ಕ್ರೀಡೆ

ಐಪಿಎಲ್​ನಲ್ಲಿ ಇಂದು ಹೊಸ ಚಾಂಪಿಯನ್ ಉದಯ: 18 ವರ್ಷಗಳ ಪ್ರಶಸ್ತಿ ಬರ ನೀಗಿಸಲು RCB-PBKS ಪೈಪೋಟಿ! IPL 2025

IPL 2025 : ವಿಶ್ವದ ಶ್ರೀಮಂತ ಟಿ20 ಲೀಗ್ ಐಪಿಎಲ್ ಟೂರ್ನಿಯಲ್ಲಿ ಮಂಗಳವಾರ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಐಪಿಎಲ್ 18ನೇ ಆವೃತ್ತಿಯ ಪ್ರಶಸ್ತಿ ಕಾದಾಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ಮುಖಾಮುಖಿಗೆ ವೇದಿಕೆ ಸಜ್ಜಾಗಿದ್ದು, ಯಾರೇ ಗೆದ್ದರೂ ಹೊಸ ಚಾಂಪಿಯನ್ ಉದಯವಾಗಲಿದೆ. 9 ವರ್ಷಗಳ ಬಳಿಕ ಮತ್ತು ಒಟ್ಟಾರೆ 4ನೇ ಬಾರಿಗೆ ಫೈನಲ್​ಗೇರಿರುವ ಆರ್​ಸಿಬಿ ತಂಡ ಕಪ್ ಗೆಲುವಿನ 18 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡುವ ಹಂಬಲದಲ್ಲಿದೆ. ಭಾರತೀಯ ಕ್ರಿಕೆಟ್​ನ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸರಿಸುಮಾರು ಎರಡು ದಶಕಗಳ ಮೊಟ್ಟಮೊದಲ ಬಾರಿಗೆ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿಯುವ ತವಕದಲ್ಲಿದ್ದಾರೆ. ಆರ್​ಸಿಬಿ ಅಭಿಮಾನಿಗಳಂತೂ ವಿಜಯೋತ್ಸವದ ಜಾತ್ರೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಅತ್ತ ಪಂಜಾಬ್​ಗೂ ಇದು 18 ವರ್ಷಗಳ ಕನಸು ನನಸಾಗಿಸುವ ಅವಕಾಶವೆನಿಸಿದೆ. ಎರಡನೇ ಮತ್ತು 11 ವರ್ಷಗಳ ಬಳಿಕ ಫೈನಲ್​ಗೇರಿರುವ ಪಂಜಾಬ್ ತಂಡ, ಶ್ರೇಯಸ್ ಅಯ್ಯರ್ ಸಾರಥ್ಯದಲ್ಲಿ ಚೊಚ್ಚಲ ಟ್ರೋಫಿ ಗೆಲುವಿನ ಕಾತರದಲ್ಲಿದೆ. ಹೀಗಾಗಿ ಜಿದ್ದಾಜಿದ್ದಿನ ಹಣಾಹಣಿಯೊಂದರ ನಿರೀಕ್ಷೆ ಹರಡಿದೆ.

ಐಪಿಎಲ್ 18ನೇ ಆವೃತ್ತಿಗೆ ಮಾರ್ಚ್ 22ರಂದು ಚಾಲನೆ ಸಿಕ್ಕಾಗ ರಜತ್ ಪಾಟೀದಾರ್ ಪಡೆ ಶುಭಾರಂಭ ಮಾಡಿದ್ದರೆ, 3 ದಿನಗಳ ಬಳಿಕ ಪಂಜಾಬ್ ಕಿಂಗ್ಸ್ ಕೂಡ ರನ್​ವುಳೆ ಹರಿಸುತ್ತ ಭರ್ಜರಿ ಆರಂಭ ಕಂಡಿತ್ತು. ನಂತರದಲ್ಲಿ ಉಭಯ ತಂಡಗಳೂ ಟೂರ್ನಿಯುದ್ದಕ್ಕೂ ಸರ್ವಾಂಗೀಣ, ಸ್ಥಿರ ನಿರ್ವಹಣೆಯನ್ನೇ ತೋರಿಸುತ್ತ ಬಂದಿವೆ. ಭಾರತ-ಪಾಕಿಸ್ತಾನ ಗಡಿ ಉದ್ವಿಗ್ನತೆಯಿಂದಾಗಿ ಟೂರ್ನಿಗೆ ಅಲ್ಪ ವಿರಾಮ ಬಿದ್ದು, ಒಂದು ವಾರದ ಕಾಲ ಮುಂದೂಡಲ್ಪಟ್ಟರೂ, ಉಭಯ ತಂಡಗಳು ಲಯ ಕಳೆದುಕೊಳ್ಳಲಿಲ್ಲ. ಕೆಲ ಆಟಗಾರರ ಅಲಭ್ಯತೆ, ಬದಲಿಗರ ಸೇರ್ಪಡೆಯ ನಡುವೆಯೂ ಬಲಿಷ್ಠ ನಿರ್ವಹಣೆಯನ್ನು ಮುಂದುವರಿಸುತ್ತ ಬಂದವು ಮತ್ತು ಲೀಗ್ ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನಗಳನ್ನೇ ಅಲಂಕರಿಸಿದ್ದವು. ಉಭಯ ತಂಡಗಳೂ ಆಡಿದ 14 ಪಂದ್ಯಗಳಲ್ಲಿ 9 ಜಯ, 4 ಸೋಲು ಕಂಡಿದ್ದರೆ, ಒಂದು ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ತಲಾ 19 ಅಂಕಗಳ ಸಮಬಲ ಸಾಧಿಸಿದ್ದರೂ, ರನ್​ರೇಟ್ ಲೆಕ್ಕಾಚಾರದಲ್ಲಷ್ಟೇ ಪಂಜಾಬ್ ತುಸು ಮೇಲುಗೈ ಸಾಧಿಸಿತ್ತು. ಹೀಗಾಗಿ ಟೂರ್ನಿಯ ಕಟ್ಟಕಡೆಯ ಪಂದ್ಯದಲ್ಲಿ ಯಾರೇ ಗೆದ್ದರೂ ಇದು ಅರ್ಹರ ಮತ್ತು ಕ್ರಿಕೆಟ್ ಆಟದ ಗೆಲುವೇ ಆಗಿರಲಿದೆ.

* ಮುಖಾಮುಖಿ: 36 * ಆರ್​ಸಿಬಿ: 18 * ಪಂಜಾಬ್: 18 * ಆರಂಭ: ರಾತ್ರಿ 7.30 * ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್​ಸ್ಟಾರ್.

ಆರ್​ಸಿಬಿಗೆ ಇದು ಸುವರ್ಣಾವಕಾಶ

ವಿರಾಟ್ ಕೊಹ್ಲಿ ಅವರ ಜೆರ್ಸಿ ನಂಬರ್ 18 ಮತ್ತು ಇದು 18ನೇ ಆವೃತ್ತಿ ಎಂದಾಗಲೇ ಆರ್​ಸಿಬಿ ಅಭಿಮಾನಿಗಳು ‘ಈ ಸಲ ಕಪ್ ನಮ್ದೇ’ ಎಂದು ಇನ್ನಷ್ಟು ಜೋರಾಗಿ ಹೇಳುತ್ತಿದ್ದರು. ಅವರ ಈ ಘೋಷವಾಕ್ಯ ನಿಜವಾಗಲು ಇನ್ನೀಗ ಒಂದೇ ಒಂದು ಗೆಲುವು ಬೇಕಾಗಿದೆ. ಐಪಿಎಲ್​ನಲ್ಲಿ ಮೊದಲ ಆವೃತ್ತಿಯಿಂದಲೂ ಒಂದೇ ತಂಡಕ್ಕೆ ನಿಷ್ಠೆಯಿಂದಿರುವ ಏಕೈಕ ಆಟಗಾರರಾಗಿರುವ ವಿರಾಟ್ ಕೊಹ್ಲಿಗೆ ಟ್ರೋಫಿ ಗೆಲುವಿನ ಪ್ರತಿಫಲ ಸಿಗಬೇಕಾಗಿದೆ ಎಂಬುದು ಅಭಿಮಾನಿಗಳ ಒತ್ತಾಸೆಯೂ ಆಗಿದೆ. ಹಾಲಿ ಆವೃತ್ತಿಯಲ್ಲಿ ಆರ್​ಸಿಬಿಗೆ ಬ್ಯಾಟಿಂಗ್​ನಲ್ಲಿ ಉಪಯುಕ್ತ ಕೊಡುಗೆ ನೀಡುತ್ತ ಬಂದಿರುವ ಕೊಹ್ಲಿ (614) ತಂಡದ ಗರಿಷ್ಠ ಸ್ಕೋರರ್ ಕೂಡ ಆಗಿದ್ದಾರೆ. ಅವರಿಗೆ ಫಿಲ್ ಸಾಲ್ಟ್ (387), ರಜತ್ ಪಾಟೀದಾರ್ (286), ಜಿತೇಶ್ ಶರ್ಮ (237) ಉತ್ತಮ ಬೆಂಬಲ ನೀಡುತ್ತ ಬಂದಿದ್ದಾರೆ. ಬೌಲಿಂಗ್​ನಲ್ಲಿ ಆಸೀಸ್ ವೇಗಿ ಜೋಶ್ ಹ್ಯಾಸಲ್​ವುಡ್ (21) ಆರ್​ಸಿಬಿಯ ಟ್ರಂಪ್ ಕಾರ್ಡ್ ಎನಿಸಿದ್ದರೆ, ಕೃನಾಲ್ ಪಾಂಡ್ಯ (15), ಭುವನೇಶ್ವರ್ (15), ಯಶ್ ದಯಾಳ್ (12), ಸುಯಶ್ ಶರ್ಮ (8) ಉತ್ತಮ ಬೆಂಬಲ ಒದಗಿಸಿದ್ದಾರೆ. ಲೀಗ್ ಹಂತದಲ್ಲಿ ಒಮ್ಮೆ ಮಾತ್ರವಲ್ಲದೆ, ಮೊದಲ ಕ್ವಾಲಿಫೈಯರ್ ಪಂದ್ಯದಲ್ಲೂ ಪಂಜಾಬ್ ಎದುರು ಬಲಿಷ್ಠ ನಿರ್ವಹಣೆ ತೋರಿ ಏಕಪಕ್ಷೀಯ ಗೆಲುವು ದಾಖಲಿಸಿದ ವಿಶ್ವಾಸ ಆರ್​ಸಿಬಿ ತಂಡಕ್ಕಿದೆ.

ಸೇಡಿನ ತವಕದಲ್ಲಿ ಶ್ರೇಯಸ್ ಬಳಗ

ಟೂರ್ನಿಯುದ್ದಕ್ಕೂ ಸರ್ವಾಂಗೀಣ ನಿರ್ವಹಣೆ ತೋರುತ್ತ ಬಂದಿರುವ ಪಂಜಾಬ್ ಕಿಂಗ್ಸ್, 200 ಪ್ಲಸ್ ಮೊತ್ತದ ಚೇಸಿಂಗ್​ನಲ್ಲಿ ಮಾತ್ರವಲ್ಲ, 111 ರನ್ ರಕ್ಷಿಸಿಕೊಳ್ಳುವ ಮೂಲಕವೂ ಗಮನಸೆಳೆದಿತ್ತು. ಮೊದಲ ಕ್ವಾಲಿಫೈಯರ್​ನಲ್ಲಿ ಆರ್​ಸಿಬಿ ಎದುರು ಸೋತು ನೇರವಾಗಿ ಫೈನಲ್​ಗೇರುವ ಅವಕಾಶ ಕೈಚೆಲ್ಲಿತ್ತು. ಆದರೆ ಎರಡನೇ ಅವಕಾಶದಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ಅಮೋಘ ಗೆಲುವು ದಾಖಲಿಸುವ ಮೂಲಕ ಪ್ರಶಸ್ತಿ ಸುತ್ತಿಗೇರುವಲ್ಲಿ ಯಶಸ್ವಿಯಾಗಿದೆ. ಇದೀಗ ಆರ್​ಸಿಬಿ ಎದುರು ಸೇಡು ತೀರಿಸಿಕೊಳ್ಳುವ ಮೂಲಕ ಪ್ರಶಸ್ತಿ ಒಲಿಸಿಕೊಳ್ಳುವ ತವಕದಲ್ಲಿದೆ. 2ನೇ ಕ್ವಾಲಿಫೈಯರ್ ಮಾತ್ರವಲ್ಲ, ಟೂರ್ನಿಯುದ್ದಕ್ಕೂ ಶ್ರೇಯಸ್ ಅಯ್ಯರ್ ಪಂಜಾಬ್ ತಂಡವನ್ನು ಮುಂಚೂಣಿಯಲ್ಲಿ ನಿಂತು ಮುನ್ನಡೆಸಿದ್ದಾರೆ. ಶ್ರೇಯಸ್ (603) ಬ್ಯಾಟಿಂಗ್ ಪರಿಶ್ರಮಕ್ಕೆ ಪ್ರಭ್​ಸಿಮ್ರನ್ ಸಿಂಗ್ (523), ಪ್ರಿಯಾಂಶ್ ಆರ್ಯ (451), ನೇಹಲ್ ವಧೇರ (354), ಜೋಶ್ ಇಂಗ್ಲಿಸ್ (239) ಉತ್ತಮ ಸಾಥ್ ನೀಡಿದ್ದಾರೆ. ಬೌಲಿಂಗ್​ನಲ್ಲಿ ಅರ್ಷದೀಪ್ ಸಿಂಗ್ (18), ಯಜುವೇಂದ್ರ ಚಾಹಲ್ (15), ಹರ್​ಪ್ರೀತ್ ಬ್ರಾರ್ (10) ಪಂಜಾಬ್​ಗೆ ಬಲ ತುಂಬಿದ್ದಾರೆ. ಶ್ರೇಯಸ್ ಅಯ್ಯರ್-ರಿಕಿ ಪಾಂಟಿಂಗ್ ಜೋಡಿ ಕ್ಯಾಪ್ಟನ್-ಕೋಚ್ ಆಗಿ ಪಂಜಾಬ್ ತಂಡದಲ್ಲಿ ಮಾಡಿರುವ ಮೋಡಿಯೂ ಅಮೋಘವಾದುದು.

ಟೀಮ್ ನ್ಯೂಸ್

ಆರ್​ಸಿಬಿ: ಡೆತ್ ಓವರ್​ಗಳಲ್ಲಿ ಬ್ಯಾಟಿಂಗ್ ವಿಭಾಗಕ್ಕೆ ಹೆಚ್ಚಿನ ಬಲ ತುಂಬಿದ್ದ ಟಿಮ್ ಡೇವಿಡ್ ಫಿಟ್ನೆಸ್ ಸಮಸ್ಯೆಯಿಂದಾಗಿ ಕಳೆದೆರಡು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಅವರು ಫಿಟ್ ಆದರೆ ಫೈನಲ್​ನಲ್ಲಿ ಆರ್​ಸಿಬಿಗೆ ಇನ್ನಷ್ಟು ಬಲ ಸಿಗಲಿದೆ. ಜತೆಗೆ ಫಾರ್ಮ್​​ನಲ್ಲಿಲ್ಲದ ಲಿವಿಂಗ್​ಸ್ಟೋನ್​ರನ್ನು ಆಡಿಸುವ ಅನಿವಾರ್ಯತೆಯೂ ತಪ್ಪಲಿದೆ.

ಪಂಜಾಬ್ ಕಿಂಗ್ಸ್: ಲೀಗ್ ಹಂತದಲ್ಲಿ ತಂಡದ ಬೌಲಿಂಗ್ ವಿಭಾಗಕ್ಕೆ ಬಲ ತುಂಬಿದ್ದ ದಕ್ಷಿಣ ಆಫ್ರಿಕಾ ವೇಗಿ ಮಾಕೋ ಜಾನ್ಸೆನ್​ರನ್ನು ಪಂಜಾಬ್ ಫೈನಲ್​ನಲ್ಲಿ ಮಿಸ್​ವಾಡಿಕೊಳ್ಳಲಿದೆ. ಸ್ಪಿನ್ನರ್ ಯಜುವೇಂದ್ರ ಚಾಹಲ್ ಕೈನೋವಿನಿಂದ ಚೇತರಿಸಿಕೊಂಡು 2ನೇ ಕ್ವಾಲಿಫೈಯರ್​ನಲ್ಲಿ ಆಡಿದ್ದರು. ತನ್ನ ಮಾಜಿ ತಂಡದ ಎದುರು ಫೈನಲ್​ನಲ್ಲೂ ಅವರು ಪಂಜಾಬ್​ಗೆ ಬಲ ತುಂಬುವ ನಿರೀಕ್ಷೆ ಇದೆ.

ಶ್ರೇಯಸ್-ರಜತ್ ನಡುವೆ 2ನೇ ಫೈನಲ್!

ಟಿ20 ಟೂರ್ನಿಯ ಪ್ರಶಸ್ತಿಯೊಂದಕ್ಕೆ ಶ್ರೇಯಸ್ ಅಯ್ಯರ್-ರಜತ್ ಪಾಟೀದಾರ್ ನೇತೃತ್ವದ ತಂಡಗಳ ನಡುವಿನ 2ನೇ ಫೈನಲ್ ಇದಾಗಿದೆ. ಕಳೆದ ವರ್ಷಾಂತ್ಯದಲ್ಲಿ ದೇಶೀಯ ಟಿ20 ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್​ನಲ್ಲಿ ಮುಖಾಮುಖಿಯಾಗಿದ್ದ ಮುಂಬೈ-ಮಧ್ಯಪ್ರದೇಶ ತಂಡಗಳಿಗೂ ಇವರಿಬ್ಬರೇ ನಾಯಕರಾಗಿದ್ದರು. ಆಗ ಶ್ರೇಯಸ್ ಗೆದ್ದಿದ್ದರೆ, ಈ ಬಾರಿ ರಜತ್ ಆರ್​ಸಿಬಿ ಪರ ಸೇಡು ತೀರಿಸಿಕೊಳ್ಳುವ ಅವಕಾಶ ಹೊಂದಿದ್ದಾರೆ.

*20: ಐಪಿಎಲ್-18ರ ಚಾಂಪಿಯನ್ ತಂಡ 20 ಕೋಟಿ ರೂ. ಬಹುಮಾನ ಪಡೆಯಲಿದೆ. ರನ್ನರ್​ಅಪ್ ತಂಡ 13 ಕೋಟಿ ರೂ. ಗಳಿಸಲಿದೆ.

*8: ಫೈನಲ್​ನಲ್ಲಿ ಯಾವುದೇ ತಂಡ ಗೆದ್ದರೂ, ಐಪಿಎಲ್ ಟ್ರೋಫಿ ಜಯಿಸಿದ 8ನೇ ತಂಡ ಎನಿಸಲಿದೆ. ಸಿಎಸ್​ಕೆ, ಮುಂಬೈ (ತಲಾ 5), ಕೆಕೆಆರ್ (3), ರಾಜಸ್ಥಾನ, ಡೆಕ್ಕನ್ ಚಾರ್ಜರ್ಸ್, ಗುಜರಾತ್, ಸನ್​ರೈಸರ್ಸ್ (ತಲಾ 1) ಹಿಂದಿನ 7 ತಂಡಗಳು.

*4: ಆರ್​ಸಿಬಿ ಮತ್ತು ವಿರಾಟ್ ಕೊಹ್ಲಿಗೆ ಇದು 4ನೇ ಐಪಿಎಲ್ ಫೈನಲ್. 2009, 2011, 2016 ಹಿಂದಿನ 3 ಫೈನಲ್.

*2: ಪಂಜಾಬ್ ಕಿಂಗ್ಸ್ ತಂಡ 2014ರ ಬಳಿಕ ಅಂದರೆ 11 ವರ್ಷಗಳ ಬಳಿಕ 2ನೇ ಬಾರಿ ಫೈನಲ್ ಆಡಲಿದೆ.

ಶ್ರೇಯಸ್, ರಿಕಿಗೆ ವಿಶೇಷ ಸಾಧನೆ ಚಾನ್ಸ್

ಕಳೆದ ವರ್ಷ ಕೆಕೆಆರ್ ನಾಯಕರಾಗಿ ಐಪಿಎಲ್ ಟ್ರೋಫಿ ಗೆದ್ದಿದ್ದ ಶ್ರೇಯಸ್ ಅಯ್ಯರ್​ಗೆ ಈ ಬಾರಿ ಪಂಜಾಬ್ ಸಾರಥಿಯಾಗಿ ಈ ಸಾಧನೆ ಪುನರಾವರ್ತಿಸುವ ಸನಿಹ ತಲುಪಿದ್ದಾರೆ. ಈ ಮೂಲಕ ಎರಡು ತಂಡಗಳ ನಾಯಕರಾಗಿ ಐಪಿಎಲ್ ಟ್ರೋಫಿ ಗೆದ್ದ ಮೊದಲಿಗ ಎನಿಸುವ ಅವಕಾಶವಿದೆ. ಇನ್ನು ರಿಕಿ ಪಾಂಟಿಂಗ್ ಈ ಮುನ್ನ 2015ರಲ್ಲಿ ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಆಗಿ ಐಪಿಎಲ್ ಟ್ರೋಫಿ ಗೆದ್ದಿದ್ದರು. ಇದೀಗ ಪಂಜಾಬ್ ಪರವೂ ಈ ಸಾಧನೆ ಮಾಡಿದರೆ, 2 ತಂಡಗಳ ಕೋಚ್ ಆಗಿ ಐಪಿಎಲ್ ಟ್ರೋಫಿ ಗೆದ್ದ ಮೊದಲಿಗರೆನಿಸಲಿದ್ದಾರೆ. ಕಳೆದ ಬಾರಿ ಕೆಕೆಆರ್ ತಂಡದ ಪರ ಐಪಿಎಲ್ ಟ್ರೋಫಿ ಗೆದ್ದಿದ್ದ ಫಿಲ್ ಸಾಲ್ಟ್ ಈ ಬಾರಿ ಆರ್​ಸಿಬಿ ತಂಡದಲ್ಲಿದ್ದಾರೆ. ಹೀಗಾಗಿ ಆರ್​ಸಿಬಿ ಗೆದ್ದರೆ ಸಾಲ್ಟ್ ಸತತ 2 ಐಪಿಎಲ್ ಪ್ರಶಸ್ತಿ ಗೆದ್ದಂತಾಗುತ್ತದೆ.

ಈ ಸಲ ಇಬ್ಬರು ಕನ್ನಡಿಗರಿಗೆ ಕಪ್!

ಈ ಸಲ ಯಾರೇ ಟ್ರೋಫಿ ಗೆದ್ದರೂ ಕರ್ನಾಟಕದ ಇಬ್ಬರು ಕ್ರಿಕೆಟಿಗರಿಗೆ ಅದಕ್ಕೆ ಮುತ್ತಿಡುವ ಅವಕಾಶ ಲಭಿಸಲಿದೆ. ಯಾಕೆಂದರೆ, ಆರ್​ಸಿಬಿ-ಪಂಜಾಬ್ ಎರಡೂ ತಂಡಗಳಲ್ಲಿ ತಲಾ ಇಬ್ಬರು ಕನ್ನಡಿಗರಿದ್ದಾರೆ. ಮಯಾಂಕ್ ಅಗರ್ವಾಲ್, ಮನೋಜ್ ಭಾಂಡಗೆ ಆರ್​ಸಿಬಿ ತಂಡದಲ್ಲಿ ಮತ್ತು ವೈಶಾಕ್ ವಿಜಯ್ಕುಮಾರ್, ಪ್ರವೀಣ್ ದುಬೆ ಪಂಜಾಬ್ ತಂಡದಲ್ಲಿರುವ ಕನ್ನಡಿಗರಾಗಿದ್ದಾರೆ.

ಆರೆಂಜ್, ಪರ್ಪಲ್ ಕ್ಯಾಪ್ ವಿಜೇತರು ಫಿಕ್ಸ್?

ಈ ಬಾರಿ ಫೈನಲ್​ಗೆ ಮುನ್ನವೇ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ವಿಜೇತರ ಬಹುತೇಕ ನಿರ್ಧಾರವಾಗಿದೆ. ಗುಜರಾತ್ ಟೈಟಾನ್ಸ್​ನ ಸಾಯಿ ಸುದರ್ಶನ್ (759) ಆರೆಂಜ್ ಕ್ಯಾಪ್ ವಿಜೇತರಾಗುವುದು ಬಹುತೇಕ ಫಿಕ್ಸ್. ಯಾಕೆಂದರೆ ಫೈನಲ್​ನಲ್ಲಿ ಆಡುತ್ತಿರುವ ಬ್ಯಾಟರ್​ಗಳ ಪೈಕಿ ಇವರಿಗೆ ಸನಿಹದಲ್ಲಿರುವವರು ವಿರಾಟ್ ಕೊಹ್ಲಿ (614) ಮತ್ತು ಶ್ರೇಯಸ್ ಅಯ್ಯರ್ (603). ಇವರಿಬ್ಬರು ಫೈನಲ್​ನಲ್ಲಿ ಕ್ರಮವಾಗಿ 146 ಮತ್ತು 157 ರನ್ ಬಾರಿಸಿದರಷ್ಟೇ ಸುದರ್ಶನ್​ರನ್ನು ಹಿಂದಿಕ್ಕಲು ಸಾಧ್ಯ. ರೇಸ್​ನಲ್ಲಿದ್ದ ಸೂರ್ಯಕುಮಾರ್ (717), ಶುಭಮಾನ್ ಗಿಲ್ (650) ಈಗಾಗಲೆ ಹೊರಬಿದ್ದಿದ್ದಾರೆ. ಇನ್ನು ಗುಜರಾತ್ ಟೈಟಾನ್ಸ್ ಪರ ಮಿಂಚಿದ ಕನ್ನಡಿಗ ಪ್ರಸಿದ್ಧ ಕೃಷ್ಣ (25) ಪರ್ಪಲ್ ಕ್ಯಾಪ್ ಗೆಲುವಿನ ಫೇವರಿಟ್. ರೇಸ್​ನಲ್ಲಿದ್ದ ನೂರ್ ಅಹ್ಮದ್ (24), ಟ್ರೆಂಟ್ ಬೌಲ್ಟ್ (22) ಹೊರಬಿದ್ದಿದ್ದರೆ, ಫೈನಲ್​ನಲ್ಲಿ ಆಡುವ ಬೌಲರ್​ಗಳ ಪೈಕಿ ಜೋಶ್ ಹ್ಯಾಸಲ್​ವುಡ್ (21) ಐದು ವಿಕೆಟ್ ಗೊಂಚಲು ಪಡೆದರಷ್ಟೇ ಪ್ರಸಿದ್ಧ ಕೃಷ್ಣರನ್ನು ಹಿಂದಿಕ್ಕಲು ಸಾಧ್ಯವಿದೆ. ಟೂರ್ನಿಯ ಗರಿಷ್ಠ ಸಿಕ್ಸರ್ ಸಾಧಕರಲ್ಲಿ ನಿಕೋಲಸ್ ಪೂರನ್ (40) ಸದ್ಯ ಮುಂಚೂಣಿಯಲ್ಲಿದ್ದು, ಶ್ರೇಯಸ್ ಅಯ್ಯರ್ (39) ಫೈನಲ್​ನಲ್ಲಿ 2 ಸಿಕ್ಸರ್ ಸಿಡಿಸಿದರೆ ಅವರನ್ನು ಹಿಂದಿಕ್ಕಲಿದ್ದಾರೆ.