಕಬಳಿಸಿದ ವಿಶ್ವದ ಮೊದಲ ವೇಗಿ ಎಂಬ ಐತಿಹಾಸಿಕ ಸಾಧನೆ ಮಾಡಿದ್ದರು. ಸದ್ಯಕ್ಕೆ ಅವರ ದಾಖಲೆ ಸುರಕ್ಷಿತವೆನಿಸಿದ್ದು, ಮುಂಬರುವ ದಿನಗಳಲ್ಲಿ ಭಾರತದ ವೇಗಿಯೊಬ್ಬರು ಈ ದಾಖಲೆಯನ್ನು ಮುರಿಯಬಲ್ಲರು ಎಂದು ವೆಸ್ಟ್​ ಇಂಡೀಸ್​ ವೇಗದ ಬೌಲಿಂಗ್​ ದಿಗ್ಗಜ ಕರ್ಟ್ನಿ ವಾಲ್ಶ್​ ಭವಿಷ್ಯ ನುಡಿದಿದ್ದಾರೆ.

ಟೆಸ್ಟ್​ ಕ್ರಿಕೆಟ್​ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ದಾಖಲೆ ಈ ಹಿಂದೆ ಭಾರತದ ವೇಗದ ಬೌಲಿಂಗ್​ ಆಲ್ರೌಂಡರ್​ ಕಪಿಲ್​ ದೇವ್​ (434 ವಿಕೆಟ್​)ಅವರ ಹೆಸರಿನಲ್ಲಿಯೇ ಇತ್ತು. ಬಳಿಕ ಕರ್ಟ್ನಿ ವಾಲ್ಶ್​ ಅವರೇ ಈ ದಾಖಲೆಯನ್ನು ಮುರಿದು ಟೆಸ್ಟ್​ ಕ್ರಿಕೆಟ್​ನಲ್ಲಿ 500 ವಿಕೆಟ್​ ಪೂರೈಸಿದ ಮೊದಲ ವೇಗಿ ಎನಿಸಿದ್ದರು. ವಾಲ್ಶ್​ (519) ದಾಖಲೆಯನ್ನು ಬಳಿಕ ಆಸ್ಟ್ರೇಲಿಯಾದ ವೇಗಿ ಗ್ಲೆನ್​ ಮೆಕ್​ಗ್ರಾಥ್​ (563) ಮುರಿದಿದ್ದರೆ, ಮೆಕ್​ಗ್ರಾಥ್​ ದಾಖಲೆಯನ್ನು ಮುರಿದು ಮುನ್ನಗ್ಗಿದ ಆಂಡರ್​ಸನ್​ ಅವರು ಈಗ 600 ವಿಕೆಟ್​ ಪೂರೈಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಅವರ ಸಹ-ಆಟಗಾರರೇ ಆಗಿರುವ ಸ್ಟುವರ್ಟ್​ ಬ್ರಾಡ್​ (514) ಇತ್ತೀಚೆಗೆ 500 ವಿಕೆಟ್​ ಪೂರೈಸಿದ ಸಾಧನೆ ಮಾಡಿದ್ದರು.

ಭಾರತದ ವೇಗದ ಬೌಲರ್​ ಜಸ್​ಪ್ರೀತ್​ ಬುಮ್ರಾ ಅವರಿಗೂ ಆಂಡರ್​ಸನ್​ ಅವರ ಎತ್ತರಕ್ಕೆ ಬೆಳೆಯಬಲ್ಲ ಸಾಮರ್ಥ್ಯ ಇದೆ ಎಂದು ಕರ್ಟ್ನಿ ವಾಲ್ಶ್​ ಅವರು ಅಭಿಪ್ರಾಯಪಟ್ಟಿದ್ದಾರೆ. 2018ರಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿರುವ ಬುಮ್ರಾ ಉತ್ತಮವಾದ ಯಶಸ್ಸನ್ನೇ ಕಂಡಿದ್ದಾರೆ 26 ವರ್ಷದ ಅವರು ಇದುವರೆಗೆ ಆಡಿರುವ 14 ಟೆಸ್ಟ್​ಗಳಲ್ಲಿ 68 ವಿಕೆಟ್​ ಕಬಳಿಸಿದ್ದಾರೆ.

'ಆಂಡರ್​ಸನ್​ ಮತ್ತು ಬ್ರಾಡ್​ ಅವರ ಎತ್ತರಕ್ಕೆ ಏರಬಲ್ಲ ಸಾಮರ್ಥ್ಯ ಬುಮ್ರಾ ಅವರಿಗೆ ಇದೆ. ಅವರು ಅತ್ಯಂತ ಕೌಶಲಯುಕ್ತ ಬೌಲರ್​. ಅವರು ವಿಶಿಷ್ಟ ರನ್​ಅಪ್​ ಹೊಂದಿದ್ದು, ಕೆಲವರು ಅದನ್ನು ಬದಲಾಯಿಸಬೇಕೆಂದು ಬಯಸಿದ್ದಾರೆ. ಆದರೆ ಅವರಿಗೆ ಅದುವೇ ಉತ್ತಮವಾದುದು. ಅವರು ಫಿಟ್​ ಆಗಿ ಉಳಿದರೆ, ಎಲ್ಲ 3 ಕ್ರಿಕೆಟ್​ ಪ್ರಕಾರದಲ್ಲೂ ಅಮೋಘ ದಾಖಲೆ ಬರೆಯಬಲ್ಲರು. ಅವರು ಎಷ್ಟು ಸಮಯದವರೆಗೆ ಯಶಸ್ಸಿನ ಹಸಿವನ್ನು ಉಳಿಸಿಕೊಳ್ಳುತ್ತಾರೆ ಎಂಬುದು ಕೂಡ ಮುಖ್ಯವಾಗುತ್ತದೆ' ಎಂದು ವಾಲ್ಶ್​ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಇದೇ ವೇಳೆ ಆಂಡರ್​ಸನ್​ ಅವರ ಸಾಧನೆಯನ್ನು ಪ್ರಶಂಸಿಸಿರುವ ವಾಲ್ಶ್​, 'ನಿಜಕ್ಕೂ ಇದೊಂದು ಅಮೋಘವಾದ ಸಾಧನೆ. ಟೆಸ್ಟ್ ಕ್ರಿಕೆಟ್​ನಲ್ಲಿ 500-600 ವಿಕೆಟ್​ಗಳನ್ನು ಕಬಳಿಸಲು ವೇಗದ ಬೌಲರ್​ಗಳು ಭಾರಿ ಪರಿಶ್ರಮ ವಹಿಸುವುದು ಅಗತ್ಯ. ಇಷ್ಟು ವರ್ಷಗಳ ಕಠಿಣ ಪರಿಶ್ರಮಕ್ಕೆ ಅವರಿಗೆ ಪ್ರತಿಫಲ ದೊರೆತಿದೆ. ಅವರು ಈ ಸಾಧನೆಗೆ ನಿಜಕ್ಕೂ ಅರ್ಹರು. ಅವರು ಇನ್ನಷ್ಟು ಸಮಯ ಆಡಿ 700 ವಿಕೆಟ್​ ಪೂರೈಸಲು ಬಯಸಿದ್ದಾರೆ ಎಂಬುದು ಇನ್ನೂ ವಿಶೇಷವಾದುದು' ಎಂದು ಹೇಳಿದ್ದಾರೆ.