ಕ್ರೀಡೆ

8ನೇ ಕ್ಲಾಸ್​ ವಿದ್ಯಾರ್ಥಿ ವೈಭವ್​ಗೆ 1 ಕೋಟಿ ಕೊಟ್ಟು ರಾಜಸ್ಥಾನ ಖರೀದಿಸಿದ್ದೇಕೆ? ದ್ರಾವಿಡ್​ ಉತ್ತರ ವೈರಲ್ | Vaibhav Suryavanshi ​

Vaibhav Suryavanshi : ಬಿಹಾರದ ಸಮಸ್ತಿಪುರ ಜಿಲ್ಲೆಯ ಎಂಟನೇ ತರಗತಿ ವಿದ್ಯಾರ್ಥಿಯಾಗಿರುವ ವೈಭವ್ ಸೂರ್ಯವಂಶಿ ಅವರನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಐಪಿಎಲ್​ (IPL) ಮೆಗಾ ಹರಾಜಿನಲ್ಲಿ 1 ಕೋಟಿ 10 ಲಕ್ಷ ರೂ. ಕೊಟ್ಟು ಖರೀದಿಸಿದೆ. ಈ ಮೂಲಕ ವೈಭವ್ ಐಪಿಎಲ್ ಇತಿಹಾಸದಲ್ಲಿ ಮಾರಾಟವಾದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜಿಗೆ ಪ್ರವೇಶಿಸಿದ ವೈಭವ್‌ಗಾಗಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪೈಪೋಟಿ ನಡೆಸಿದವು. ಕೊನೆಗೆ ರಾಜಸ್ಥಾನ ತಂಡ ತನ್ನ ತೆಕ್ಕೆಗೆ ಹಾಕಿಕೊಂಡಿತು. 13ರ ಹರೆಯದ ವೈಭವ್ ಸೂರ್ಯವಂಶಿಯನ್ನು ತಂಡಕ್ಕೆ ಸೇರಿಸಿಕೊಳ್ಳಲು ಕಾರಣ ಏನೆಂಬುದನ್ನು ರಾಹುಲ್ ದ್ರಾವಿಡ್ ಇದೀಗ ಬಹಿರಂಗಪಡಿಸಿದ್ದಾರೆ.

ರಾಜಸ್ಥಾನ ರಾಯಲ್ಸ್ ನಡೆಸಿದ ಟ್ರಯಲ್ಸ್‌ನಲ್ಲಿ ವೈಭವ್ ಸೂರ್ಯವಂಶಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಸೂರ್ಯವಂಶಿ ಉತ್ತಮ ಕೌಶಲ್ಯವನ್ನು ಹೊಂದಿದ್ದಾರೆ. ಅವರು ಕ್ರಿಕೆಟಿಗರಾಗಿ ಬೆಳೆಯಲು ನಮ್ಮ ತಂಡವು ಉತ್ತಮ ವಾತಾವರಣವಾಗಿದೆ ಎಂದು ನಾವು ಭಾವಿಸಿದ್ದೇವೆ. ವೈಭವ್ ನಮ್ಮ ಪ್ರಯೋಗಗಳಿಗೆ ಹಾಜರಾಗಿದ್ದರು. ಅವರು ಅದ್ಭುತ ಪ್ರದರ್ಶನ ನೀಡಿದರು. ಅವರ ಆಟದಿಂದ ನಾವು ಪ್ರಭಾವಿತರಾಗಿದ್ದೇವೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಐಪಿಎಲ್ ಆಯೋಜಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಅಂದಹಾಗೆ ಸೂರ್ಯವಂಶಿ ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಆಸ್ಟ್ರೇಲಿಯಾ ಅಂಡರ್​-19 ಮತ್ತು ಭಾರತ ಅಂಡರ್​-19 ನಡುವಿನ ಪಂದ್ಯದಲ್ಲಿ ಶತಕ ಬಾರಿಸಿದರು. ಆ ಪಂದ್ಯದಲ್ಲಿ ಸೂರ್ಯವಂಶಿ 62 ಎಸೆತಗಳಲ್ಲಿ 104 ರನ್ ಗಳಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ತ್ರಿಶತಕ ಬಾರಿಸಿದ ಸಾಧನೆಯನ್ನೂ ಮಾಡಿದ್ದಾನೆ.

ಶನಿವಾರ ರಾಜಸ್ಥಾನ ವಿರುದ್ಧದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸೂರ್ಯವಂಶಿ ಬಿಹಾರ ಪರ ಟಿ20ಗೆ ಪಾದರ್ಪಣೆ ಮಾಡಿದರು. 12 ನೇ ವಯಸ್ಸಿನಲ್ಲಿ ಸೂರ್ಯವಂಶಿ, ವಿನೂ ಮಂಕಡ್ ಟ್ರೋಫಿಯಲ್ಲಿ ಬಿಹಾರದ ಪರವಾಗಿ ಆಡಿದರು. ಅವರು ಆಡಿದ ಐದು ಪಂದ್ಯಗಳಲ್ಲಿ ಸುಮಾರು 400 ರನ್ ಗಳಿಸಿದರು. (ಏಜೆನ್ಸೀಸ್​)