ಕ್ರೀಡೆ

ಇಂದಿನ ಈ ಕೆಟ್ಟ ಪರಿಸ್ಥಿತಿಗೆ ಅಂದು ತೋರಿದ ನಿರ್ಲಕ್ಷ್ಯವೇ ಕಾರಣ! CSK ತಪ್ಪು ಎತ್ತಿಹಿಡಿದ 'ಬಜ್ಜಿ'

CSK: ಐಪಿಎಲ್​ 18ನೇ ಆವೃತ್ತಿಯಲ್ಲಿ ಯಾರೂ ಊಹಿಸದ, ಬಯಸದ ಅತ್ಯಂತ ಕೆಟ್ಟ ಪ್ರದರ್ಶನವನ್ನು ಐದು ಬಾರಿ ಚಾಂಪಿಯನ್ಸ್ ತಂಡ ತೋರಿದೆ. ಇಲ್ಲಿಯವರೆಗೂ ನಡೆದಿರುವ ಐಪಿಎಲ್​ ಆವೃತ್ತಿಗಳಲ್ಲಿ ಈ ವರ್ಷ ನೀಡಿರುವ ಪ್ರದರ್ಶನ ತೀರ ತಳಮಟ್ಟದಲ್ಲಿದ್ದು, ಪ್ರಥಮ ಬಾರಿಗೆ ಅಂಕಪಟ್ಟಿಯಲ್ಲಿ ಕೆಲವೇ ಕೆಲವು ಪಂದ್ಯ ಗೆದ್ದು, ಕಡಿಮೆ ಅಂಕಗಳನ್ನು ಪಡೆದು ಕೊನೆ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ನಿನ್ನೆಯ (ಏ.30) ಪಂಜಾಬ್ ವಿರುದ್ಧದ ಪಂದ್ಯ ಸೋತ ಬಳಿಕ 18ನೇ ಆವೃತ್ತಿಯ ಪ್ಲೇಆಫ್​ ರೇಸ್​ನಿಂದ ಇದೀಗ ಸಿಎಸ್​ಕೆ ಅಧಿಕೃತವಾಗಿ ಹೊರಬಿದ್ದಿದೆ.

ರುತುರಾಜ್ ಗಾಯಕ್ವಾಡ್ ಅನುಪಸ್ಥಿತಿಯಲ್ಲಿ ತಂಡವನ್ನು ಮತ್ತೊಮ್ಮೆ ನಾಯಕನಾಗಿ ಮುನ್ನಡೆಸಿದ ಮಹೇಂದ್ರ ಸಿಂಗ್ ಧೋನಿ ಕೂಡ ತಮ್ಮ ತಂಡವನ್ನು ಗೆಲುವಿನ ಲಯಕ್ಕೆ ಕರೆತರಲು ತೀರ ಪರದಾಡಿದರು. ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದಿದ್ದು ಬಿಟ್ಟರೆ ನಂತರ ಐದು ಸತತ ಸೋಲುಗಳನ್ನು ಸಿಎಸ್​ಕೆ ಅನುಭವಿಸಿತು. ಸತತವಾಗಿ ಉತ್ತಮ ಆಲ್​​ರೌಂಡ್ ಪ್ರದರ್ಶನ ನೀಡಲು ವಿಫಲವಾದ ಧೋನಿ ಪಡೆ, ಇದೀಗ ಅಧಿಕೃತವಾಗಿ ಲೀಗ್​ನಿಂದ ಹೊರಬಿದ್ದಿದೆ. ಸದ್ಯ ಈ ಸಂಗತಿ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರನ್ನು ಕೆರಳಿಸಿದೆ.

ಪ್ಲೇಆಫ್​ ಎಂಟ್ರಿಯನ್ನು ತಮ್ಮ ಎಡವಟ್ಟಿನಿಂದಲೇ ದೂರ ಮಾಡಿಕೊಂಡ ಸಿಎಸ್​ಕೆ ಕುರಿತು ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್​ ಹರ್ಭಜನ್ ಸಿಂಗ್ ಕಿಡಿಕಾರಿದ್ದಾರೆ. "ಈ ಬಾರಿಯ ಐಪಿಎಲ್​ ಲೀಗ್​ನಲ್ಲಿ ಹೊರಬಿದ್ದ ಮೊದಲ ತಂಡವಾಗಿ ಸಿಎಸ್​ಕೆ ಹೊರಹೊಮ್ಮಿದೆ. ಇದೆಕ್ಕೆಲ್ಲ ಫ್ರಾಂಚೈಸಿಯೇ ನೇರ ಹೊಣೆ. ಜನರಿಗೆ ಧೋನಿ ತಮ್ಮ ಜೇಬಿನಲ್ಲಿ ಗೆಲುವಿನ ಇಂಜೆಕ್ಷನ್​ ಇಟ್ಟುಕೊಂಡಿದ್ದಾರೆ ಎಂಬ ಭಾವನೆ ಇದೆ. ಅಸಲಿಗೆ ಅದು ತಪ್ಪು. ಪ್ರಸ್ತುತ ಸಿಎಸ್​ಕೆ ತಂಡಕ್ಕೆ ಐಪಿಎಲ್​ ಟೈಟಲ್ ಗೆಲ್ಲುವ ಸಾಮರ್ಥ್ಯವಿಲ್ಲ" ಎಂದರು.

"ಸಿಎಸ್​ಕೆ ತಂಡದಲ್ಲಿರುವ ಆಟಗಾರರು ಅಷ್ಟು ಉತ್ತಮವಾಗಿಲ್ಲ. ಅವರಿಂದ ಐಪಿಎಲ್​ ಟೈಟಲ್​ ಗೆಲ್ಲುವ ಮಟ್ಟಿಗಿನ ಪ್ರದರ್ಶನ ನೀಡಲು ಸಾಧ್ಯವಿರಲಿಲ್ಲ. ಅತ್ಯುತ್ತಮ ಪೈಪೋಟಿ ಕೊಡುವಂತೆ ಕಾಣಿಸಲೂ ಇಲ್ಲ. ಈ ಹಿಂದೆ ಅವರೊಂದಿಗೆ ಒಂದು ಚಾಂಪಿಯನ್​ ತಂಡವಿತ್ತು. ಆದರೆ, ಈಗ ಇಲ್ಲ. ಹರಾಜಿನಲ್ಲಿ ಬಹಳ ಕೆಟ್ಟ ಆಯ್ಕೆಗಳನ್ನು ಮಾಡಿದರು. ನಾನು ಕೇಳಿದ ಹಾಗೆ, ಫ್ರಾಂಚೈಸಿಗೆ ಆಪ್ತರಾಗಿರುವ 3ರಿಂದ 4 ಮಂದಿ ಉದ್ದೇಶದಿಂದಲೇ ಉತ್ತಮ ಆಟಗಾರರನ್ನು ಹರಾಜಿನಲ್ಲಿ ಖರೀದಿಸಲಿಲ್ಲ. ಸಿಎಸ್​ಕೆ ಪ್ರತಿನಿಧಿಸುವ ವ್ಯಕ್ತಿಗಳೇ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ನನಗೆ ಗೊತ್ತಿಲ್ಲ ಇವರೆಲ್ಲ ಯಾರ ಮಾತಿಗೆ ತಕ್ಕಂತೆ ಕುಣಿಯುತ್ತಿದ್ದರು ಅಂತ" ಎಂದಿದ್ದಾರೆ ಬಜ್ಜಿ,(ಏಜೆನ್ಸೀಸ್).