ಕ್ರೀಡೆ

ಐಪಿಎಲ್‌ಗೆ ಅನುಕೂಲ ಮಾಡಿಕೊಟ್ಟ ಆಸೀಸ್

ಮೆಲ್ಬೋರ್ನ್: ಆಸ್ಟ್ರೇಲಿಯಾ ಹಾಗೂ ಟಿ20 ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ನಡುವಿನ 3 ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯನ್ನು ಮುಂದೂಡಲಾಗಿದೆ. ಪೂರ್ವನಿಗದಿಯಂತೆ ಉಭಯ ತಂಡಗಳ ನಡುವಿನ ಸರಣಿ ಅಕ್ಟೋಬರ್ 4ರಿಂದ 9ರವರೆಗೆ ನಡೆಯಬೇಕಾಗಿತ್ತು. ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿದ್ದ ಟಿ20 ವಿಶ್ವಕಪ್‌ಗೆ ಪೂರ್ವಸಿದ್ಧತೆಯಾಗಿ ಈ ಸರಣಿ ಆಡಬೇಕಾಗಿತ್ತು. ಇದೀಗ ವಿಶ್ವಕಪ್ ಟೂರ್ನಿಯನ್ನು 2021ಕ್ಕೆ ಮುಂದೂಡಿರುವ ಹಿನ್ನೆಲೆಯಲ್ಲಿ ಈ ಸರಣಿಯನ್ನೂ ಮುಂದೂಡಲಾಗಿದೆ. ಇದರಿಂದ ಐಪಿಎಲ್‌ಗೆ ಆಸೀಸ್ ಆಟಗಾರರು ಪೂರ್ಣ ಪ್ರಮಾಣದಲ್ಲಿ ಲಭ್ಯರಾಗಲು ಅವಕಾಶ ಮಾಡಿಕೊಟ್ಟಂತಾಗಿದೆ.

ಈಗಾಗಲೇ ಆಸ್ಟ್ರೇಲಿಯಾ-ಜಿಂಬಾಬ್ವೆ ನಡುವಿನ ಏಕದಿನ ಸರಣಿ ಮುಂದೂಡಿಕೆಯಾಗಿದ್ದರೆ, ಮುಂದಿನ ತಿಂಗಳು ಇಂಗ್ಲೆಂಡ್‌ನಲ್ಲಿ ನಿಗದಿಯಾಗಿರುವ ಆತಿಥೇಯ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ನಿಗದಿಯಂತೆ ನಡೆಯಲಿದೆ.

ಐಪಿಎಲ್ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ನಲ್ಲಿ ನಿಗದಿಯಾಗಿದ್ದ ದಕ್ಷಿಣ ಆಫ್ರಿಕಾ ತಂಡದ ವೆಸ್ಟ್ ಇಂಡೀಸ್ ಪ್ರವಾಸ ಮುಂದೂಡಿದೆ. ಅಕ್ಟೋಬರ್‌ನಲ್ಲೇ ನಿಗದಿಯಾಗಿರುವ ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸದ ಭಾಗವಾಗಿರುವ ಟಿ20 ಸರಣಿ ಕೂಡ ಮುಂದೂಡಿಕೆಯಾಗುವುದು ನಿಶ್ಚಿತವೆನಿಸಿದೆ.