ಕ್ರೀಡೆ

ಪಂದ್ಯದ ನಡುವೆ ಕೊಹ್ಲಿ-ರಾಹುಲ್ ವಾಗ್ವಾದ! ಅಷ್ಟಕ್ಕೂ ಇಬ್ಬರ ಮಧ್ಯೆ ನಡೆದಿದ್ದೇನು? ವಿಡಿಯೋ ವೈರಲ್​... Virat Kohli

Virat Kohli : ಭಾನುವಾರ (ಏಪ್ರಿಲ್​ 27) ರಾತ್ರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ಮತ್ತು ಡೆಲ್ಲಿ ಕ್ಯಾಪಿಟಲ್ಸ್ ( DC ) ನಡುವೆ ನಡೆದ ಪಂದ್ಯದಲ್ಲಿ ರಜತ್​ ಪಾಟಿದಾರ್​ ನೇತೃತ್ವದ ಆರ್​ಸಿಬಿ ತಂಡ ಆರು ವಿಕೆಟ್‌ಗಳ ಭರ್ಜರಿ ಜಯ ದಾಖಲಿಸುವುದರೊಂದಿಗೆ ಡೆಲ್ಲಿ ವಿರುದ್ಧ ಈ ಹಿಂದಿನ ಸೋಲಿಗೆ ಸೇಡು ತೀರಿಸಿಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಎಂಟು ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ಕೆ.ಎಲ್. ರಾಹುಲ್ (41) ಮತ್ತು ಸ್ಟಬ್ಸ್ (34) ರನ್ ಗಳಿಸಿದರು. ಬಳಿಕ ಬ್ಯಾಟಿಂಗ್ ಆರಂಭಿಸಿದ ಆರ್‌ಸಿಬಿ 18.3 ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟಿ ವಿಜಯಶಾಲಿಯಾಯಿತು. ವಿರಾಟ್ ಕೊಹ್ಲಿ (51) ಮತ್ತು ಕೃನಾಲ್ ಪಾಂಡ್ಯ (ಔಟಾಗದೆ 73) ಅದ್ಭುತ ಇನ್ನಿಂಗ್ಸ್​ ಪ್ರದರ್ಶಿಸಿದರು. ಆರ್‌ಸಿಬಿ ಕೇವಲ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಆರಾಮವಾಗಿ ಗೆದ್ದಿತು. ಆದಾಗ್ಯೂ, ಈ ಪಂದ್ಯದ ಸಮಯದಲ್ಲಿ ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ನಡುವೆ ವಾಗ್ವಾದ ನಡೆಯಿತು.

ಆರ್‌ಸಿಬಿ ತಂಡದ ಇನ್ನಿಂಗ್ಸ್ ವೇಳೆ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ನಡುವೆ ವಾಗ್ವಾದ ನಡೆಯಿತು. ಕೊಹ್ಲಿ, ಕ್ರೀಸ್ ಬಿಟ್ಟು ವಿಕೆಟ್ ಕೀಪಿಂಗ್ ಮಾಡುತ್ತಿದ್ದ ರಾಹುಲ್ ಬಳಿ ಹೋಗಿ ವಾಗ್ವಾದ ಆರಂಭಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಜೊತೆ ಗಂಭೀರವಾಗಿ ಮಾತನಾಡುತ್ತಿರುವುದು ಕಂಡುಬಂದಿದ್ದು, ಕೆಎಲ್ ರಾಹುಲ್ ಕೂಡ ಕೊಹ್ಲಿಗೆ ಉತ್ತರ ನೀಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಆದರೆ, ಅವರ ನಡುವಿನ ವಾಗ್ವಾದಕ್ಕೆ ಕಾರಣವೇನು? ಅವರು ಏನು ಮಾತನಾಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.

ಆದರೆ, ಆರ್‌ಸಿಬಿ ಗೆಲುವಿನ ನಂತರ, ಭಾರತದ ಮಾಜಿ ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರು ಕೊಹ್ಲಿ ಮತ್ತು ರಾಹುಲ್ ನಡುವಿನ ವಾಗ್ವಾದ ಬಗ್ಗೆ ಮಾತನಾಡಿದರು. ಡೆಲ್ಲಿ ಕ್ಯಾಪಿಟಲ್ಸ್ ಮೈದಾನದಲ್ಲಿ ಫೀಲ್ಡಿಂಗ್ ಹೊಂದಿಸಲು ಸಮಯ ತೆಗೆದುಕೊಂಡಿದ್ದಕ್ಕೆ ಕೊಹ್ಲಿ ಅತೃಪ್ತರಾಗಿದ್ದರು. ಇದೇ ವಿಚಾರವನ್ನು ರಾಹುಲ್ ಬಳಿ ಹೋಗಿ ಪ್ರಸ್ತಾಪಿಸಿದರು. ಈ ವಿಚಾರವಾಗಿ ರಾಹುಲ್ ಕೂಡ ವಿರಾಟ್ ಕೊಹ್ಲಿಗೆ ಉತ್ತರ ನೀಡಿದರು ಎಂದು ಪಿಯೂಷ್ ಚಾವ್ಲಾ ಹೇಳಿದರು.

ಸದ್ಯ ಕೊಹ್ಲಿ ಮತ್ತು ಕೆಎಲ್ ರಾಹುಲ್ ನಡುವಿನ ವಾಗ್ವಾದದ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಸ್ವಲ್ಪ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ವಿಡಿಯೋ ನೋಡಿದ ಮೇಲೆ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್​)