ನವದೆಹಲಿ: ಇತ್ತೀಚೆಗಷ್ಟೇ ನಡೆದ ಸಂದರ್ಶನವೊಂದರಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮ ಕುರಿತು ಒಂದಷ್ಟು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡ ಟಿ20 ಸ್ಪೆಷಲಿಸ್ಟ್ ರಿಷಬ್ ಪಂತ್, ತಂಡದ ನಾಯಕನಾಗಿ ರೋಹಿತ್ ಮೈದಾನದ ಹೊರಗೆ ಇತರರೊಂದಿಗೆ ಮಾತನಾಡುವ ಭಾಷೆ ನನಗೆ ನಿಜವಾಗಲು ಅರ್ಥವಾಗಿಲ್ಲ. ಅದನ್ನು ಅರ್ಥ ಮಾಡಿಕೊಳ್ಳುವುದೇ ಬಹಳ ಕಷ್ಟವಾಯಿತು ಎಂದಿದ್ದಾರೆ.
"ಪಂದ್ಯದ ವೇಳೆ ನಮಗೆ ರೋಹಿತ್ ಹೇಳುವ ಮಾತುಗಳು ಸೇರಿದಂತೆ ನಡೆಸುವ ಸಂಭಾಷಣೆಗಳು ಚೆನ್ನಾಗಿ ಅರ್ಥವಾಗುತ್ತಿತ್ತು. ಆದ್ರೆ, ಅವರು ಆಫ್ ದಿ ಫೀಲ್ಡ್ ಹೋದರೆ ಅದೇನು ಮಾತನಾಡುತ್ತಿದ್ದರೋ, ಏನು ಹೇಳ್ತಿದ್ದರೋ ನಿಜಕ್ಕೂ ಗೊತ್ತಾಗುತ್ತಿರಲಿಲ್ಲ. ಯಾಕಂದ್ರೆ, ಅದು ಅದ್ಯಾವುದೋ ಬೇರೆ ಭಾಷೆಯಂತೆ ಅನಿಸಿದ್ದು ನಿಜ. ಆನ್ಫೀಲ್ಡ್ ಏನೇ ಹೇಳಿದ್ರು ಅರ್ಥೈಸಿಕೊಳ್ಳಬಲ್ಲೆ. ಆದ್ರೆ, ಹೊರಗೆ ಒಂದು ಪದವು ತಿಳಿಯುತ್ತಿರಲಿಲ್ಲ" ಎಂದರು.
"ಹೆಡ್ ಕೋಚ್ ಆಗಿದ್ದ ರವಿಶಾಸ್ತ್ರಿ ಅವರು ಅಂದು ನಮಗೆ ಒಳ್ಳೆಯ ಸ್ವಾತಂತ್ರ ಕೊಟ್ಟಿದ್ದರು. ನಾನು ಮೈದಾನದಲ್ಲಿ ಬಹಳ ಆರಾಮದಾಯಕವಾಗಿ ಇರಲು ಅವರೇ ಕಾರಣರಾಗಿದ್ದರು. ಆಟದ ಬಗ್ಗೆ ಮುಕ್ತವಾಗಿ ಮಾತನಾಡುವ ಅವಕಾಶ ಕಲ್ಪಿಸಿಕೊಟ್ಟರು. ನಾನು ಆಫ್ ಸ್ಪಿನ್ನರ್‌ಗಳ ವಿರುದ್ಧ ಬ್ಯಾಟಿಂಗ್ ಮಾಡಲು ಹೆಣಗಾಡುತ್ತಿದ್ದೆ. ಆಗ ಅವರು ನೀನು ರಿವರ್ಸ್ ಸ್ವೀಪ್ ಆಡಲು ಶುರು ಮಾಡು ಎಂದು ಒಂದೊಳ್ಳೆ ಸಲಹೆ ನೀಡಿದರು. ಇಂದಿಗೂ ಅವರೊಂದಿಗೆ ಒಳ್ಳೆಯ ಸಂಬಂಧವಿದೆ" ಎಂದು ರಿಷಬ್ ಹೇಳಿಕೊಂಡಿದ್ದಾರೆ,(ಏಜೆನ್ಸೀಸ್).