ದುಬೈ: ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಾರ್ಚ್ 02ರಂದು ನಡೆಯಲಿರುವ ಭಾರತ (Team India) ಹಾಗೂ ನ್ಯೂಜಿಲೆಂಡ್ (NewZealand) ನಡುವಿನ ಚಾಂಪಿಯನ್ಸ್ ಟ್ರೋಫಿ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಈಗಾಗಲೇ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿರುವ ಭಾರತ, ಕಿವೀಸ್ ವಿರುದ್ಧ ಗೆದ್ದು ಲೀಗ್ ಹಂತವನ್ನು ಗೆಲುವಿನೊಂದಿಗೆ ಕೊನೆಗೊಳಿಸುವ ಬಯಕೆ ಹೊಂದಿದ್ದು, ಈ ನಿಟ್ಟಿನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದೆ.
ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ (Team India) ದೊಡ್ಡ ಶಾಕ್ ಒಂದು ಎದುರಾಗಿದ್ದು, ನಾಯಕ ರೋಹಿತ್ ಶರ್ಮ ಗಾಯಕ್ಕೆ ತುತ್ತಾಗಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದರು. ಕೆಲವು ಓವರ್‌ಗಳ ಕಾಲ ಆಟದಿಂದ ಹೊರಗುಳಿದಿದ್ದರು. ಅದಾದ ನಂತರವೂ ಮತ್ತೆ ಮೈದಾನಕ್ಕೆ ಬಂದರು ಕೂಡ ರೋಹಿತ್ ಹೆಚ್ಚು ಫಿಟ್ ಆಗಿ ಕಾಣಲಿಲ್ಲ. ಇದೀಗ ಅಭ್ಯಾಸದಲ್ಲಿ ತೊಡಗಿಸಿಕೊಳ್ಳದೇ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ರೋಹಿತ್ ಗಾಯದ ಕುರಿತು ಟೀಮ್ ಇಂಡಿಯಾ (Team India) ಸಹಾಯಕ ಕೋಚ್ ರಿಯಾನ್ ಟೆನ್ ಡೋಸ್ಚೇಟ್ ಮಾತನಾಡಿದ್ದಾರೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಹಾಯಕ ಕೋಚ್ ರಿಯಾನ್ ಟೆನ್ ಡೋಸ್ಚೇಟ್, ಗಾಯದಿಂದ ಬಳಲುತ್ತಿರುವ ರೋಹಿತ್ ಶರ್ಮ ಅದನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದು, ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮೊದಲು ಗಾಯದಿಂದ ಬಳಲಿದ್ದ ರೋಹಿತ್ ಶರ್ಮ ಅದನ್ನು ಹೇಗೆ ಉತ್ತಮವಾಗಿ ನಿರ್ವಹಿಸಬೇಕೆಂದು ತಿಳಿದಿದ್ದು, ಪಂದ್ಯದ ದಿನ ಸ್ಪಷ್ಟ ಚಿತ್ರಣ ಹೊರಬೀಳಲಿದೆ ಎಂದು ಹೇಳಿದ್ದಾರೆ.
ಗಾಯದಿಂದ ಚೇತರಿಸಿಕೊಂಡಿರುವ ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅಭ್ಯಾಸ ಆರಂಭಿಸಿದ್ದಾರೆ. ಒಂದು ವೇಳೆ, ಅವರ ಸ್ಥಾನದಲ್ಲಿ ವಾಷಿಂಗ್ಟನ್ ಸುಂದರ್ ಅಥವಾ ರಿಷಭ್ ಪಂತ್ ಸ್ಥಾನ ಪಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಲ್ಲದೇ, ರೋಹಿತ್ ಮರಳುವ ಸಾಧ್ಯತೆಯೂ ಇದ್ದು, ಅಂತಿಮವಾಗಿ ಪಂದ್ಯ ಶುರುವಾಗುವುದಕ್ಕೂ ಮುನ್ನ ಸ್ಪಷ್ಟ ಚಿತ್ರಣ ಹೊರಬೀಳಲಿದೆ.