ನವದೆಹಲಿ: ವ್ಯಾಪಾರ ನಿರ್ಬಂಧಗಳನ್ನು ಬೈಪಾಸ್ ಮಾಡಿ ದುಬೈ, ಸಿಂಗಾಪುರ, ಕೊಲಂಬೊ ಮುಂತಾದ ಬಂದರುಗಳ ಮೂಲಕ ಪ್ರತಿ ವರ್ಷ 10 ಶತಕೋಟಿ ಡಾಲರ್ಗಿಂತಲೂ (ಸುಮಾರು 83,750 ಕೋಟಿ ರೂ.) ಅಧಿಕ ಮೌಲ್ಯದ ಭಾರತೀಯ ಉತ್ಪನ್ನಗಳು ಪಾಕಿಸ್ತಾನವನ್ನು ತಲುಪುತ್ತಿವೆ ಎಂದು ಜಾಗತಿಕ ವ್ಯಾಪಾರ ಸಂಶೋಧನಾ ಸಂಸ್ಥೆ (ಜಿಟಿಆರ್ಐ) ತಿಳಿಸಿದೆ. ಭಾರತೀಯ ಕಂಪನಿಗಳು ಈ ಬಂದರುಗಳಿಗೆ ವಸ್ತುಗಳನ್ನು ಕಳಿಸುತ್ತವೆ. ಬೇರೆ ಸ್ವತಂತ್ರ ಕಂಪನಿಗಳು ಅಲ್ಲಿ ಆಫ್ಲೋಡ್ ಮಾಡಿಕೊಳ್ಳುತ್ತವೆ. ಉಗ್ರಾಣಗಳಲ್ಲಿ ಲೇಬೆಲ್ ಮತ್ತು ದಾಖಲೆಗಳನ್ನು ಬದಲಿಸಿ ‘ಮೇಡ್ ಇನ್ ಯುಎಇ’ ಎಂದು ರೀ-ಲೇಬೆಲ್ ಮಾಡಲಾಗುತ್ತದೆ. ನಂತರ ಪಾಕಿಸ್ತಾನಕ್ಕೆ ಕಳಿಸಿ ಹೆಚ್ಚಿನ ಬೆಲೆಗೆ ಮಾರಲಾಗುತ್ತದೆ. ಭಾರತದಿಂದ ಪಾಕ್ಗೆ ನೇರ ವ್ಯಾಪಾರಕ್ಕೆ ಅವಕಾಶ ಇಲ್ಲದಿರುವುದರಿಂದ ಹೀಗೆ ಮಾಡಲಾಗುತ್ತಿದೆ ಎಂದು ಜಿಟಿಆರ್ಐ ಸಂಸ್ಥಾಪಕ ಅಜಯ್ ಶ್ರೀವಾಸ್ತವ ವಿವರಿಸಿದ್ದಾರೆ.

2019ರಲ್ಲಿ ಪುಲ್ವಾಮಾ ಭಯೋತ್ಪಾದಕ ದಾಳಿ ನಡೆದ ಬಳಿಕ ಎರಡೂ ದೇಶಗಳ ನಡುವಿನ ನೇರ ವ್ಯಾಪಾರ ಅತ್ಯಂತ ಕಡಿಮೆಯಾಗಿದೆ. ಇತ್ತೀಚೆಗೆ ಪಹಲ್ಗಾಮ್ ಉಗ್ರ ದಾಳಿ ನಡೆದ ಬಳಿಕ ಅಟ್ಟಾರಿ-ವಾಘಾ ಚೆಕ್ಪೋಸ್ಟನ್ನೂ ಬಂದ್ ಮಾಡಲು ಭಾರತ ನಿರ್ಧರಿಸಿದ್ದು, ಎಲ್ಲ ವ್ಯಾಪಾರ ಸಂಬಂಧ ಸ್ಥಗಿತಗೊಳಿಸಲು ಪಾಕ್ ಕೂಡ ತೀರ್ವನಿಸಿದೆ. ಇದರಿಂದಾಗಿ ಎರಡೂ ದೇಶಗಳ ನಡುವಿನ ವ್ಯಾಪಾರ ಸಂಪೂರ್ಣ ನಿಲ್ಲಲಿದೆ. 2024-25ರ ಏಪ್ರಿಲ್ನಿಂದ ಜನವರಿವರೆಗಿನ ಅವಧಿಯಲ್ಲಿ ಪಾಕಿಸ್ತಾನಕ್ಕೆ ಭಾರತದಿಂದ 447.65 ದಶಲಕ್ಷ ಡಾಲರ್ (ಸುಮಾರು 3749 ಕೋಟಿ ರೂ.) ಮೌಲ್ಯದ ವಸ್ತುಗಳು ರಫ್ತಾಗಿದ್ದರೆ, ಕೇವಲ 0.42 ದಶಲಕ್ಷ ಡಾಲರ್ (ಸುಮಾರು 3.5 ಕೋಟಿ ರೂ.) ಮೌಲ್ಯದ ವಸ್ತುಗಳು ಪಾಕ್ನಿಂದ ಭಾರತಕ್ಕೆ ಆಮದಾಗಿವೆ. 2023-24ರಲ್ಲಿ ರಫ್ತು ಮತ್ತು ಆಮದು ಕ್ರಮವಾಗಿ 1.18 ಶತಕೋಟಿ ಡಾಲರ್ (ಅಂದಾಜು 9,882 ಕೋಟಿ ರೂ.) ಮತ್ತು 2.88 ದಶಲಕ್ಷ ಡಾಲರ್ (ಸುಮಾರು 24 ಕೋಟಿ ರೂ.) ಇತ್ತು.
ಭಾರತದಿಂದ ಪಾಕ್ಗೆ ಹೋಗುವ ವಸ್ತುಗಳಲ್ಲಿ ಶೇ. 60ರಷ್ಟು ಪಾಲು ಔಷಧಗಳದ್ದೇ ಇದೆ. ಸಕ್ಕರೆ, ತರಕಾರಿ, ಕಾಫಿ, ಚಹಾ, ಸಾಂಬಾರ ಪದಾರ್ಥಗಳು, ಪೆಟ್ರೋಲಿಯಂ ಉತ್ಪನ್ನಗಳು, ರಸಗೊಬ್ಬರ, ಪ್ಲಾಸ್ಟಿಕ್, ರಬ್ಬರ್, ವಾಹನ ಬಿಡಿಭಾಗಗಳು, ಎಣ್ಣೆ ಬೀಜಗಳು, ಔಷಧೀಯ ಸಸ್ಯಗಳು ಕೂಡ ರವಾನೆಯಾಗುತ್ತವೆ.