ಕ್ರೀಡೆ

ಪತ್ನಿ ಪ್ರತಿಮಾರನ್ನು ಪ್ರೀತಿಯ ಬಲೆಗೆ ಬೀಳಿಸಿದ್ದು ಹೇಗೆಂದು ಇಶಾಂತ್​ ಹೇಳ್ತಾರೆ ಕೇಳಿ...!

ನವದೆಹಲಿ: ಇತ್ತೀಚೆಗಷ್ಟೇ ಕ್ರಿಕೆಟ್​ ವಿಚಾರವಾಗಿ ಪತ್ನಿಯ ಕಾಲೆಳೆದು ಸುದ್ದಿಯಾಗಿದ್ದ ಟೀಮ್​ ಇಂಡಿಯಾ ವೇಗಿ ಇಶಾಂತ್​ ಶರ್ಮಾ, ಇದೀಗ ಮಾಧ್ಯಮ ಸಂದರ್ಶನವೊಂದರಲ್ಲಿ ಪತ್ನಿ ಪ್ರತಿಮಾ ಸಿಂಗ್ ಅವರನ್ನು ತನ್ನ ಪ್ರೀತಿಯ ಬಲೆಯಲ್ಲಿ ಬೀಳಿಸಿದ್ದು ಹೇಗೆ ಎಂಬುದನ್ನು ಅಭಿಮಾನಿಗಳ ಮುಂದೆ ಬಹಿರಂಗ ಪಡಿಸಿದ್ದಾರೆ.​

ಇಶಾಂತ್​ ಅವರ ಸ್ನೇಹಿತ ಆಯೋಜಿಸಿದ್ದ ಸ್ಥಳೀಯ ಬಾಸ್ಕೆಟ್​ಬಾಲ್​ ಟೂರ್ನಮೆಂಟ್​ನಲ್ಲಿ ಮೊದಲ ಬಾರಿಗೆ ಪ್ರತಿಮಾ ಅವರನ್ನು ನೋಡಿದ್ದರಂತೆ. ಟೂರ್ನಮೆಂಟ್​ಗೆ ಮುಖ್ಯ ಅತಿಥಿಯಾಗಿ ಹೋಗಿದ್ದ ಇಶಾಂತ್​, ಪ್ರತಿಮಾರನ್ನು ನೋಡಿ ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬಿದ್ದರಂತೆ. ಅಂದಿನಿಂದ ಮನಸ್ಸಿನಲ್ಲಿ ಮದುವೆ ಅಂತ ಆದರೆ ಪ್ರತಿಮಾರನ್ನೇ ಆಗಬೇಕೆಂದು ಇಶಾಂತ್​ ಅಂದುಕೊಂಡಿದ್ದರಂತೆ. ಕೊನೆಗೂ ಅವರ ಆಸೆಯಂತೆಯೇ ಇದೀಗ ಪ್ರತಿಮಾರೊಂದಿಗೆ ಸುಂದರ ಸಂಸಾರವನ್ನು ಇಶಾಂತ್​ ನಡೆಸುತ್ತಿದ್ದಾರೆ.

ಟೂರ್ನಮೆಂಟ್​ ಉದ್ಘಾಟನೆಗೆ ಹೋಗಿದ್ದ ಇಶಾಂತ್​, ಪ್ರತಿಮಾರನ್ನು ನೋಡಿ ಪ್ರತಿದಿನ ಟೂರ್ನಮೆಂಟ್​ಗೆ ಹೋಗುತ್ತಿದ್ದರಂತೆ. ಮೊದಲ ಬಾರಿಗೆ ತುಂಬಾ ನಾಚಿಕೊಂಡರಂತೆ. ಮಾತನಾಡಲೂ ಸಾಧ್ಯವಾಗಲಿಲ್ಲವಂತೆ. ಆಸ್ಟ್ರೇಲಿಯಾ ಸರಣಿಗೂ ಮುನ್ನ ಪ್ರತಿಮಾರೊಂದಿಗೆ ಪ್ರಮುಖವಾದ ವಿಚಾರವೊಂದನ್ನು ಮಾತನಾಡಬೇಕೆಂಬ ಸುಳಿವು ಕೊಟ್ಟೆ, ಆದರೆ, ಒಂದು ವರ್ಷಗಳ ಕಾಲ ಅವರನ್ನು ನನ್ನೆಡೆಗೆ ಸೆಳೆಯುವುದೇ ಆಯಿತು. ಕೊನೆಗೂ ಅವರಿಗೆ ಲವ್​ ಪ್ರಸ್ತಾಪ ಮಾಡಿಬಿಟ್ಟೆ ಎಂದು ಇಶಾಂತ್​ ತಿಳಿಸಿದ್ದಾರೆ.

ಪತ್ನಿ ಕಾಲೆಳೆದಿದ್ದ ಇಶಾಂತ್​

ಟೀಮ್​ ಇಂಡಿಯಾ ಬೌಲರ್​ಗಳ ಗುರುತನ್ನು ಸಂಪೂರ್ಣವಾಗಿ ಬಿಟ್ಟುಕೊಡದೆ ಕೇವಲ ಬೌಲಿಂಗ್​ ಶೈಲಿಯ ನಾಲ್ಕ ಚಿತ್ರಗಳನ್ನು ಇಂಡಿಯನ್​ ಕ್ರಿಕೆಟ್​ ಟೀಮ್​ ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ಹಿಂದೆ ಅಪ್​ಲೋಡ್​ ಮಾಡಲಾಗಿತ್ತು. ಆ ಕುರಿತು ಬೌಲರ್​ಗಳು ಯಾರೆಂದು ಊಹಿಸಿ ಎಂದು ಪ್ರಶ್ನಿಸಲಾಗಿತ್ತು.

ಫೋಟೋದಲ್ಲಿರುವುದು ಭುವನೇಶ್ವರ್​ ಕುಮಾರ್​, ರವೀಂದ್ರ ಜಡೇಜಾ, ಇಶಾಂತ್​ ಶರ್ಮಾ ಮತ್ತು ರವಿಚಂದ್ರನ್​ ಅಶ್ವಿನ್​. ಆದರೆ, ಇಶಾಂತ್​ ಪತ್ನಿ ಪ್ರತಿಮಾ ಜಸ್ಪ್ರಿತ್​ ಬೂಮ್ರಾ ಬೌಲಿಂಗ್​ ಅನ್ನು ತಪ್ಪಾಗಿ ಗ್ರಹಿಸಿ ಅಶ್ವಿನ್​ ಎಂದು ಗುರುತಿಸಿದ್ದರು. ಹೀಗಾಗಿ ಪತ್ನಿಯನ್ನೇ ಕಾಲೆಳೆದಿದ್ದ ಇಶಾಂತ್​, "ಪ್ರತಿಮಾ ಬೂಮ್ರ ವೇಗದ ಬೌಲರ್​​. ನೀನು ಇನ್ನು ಹೆಚ್ಚಿಗೆ ತಿಳಿಯಬೇಕೆಂದು ನನಗನಿಸುತ್ತದೆ" ಎಂದು ಟ್ರೋಲ್​ ಮಾಡಿದ್ದರು.

ಇನ್ನು ಇಶಾಂತ್​ ಮತ್ತು ಪ್ರತಿಮಾ ಪ್ರಧಾನಿ ಮಂತ್ರಿಯ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಕರೊನಾ ವಿರುದ್ಧ ಹೋರಾಡಲು ಎಲ್ಲರೂ ಒಗ್ಗಟ್ಟಾಗಿ ನಿಲ್ಲಿ. ನಾನು ಮತ್ತು ಪ್ರತಿಮಾ ಪ್ರಧಾನಿ ನಿಧಿಗೆ ದೇಣಿಗೆ ನೀಡಿದೆವು. ನಮ್ಮ ಕೈಲಾದಷ್ಟು ನಾವು ಮಾಡಿದ್ದೇವೆ. ಇದೇ ರೀತಿ ಎಲ್ಲರೂ ನೆರವಾಗಿ. ಸಣ್ಣ ಪ್ರಮಾಣದ ದೇಣಿಗೆ ದೊಡ್ಡ ವ್ಯತ್ಯಾಸವನ್ನೇ ಸೃಷ್ಟಿಸುತ್ತದೆ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದರು. (ಏಜೆನ್ಸೀಸ್​)