ಕ್ರೀಡೆ

IPL 2024: ಹರಾಜು ಪ್ರಕ್ರಿಯೆ ಸಮಯದಲ್ಲಿ ಬದಲಾವಣೆ; ಪರಿಷ್ಕೃತ ವೇಳೆ ಪ್ರಕಟಿಸಿದ ಬಿಸಿಸಿಐ!

ಹೊಸದಿಲ್ಲಿ: 2024ರ ಇಂಡಿಯನ್ ಪ್ರೀಮಿಯರ್ ಲೀಗ್​ ಸಾಕಷ್ಟು ಮನ್ನಣೆ ಪಡೆದುಕೊಳ್ಳುತ್ತಿದ್ದು, ಆರಂಭಕ್ಕೂ ಮುನ್ನವೇ ಕ್ರಿಕೆಟ್​ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಹೆಚ್ಚಿಸಿದೆ. 2024ರ ಏಪ್ರಿಲ್-ಮೇ ತಿಂಗಳಲ್ಲಿ ಪ್ರಾರಂಭವಾಗಲಿರುವ ಈ ಬಾರಿಯ ಐಪಿಎಲ್​ ಆವೃತ್ತಿ ಬಗ್ಗೆ ಹೊಸ ಹೊಸ ಅಪ್ಡೇಟ್​ಗಳು ಹೊರಬೀಳುತ್ತಿವೆ. ಆ ಪೈಕಿ ಇತ್ತೀಚೆಗೆ ಮುಂಬೈ ಇಂಡಿಯನ್ಸ್​ ತಂಡದ ಕ್ಯಾಪ್ಟನ್​ನಲ್ಲಿ ಆದ ಬದಲಾವಣೆ ಕ್ರಿಕೆಟ್​ ವೀಕ್ಷಕರಲ್ಲಿ ತೀವ್ರ ಆಘಾತವನ್ನು ಉಂಟುಮಾಡಿದೆ. ಇದರ ಮಧ್ಯೆ ಐಪಿಎಲ್ 2024ರ ಹರಾಜು ಪ್ರಕ್ರಿಯೆ ಸಮಯದಲ್ಲಿ ಬದಲಾವಣೆಗೊಂಡಿದ್ದು, ಈ ಬಗ್ಗೆ ಬಿಸಿಸಿಐ ಪರಿಷ್ಕ್ರತ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮುಂಬರುವ ಐಪಿಎಲ್ ಹರಾಜು 2024ರ ಪರಿಷ್ಕೃತ ಸಮಯವನ್ನು ಮಂಗಳವಾರ (ಡಿಸೆಂಬರ್ 19) ದುಬೈನ ಕೋಕಾ-ಕೋಲಾ ಅರೆನಾದಲ್ಲಿ ನಡೆಸಲಿದೆ. ಇದಕ್ಕೂ ಮುನ್ನ ಐಪಿಎಲ್ ಹರಾಜು ಪ್ರಕ್ರಿಯೆಯನ್ನು ಭಾರತೀಯ ಕಾಲಮಾನಕ್ಕೆ ತಕ್ಕಂತೆ ಮಧ್ಯಾಹ್ನ 2:30ಕ್ಕೆ ನಡೆಸಲು ನಿರ್ಧರಿಸಲಾಗಿತ್ತು. ಆದ್ರೆ, ಹರಾಜು ಈಗ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಪ್ರಾರಂಭಗೊಳ್ಳುತ್ತದೆ ಎಂದು ಬದಲಾವಣೆಗೊಂಡ ವೇಳಾಪಟ್ಟಿ ತಿಳಿಸಿದೆ.

ಐಪಿಎಲ್ ಹರಾಜಿನಲ್ಲಿ ಒಟ್ಟು 262.95 ಕೋಟಿ ರೂ. ಹಣದ ಮಿತಿಯಿದ್ದು, ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ 38.15 ಕೋಟಿಗಳಷ್ಟು ಹೆಚ್ಚಿನ ಮೊತ್ತವನ್ನು ಹೊಂದಿದೆ. ಮತ್ತೊಂದೆಡೆ, ಲಕ್ನೋ ಸೂಪರ್ ಜೈಂಟ್ಸ್ 13.15 ಕೋಟಿ ರೂ. ಹಣವನ್ನು ಇಟ್ಟುಕೊಂಡಿದೆ. 30 ವಿದೇಶಿ ಆಟಗಾರರ ಸ್ಲಾಟ್‌ಗಳು ಸೇರಿದಂತೆ ಒಟ್ಟು 77 ಸ್ಥಾನಗಳು ಲಭ್ಯವಿದೆ. ಐಪಿಎಲ್ 2024ರ ಹರಾಜಿನಲ್ಲಿ 214 ಭಾರತೀಯರು ಮತ್ತು 119 ವಿದೇಶಿ ಕ್ರಿಕೆಟಿಗರು ಸೇರಿದಂತೆ ಒಟ್ಟು 333 ಆಟಗಾರರು ನೋಂದಾಯಿಸಿಕೊಂಡಿದ್ದಾರೆ.

ಒಟ್ಟು 116 ಕ್ಯಾಪ್ ಪಡೆದ ಆಟಗಾರರಿದ್ದು, 215 ಅನ್‌ಕ್ಯಾಪ್ಡ್ ಆಟಗಾರರಿದ್ದಾರೆ. ಹರಾಜಿನಲ್ಲಿ ಮಿಚೆಲ್ ಸ್ಟಾರ್ಕ್, ಟ್ರಾವಿಸ್ ಹೆಡ್, ಜೋಶ್ ಹ್ಯಾಜಲ್‌ವುಡ್, ಮನೀಶ್ ಪಾಂಡೆ ಮತ್ತು ವನಿಂದು ಹಸರಂಗ ಸೇರಿದಂತ ಕೆಲವು ಸ್ಟಾರ್ ಆಟಗಾರರು ದುಬಾರಿ ಮೊತ್ತಕ್ಕೆ ಖರೀದಿ ಆಗಬಹುದು ಎಂಬ ನಿರೀಕ್ಷೆಗಳು ಹೆಚ್ಚಿವೆ,(ಏಜೆನ್ಸೀಸ್).