ನವದೆಹಲಿ: ಟೆಸ್ಟ್ ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಟೆಸ್ಟ್ ವಿಶ್ವಕಪ್ ಮಾದರಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಜೂನ್ 18ರಿಂದ ಸೌಥಾಂಪ್ಟನ್ನಲ್ಲಿ ಹೋರಾಟ ನಡೆಸಲಿವೆ. ಈ ಪಂದ್ಯದಲ್ಲಿ ಭಾರತ ತಂಡಕ್ಕೆ ಇರುವ ಕೆಲ ಹಿನ್ನಡೆಗಳನ್ನು ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ವಿವರಿಸಿದ್ದಾರೆ.
ಯುವರಾಜ್ ಸಿಂಗ್ ಅವರ ಪ್ರಕಾರ, ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಪ್ರಶಸ್ತಿ ಹೋರಾಟದಲ್ಲಿ ಬೆಸ್ಟ್ ಆಫ್ ತ್ರಿ ಅಂದರೆ 3 ಪಂದ್ಯಗಳು ಇಲ್ಲದಿರುವುದೇ ಭಾರತಕ್ಕೆ ದೊಡ್ಡ ಹಿನ್ನಡೆಯಾಗಿದೆ. ಮೂರು ಪಂದ್ಯಗಳಿದ್ದರೆ ಮೊದಲ ಪಂದ್ಯ ಸೋತರೂ ಮತ್ತೆರಡು ಪಂದ್ಯಗಳಲ್ಲಿ ತಿರುಗೇಟು ನೀಡಬಹುದಾಗಿರುತ್ತದೆ. ಅಲ್ಲದೆ ನ್ಯೂಜಿಲೆಂಡ್ ತಂಡ ಈಗಾಗಲೆ ಆತಿಥೇಯ ಇಂಗ್ಲೆಂಡ್ ತಂಡದ ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿರುವುದು ಕೂಡ ಭಾರತ ತಂಡಕ್ಕೆ ಹಿನ್ನಡೆಯಾಗಲಿದೆ.
ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೆ ಮುನ್ನ 8&10 ಅಭ್ಯಾಸ ಅವಧಿಗಳಲ್ಲಿ ಪಾಲ್ಗೊಳ್ಳಬಹುದು. ಆದರೆ ಭಾರತ ತಂಡಕ್ಕೆ ಮ್ಯಾಚ್ ಪ್ರ್ಯಾಕ್ಟೀಸ್ಗೆ ಇದು ಪರ್ಯಾಯ ಆಗಲಾರದು. ಹೀಗಾಗಿ ನ್ಯೂಜಿಲೆಂಡ್ ತಂಡಕ್ಕೆ ಈ ವಿಷಯದಲ್ಲಿ ಮೇಲುಗೈ ಇದೆ ಎಂದು ಯುವರಾಜ್ ವಿವರಿಸಿದ್ದಾರೆ.
ಕೇನ್ ವಿಲಿಯಮ್ಸನ್ ಬಳಗಕ್ಕೆ ಹೋಲಿಸಿದರೆ ಭಾರತ ತಂಡದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ ಎಂದಿರುವ ಯುವರಾಜ್ ಸಿಂಗ್, ಬೌಲಿಂಗ್ನಲ್ಲಿ ಉಭಯ ತಂಡಗಳು ಬಹುತೇಕ ಸರಿಸಮಾನವಾಗಿವೆ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಭಾರತ ತಂಡದ ಆರಂಭಿಕ ಜೋಡಿಯಾದ ರೋಹಿತ್ ಶರ್ಮ ಮತ್ತು ಶುಭಮಾನ್ ಗಿಲ್ ಇಂಗ್ಲೆಂಡ್ ನೆಲದಲ್ಲಿ ಡ್ಯೂಕ್ ಚೆಂಡುಗಳನ್ನು ಎದುರಿಸಿದ ಅನುಭವ ಹೊಂದಿಲ್ಲದೆ ಇರುವುದು ಕೂಡ ಭಾರತಕ್ಕೆ ಹಿನ್ನಡೆಯಾಗಲಿದೆ ಎಂದು 2007ರ ಟಿ20 ಮತ್ತು 2011ರ ಏಕದಿನ ವಿಶ್ವಕಪ್ ವಿಜೇತ ಯುವರಾಜ್ ಹೇಳಿದ್ದಾರೆ. ಇದಲ್ಲದೆ ಸುದೀ ಪ್ರವಾಸದಲ್ಲಿ ಬಯೋಬಬಲ್ನಲ್ಲಿ ಭಾರತ ತಂಡಕ್ಕೆ ಮಾನಸಿಕ ಸವಾಲುಗಳೂ ಎದುರಾಗಲಿವೆ ಎಂದು ಯುವರಾಜ್ ಹೇಳಿದ್ದಾರೆ.