ಕ್ರೀಡೆ

RCB ಟ್ರೋಫಿ ಗೆಲ್ಲದಿದ್ರೆ ನನ್ನ ಗಂಡನಿಗೆ ಡಿವೋರ್ಸ್​ ಕೊಡ್ತೇನೆ... ವೈರಲ್​ ಆಯ್ತು ಮಹಿಳೆ ಹಿಡಿದ ಪೋಸ್ಟರ್!

RCB : ಐಪಿಎಲ್ ಚೊಚ್ಚಲ ಪ್ರಶಸ್ತಿ ಗೆಲ್ಲಲು ಆರ್‌ಸಿಬಿಗೆ ಇನ್ನೊಂದು ಹೆಜ್ಜೆ ಬಾಕಿ ಇದೆ. ನಿನ್ನೆ (ಮೇ29) ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ ತಂಡ ಬೌಲಿಂಗ್, ಫೀಲ್ಡಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿ ಅದ್ಭುತ ಗೆಲುವು ದಾಖಲಿಸಿತು. ಆರ್‌ಸಿಬಿ ತಂಡ ಪಂಜಾಬ್ ಕಿಂಗ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ ಐಪಿಎಲ್ 2025ರ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಕಳೆದ 9 ವರ್ಷಗಳಲ್ಲಿ ಆರ್​ಸಿಬಿ, ಐಪಿಎಲ್​ ಫೈನಲ್​ ಪ್ರವೇಶ ಪಡೆದಿರುವುದು ಇದೇ ಮೊದಲು. ಕೊನೆಯದಾಗಿ 2016ರಲ್ಲಿ ಆರ್​ಸಿಬಿ ಫೈನಲ್​ ಪ್ರವೇಶ ಪಡೆದಿತ್ತು. ಈ ವೇಳೆ ಸನ್​ ರೈಸರ್ಸ್​ ಹೈದರಾಬಾದ್​ ವಿರುದ್ಧ ಸೋತು, ನಿರಾಸೆ ಅನುಭವಿಸಿತ್ತು. ಆದರೆ, ಈ ಬಾರಿ ಆರ್​ಸಿಬಿ ತಂಡ ಒಳ್ಳೆಯ ಲಯದಲ್ಲಿದ್ದು, ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಹೀಗಾಗಿ ಆರ್​ಸಿಬಿ ಅಭಿಮಾನಿಗಳ ಖುಷಿ ದುಪ್ಪಟ್ಟಾಗಿದೆ. ಆದ್ದರಿಂದ ಈ ಬಾರಿ ಕಪ್ ನಮ್ಮದೇ ಎಂದು ಹೇಳುತ್ತಾ ಸಂಭ್ರಮಿಸುತ್ತಿದ್ದಾರೆ.

ನಿನ್ನೆ ಪಂದ್ಯದ ಸಮಯದಲ್ಲಿ ಒಂದು ಕುತೂಹಲಕಾರಿ ಘಟನೆ ಸಹ ನಡೆದಿದೆ. ಅದೇನೆಂದರೆ, ಮಹಿಳೆಯೊಬ್ಬಳು ತನ್ನ ಕೈಯಲ್ಲಿ ದೊಡ್ಡ ಬ್ಯಾನರ್ ಹಿಡಿದುಕೊಂಡಿದ್ದು ಎಲ್ಲರ ಗಮನ ಸೆಳೆದಿದೆ. ಅದರ ಮೇಲೆ, ಆರ್‌ಸಿಬಿ ಫೈನಲ್ ಗೆಲ್ಲದಿದ್ದರೆ, ನಾನು ನನ್ನ ಪತಿಗೆ ವಿಚ್ಛೇದನ ನೀಡುತ್ತೇನೆ ಎಂದು ದಪ್ಪ ಅಕ್ಷರಗಳಲ್ಲಿ ಬರೆಯಲಾಗಿತ್ತು. ಅಲ್ಲದೆ, ಕಿಂಗ್​ ಅಂತಾನೂ ಬರೆಯಲಾಗಿತ್ತು. ಈ ತಮಾಷೆಯ ಪೋಸ್ಟರ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಬಗೆ ಬಗೆಯ ಕಾಮೆಂಟ್​ಗಳ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ನೀವು ಸೋತರೆ ಒಂದು ಜೋಡಿ ಬೇರೆಯಾಗುತ್ತದೆ, ಈ ಬಾರಿ ನೀವು ಖಂಡಿತ ಗೆಲ್ಲಬೇಕು ಎಂದು ಕೆಲವರು ಕಾಮೆಂಟ್​ ಮಾಡಿದರೆ, ಇಂಥಾ ಹುಚ್ಚು ಪ್ರದರ್ಶನ ಬೇಕಾ ಎಂದು ಕೆಲವರು ಮಹಿಳೆಗೆ ಬುದ್ಧಿಮಾತು ಹೇಳಿದ್ದಾರೆ.

ಇನ್ನೂ ಪಂದ್ಯದ ವಿಚಾರಕ್ಕೆ ಬಂದರೆ, ನಿನ್ನೆ ಮಲ್ಲನ್ಪುರದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವನ್ನು ಕೇವಲ 14.1 ಓವರ್‌ಗಳಲ್ಲಿ 101 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಆರ್​ಸಿಬಿ ಯಶಸ್ವಿಯಾಯಿತು. ಪಂಜಾಬ್​ ಪರ ಮಾರ್ಕಸ್ ಸ್ಟೊಯಿನಿಸ್ (26) ಅತಿ ಹೆಚ್ಚು ಸ್ಕೋರರ್ ಎನಿಸಿಕೊಂಡರು. ಆರ್‌ಸಿಬಿ ಬೌಲರ್‌ಗಳಲ್ಲಿ ಸುಯಾಶ್ ಶರ್ಮಾ ಮತ್ತು ಜೋಶ್ ಹ್ಯಾಸಲ್‌ವುಡ್ ತಲಾ ಮೂರು ವಿಕೆಟ್ ಪಡೆದರು. ಯಶ್ ದಯಾಳ್ ಎರಡು ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ ಮತ್ತು ರೊಮಾರಿಯೊ ಶೆಫರ್ಡ್ ತಲಾ ಒಂದು ವಿಕೆಟ್ ಪಡೆದರು.

ಬಳಿಕ ಪಂಜಾಬ್​ ನೀಡಿದ ಸಣ್ಣ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ, ಫಿಲ್ ಸಾಲ್ಟ್ (56 ರನ್​, 27 ಎಸೆತ, 6 ಬೌಂಡರಿ, 3 ಸಿಕ್ಸರ್) ಅವರ ಆಕರ್ಷಕ ಅರ್ಧಶತಕದ ನೆರವಿನಿಂದ 10 ಓವರ್‌ಗಳಲ್ಲಿ ಎರಡು ವಿಕೆಟ್‌ಗಳ ನಷ್ಟಕ್ಕೆ ಗುರಿಯನ್ನು ತಲುಪಿತು. ಪಂಜಾಬ್ ಬೌಲರ್‌ಗಳಾದ ಮುಶೀರ್ ಖಾನ್ ಮತ್ತು ಕೈಲ್ ಜೇಮಿಸನ್ ತಲಾ ಒಂದು ವಿಕೆಟ್ ಪಡೆದರು. 8 ವಿಕೆಟ್​ಗಳಿಂದ ಕ್ವಾಲಿಫೈಯರ್​ 1ರಲ್ಲಿ ಗೆದ್ದ ಆರ್​ಸಿಬಿ, 9 ವರ್ಷಗಳ ಬಳಿಕ ಐಪಿಎಲ್​ ಫೈನಲ್​ಗೆ ಲಗ್ಗೆ ಇಟ್ಟಿದೆ. ಮಂಗಳವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಆರ್​ಸಿಬಿ ತಂಡ ಕ್ವಾಲಿಫೈಯರ್-2 ವಿಜೇತರನ್ನು ಎದುರಿಸಲಿದೆ. (ಏಜೆನ್ಸೀಸ್​)