ಕರೊನಾ ವಾರಿಯರ್ಸ್​ ಜೀವಕ್ಕೆ ಮುಳುವಾಯ್ತು ಜೀವ ಉಳಿಸುವ ಆಂಬುಲೆನ್ಸ್​!

Keral Nurse
Published on

ತ್ರಿಸ್ಸುರ್(ಕೇರಳ): ಜೀವ ಉಳಿಸುವ ಆಂಬುಲೆನ್ಸ್​ನಿಂದಲೇ 23 ವರ್ಷದ ಅಸಿಸ್ಟೆಂಟ್​ ನರ್ಸ್​​ ಪ್ರಾಣ ಕಳೆದುಕೊಂಡಿರುವ ದುರಂತ ಘಟನೆ ಕೇರಳದ ತ್ರಿಸ್ಸುರ್​ನಲ್ಲಿ ಸೋಮವಾರ ಸಂಜೆ ನಡೆದಿದೆ. ತ್ರಿಸ್ಸುರ್​ನ ಅಂಥಿಕಾಡ್​ನಲ್ಲಿ ಕಾರು ಮತ್ತು ಆಂಬುಲೆನ್ಸ್​ ನಡುವೆ ಮುಖಾಮುಖಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನರ್ಸ್​ ಜೀವ ಕಳೆದುಕೊಂಡಿದ್ದಾರೆ.

ಡೊನ್ನಾ ಸಿ ವಾರ್ಘಿಸ್​ ಮೃತ ನರ್ಸ್​. 108 ಆಂಬುಲೆನ್ಸ್​ನಲ್ಲಿ ಕರ್ತವ್ಯದಲ್ಲಿದ್ದ ಡೊನ್ನಾ ರೋಗಿಯೊಬ್ಬರನ್ನು ಕರೆ ತರಲು ತೆರಳಿದ್ದ ವೇಳೆ ಅವಘಡ ಸಂಭವಿಸಿದೆ. ಎದುರಿಗೆ ಬರುತ್ತಿದ್ದ ಕಾರಿಗೆ ಆಂಬುಲೆನ್ಸ್​ ಡಿಕ್ಕಿ ಹೊಡೆದು ನೆಲಕ್ಕುರುಳಿದೆ. ಇದರಿಂದಾಗಿ ಡೊನ್ನಾ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಡೊನ್ನಾ ಅವರು ವಾರ್ಘಿಸ್​ ಎಂಬುವವರ ಮಗಳಾಗಿದ್ದು, ಘಟನೆಯಲ್ಲಿ ಆಂಬುಲೆನ್ಸ್​ ಚಾಲಕ ಅದೃಷ್ಟವಶಾತ್​ ಬದುಕುಳಿದಿದ್ದಾನೆ ಎಂದು ಅಂಥಿಕಾಡ್​ ಸಂಚಾರಿ ಇನ್ಸ್​ಪೆಕ್ಟರ್​ ತಿಳಿಸಿದ್ದಾರೆ.

ಡೊನ್ನ ಸಾವಿಗೆ ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಅವರು ಸಂತಾಪ ಸೂಚಿಸಿದ್ದು, ಡೊನ್ನಾ ವರ್ಘೀಸ್​ ಆಂಬುಲೆನ್ಸ್​ ಅಪಘಾತದಲ್ಲಿ ಮೃತಪಟ್ಟರು ಎಂಬುದನ್ನು ಕೇಳಿ ನನಗೆ ತುಂಬಾ ನೋವಾಯಿತು. ಅಂಥಿಕಾಡ್​ ಆಸ್ಪತ್ರೆಯ 108ರಲ್ಲಿ ಅವರು ತುರ್ತು ವೈದ್ಯಕೀಯ ತಂತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದರು. ಡೊನ್ನಾ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಕೇಳಿಕೊಳ್ಳುವ ಮೂಲಕ ಸಂತಾಪ ಸೂಚಿಸಿದ್ದಾರೆ.

ಅಂದಹಾಗೆ ಡೊನ್ನಾ ಪೆರಿಂಗುಟ್ಟುಕರದಲ್ಲಿ ತನ್ನ ಪಾಲಕರೊಂದಿಗೆ ವಾಸವಿದ್ದರು. ಸಮೀಪದ ಅಂಥಿಕಾಡ್​ ಆಸ್ಪತ್ರೆಗೆ ಕಳೆದ ಎರಡು ತಿಂಗಳ ಹಿಂದಷ್ಟೇ ಸೇರಿದ್ದರು. ಕರೊನಾ ತುರ್ತು ಸಂದರ್ಭ ಹಿನ್ನೆಲೆಯಲ್ಲಿ ಅವರನ್ನು 2 ವಾರಗಳಿಂದ ಆಂಬುಲೆನ್ಸ್​ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net