

ಶಿವಮೊಗ್ಗ: ಆತ್ಮಹತ್ಯೆ ಮಾಡಿಕೊಂಡ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ರೂ. ಬಿಡುಗಡೆ ಮಾಡದಿದ್ದರೆ ಜೈಲ್‌ಬರೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ರಾಷ್ಟ್ರಭಕ್ತರ ಬಳಗದ ಮುಖಂಡ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದರು.
ತಳ ಸಮುದಾಯದ ಅಭಿವೃದ್ಧಿಗೆ ನಿಗದಿಪಡಿಸಿದ್ದ ಹಣದ ದುರುಪಯೋಗವನ್ನು ಬಯಲಿಗೆಳೆದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಆತನ ಕುಟುಂಬ ತೀವ್ರ ಸಂಕಷ್ಟದಲ್ಲಿದೆ. ರಾಜ್ಯ ಸರ್ಕಾರ ತಾನು ಘೋಷಿಸಿದಂತೆ 25 ಲಕ್ಷ ರೂ. ಬಿಡುಗಡೆ ಮಾಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹಾದೇವಪ್ಪ ಅವರಿಗೆ ಈ ಹಿಂದೆ ನಾನು ಮಾತುಕತೆ ನಡೆಸಿದ್ದೆ. ಅವರು ಸಿಎಂ ಜತೆ ಮಾತುಕತೆ ನಡೆಸಿ 10 ದಿನದೊಳಗೆ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ. ನಾವು ಇನ್ನೂ ಮೂರ್ನಾಲ್ಕು ದಿನ ಕಾಯುತ್ತೇವೆ. ನಂತರ ಹಣ ಬಿಡುಗಡೆ ಮಾಡದಿದ್ದರೆ ಸೆ.14ರಂದು 5 ಲಕ್ಷ ರೂ. ಅನ್ನು ಚಂದ್ರಶೇಖರನ್ ಕುಟುಂಬಕ್ಕೆ ನೀಡುತ್ತೇವೆ. ಸೆ.20ರೊಳಗೆ ಹಣ ಬಿಡುಗಡೆ ಮಾಡದಿದ್ದರೆ ಜೈಲ್ ಬರೋ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಷ್ಟ್ರಭಕ್ತರ ಬಳಗದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು ನಮ್ಮನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿ ನಂತರ ಬಿಡುಗಡೆ ಮಾಡಿದರೆ ನಾವು ಅದನ್ನು ಒಪ್ಪುವುದಿಲ್ಲ. ಜೈಲಿಗೆ ಹಾಕಬೇಕೆಂದು ಒತ್ತಾಯಿಸುತ್ತೇವೆ ಎಂದರು.