ನವದೆಹಲಿ: ಇತ್ತೀಚಿಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್ ಫಿನಾಲೆಯಲ್ಲಿ ಭಾರತ ತಂಡ ಸೋತಾಗ ಇಡೀ ದೇಶವೇ ದುಃಖದಲ್ಲಿ ಮುಳುಗಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮಿಗೆ ತೆರಳಿ ಆಟಗಾರರನ್ನು ಸಂತೈಸಿ ಧೈರ್ಯ ತುಂಬಿದ್ದರು. ಟೀಂ ಇಂಡಿಯಾದ ಆಟಗಾರರನ್ನು ಸಂತೈಸಿದ ಪರಿಗೆ ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಮಾರುಹೋಗಿದ್ದಾರೆ.
ನಾನು ಭಾರತ ತಂಡದ ಕೋಚ್ ಆಗಿ ಏಳು ವರ್ಷಗಳ ಕಾಲ ಡ್ರೆಸ್ಸಿಂಗ್ ರೂಮಿನಲ್ಲಿದ್ದೆ. ಒಂದು ತಂಡ ಸರಣಿ ಅಥವಾ ಪ್ರಮುಖ ಟುರ್ನಿ ಸೋತ ಬಳಿಕ ಪರಿಸ್ಥಿತಿ ಹೇಗಿರಲಿದೆ ಎಂಬುದು ನನಗೆ ತಿಳಿದಿದೆ ಎಂದಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಡ್ರೆಸ್ಸಿಂಗ್ ರೂಮ್ ಹೇಗಿರುತ್ತದೆ ಎಂಬುದು ನನಗೆ ತಿಳಿದಿರುವ ಕಾರಣದಿಂದ ಇದು ಅತ್ಯಂತ ಮಹತ್ವದ ವಿಚಾರ ಎಂದು ನಾನು ಭಾವಿಸುತ್ತೇನೆ ಮತ್ತು ನಾನು ಕ್ರಿಕೆಟಿಗನಾಗಿ ಹಲವು ವರ್ಷಗಳಿಂದ, ಭಾರತದ ತರಬೇತುದಾರನಾಗಿ ಏಳು ವರ್ಷಗಳಿಗೂ ಹೆಚ್ಚು ಕಾಲ ಆ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಅನುಭವವಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಿಯಲ್ ಎಸ್ಟೇಟ್ ಉದ್ಯಮ ಕುಸಿದಿದೆ: ಸಚಿವ ಕೆಟಿಆರ್
ನೀವು ಸೋಲಿನಿಂದಾಗಿ ಕಂಗೆಟ್ಟಿರುವಾಗ ಅದೊಂತರ ವಿಚಿತ್ರವಾದ ಭಾವನೆ ನಿಮ್ಮನ್ನು ಆವರಿಸಿರುತ್ತದೆ. ಇಂತಹ ಸಯಮದಲ್ಲಿ ಡ್ರೆಸ್ಸಿಂಗ್ ರೂಮ್‌ಗೆ ದೇಶದ ಪ್ರಧಾನಿಯಾದಂತವರು ಭೇಟಿ ನೀಡಿದಾಗ, ಅದು ದೊಡ್ಡ ವಿಚಾರವಾಗಿರುತ್ತದೆ. ಏಕೆಂದರೆ, ಅದು ಆಟಗಾರರ ಉತ್ಸಾಹವನ್ನು ಹೆಚ್ಚಿಸುತ್ತದೆ. ಇದು ಸಾಮಾನ್ಯ ವಿಚಾರವಲ್ಲ. ಒಂದು ದೇಶದ ಪ್ರಧಾನಿಯಾಗಿರುವಾಗ ಡ್ರೆಸ್ಸಿಂಗ್ ರೂಮ್‌ಗೆ ಕಾಲಿಡುವುದು ವಿಶೇಷವಾದ ನಡವಳಿಕೆ. ಇಂತಹ ಸಮಯದಲ್ಲಿ ಆಟಗಾರರಿಗೆ ಏನು ಅನಿಸುತ್ತದೆ ಎಂಬುದು ತಂಡದ ಮಾಜಿ ಕೋಚ್ ಆಗಿದ್ದ ನನಗೆ ತಿಳಿದಿದೆ ಎಂದು ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್‌ಗೆ ಭೇಟಿ ನೀಡಿದ್ದಕ್ಕೆ ಕೆಲ ದಿನಗಳ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಆಕ್ಷೇಪ ವ್ಯಕ್ತಪಡಿಸಿದ್ದರು ಮತ್ತು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದರು.