ನವದೆಹಲಿ: 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ದ್ವಿತೀಯಾರ್ಧದ ಪಂದ್ಯಗಳು ಮುಕ್ತಾಯವಾಗುತ್ತಿದ್ದು, ಪ್ಲೇ ಆಫ್ ಸುತ್ತಿಗೇರಲು ತಂಡಗಳು ಪ್ರಯತ್ನ ನಡೆಸುತ್ತಿವೆ. ಲೀಗ್ ಹಂತದಲ್ಲಿ ಸಾಕಷ್ಟು ರೋಚಕ ಪಂದ್ಯಗಳಿಗೆ ಈ ಬಾರಿಯ ಸೀಸನ್ ಸಾಕ್ಷಿಯಾಗಿದೆ. ಹೀಗಾಗಿ ಫ್ಲೇ-ಆಫ್ ಪಂದ್ಯಗಳತ್ತ ಕ್ರಿಕೆಟ್ ಪ್ರಿಯರ ಆಸಕ್ತಿ ಹೆಚ್ಚಿದೆ. ಜಿದ್ದಾಜಿದ್ದಿನ ಐಪಿಎಲ್ ಪಂದ್ಯಗಳನ್ನು ವೀಕ್ಷಿಸುತ್ತಿರುವವರ ಸಂಖ್ಯೆಯಲ್ಲಿ ಈ ಬಾರಿ ಗಣನೀಯ ಏರಿಕೆ ಕಂಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಐಪಿಎಲ್ ಪ್ರಸಾರದ ಟಿವಿ ಹಕ್ಕು ಹೊಂದಿರುವ ಸ್ಟಾರ್ ಸ್ಫೋರ್ಟ್ಸ್ ಅಂಕಿ-ಅಂಶಗಳನ್ನು ಪ್ರಕಟಿಸಿದೆ.
ಲೀಗ್ ಹಂತದ 57 ಐಪಿಎಲ್ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಮೂಲಕ ಬರೋಬ್ಬರಿ 47.1 ಕೋಟಿ ಜನರು ವೀಕ್ಷಿಸಿದ್ದಾರೆ. ಇದು ಈ ವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ. ಸ್ಟಾರ್ ಸ್ಪೋರ್ಟ್ ಮೂಲಕ ಬರೋಬ್ಬರಿ 31600 ಕೋಟಿ ನಿಮಿಷ ಐಪಿಎಲ್ ಪಂದ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಈವರೆಗೆ ಒಟ್ಟು 57 ಪಂದ್ಯಗಳ ಪೈಕಿ 36 ಪಂದ್ಯಗಳು ಟಿವಿ ವೀಕ್ಷಣೆಯಲ್ಲಿ 3 ಕೋಟಿಗೂ ಪೀಕ್ ಕಾನ್ಕರೆನ್ಸಿ(Peak Concurrency) ಹೊಂದಿದೆ ಎಂದು ಸ್ಟಾರ್ ಸ್ಪೋರ್ಟ್ಸ್ ಹೇಳಿಕೊಂಡಿದೆ.
ಇದನ್ನೂ ಓದಿ: IPL 2023 | ದಾಖಲೆ ಬರೆದ ಸ್ಟಾರ್ ಸ್ಪೋರ್ಟ್ಸ್; ಅತಿ ಹೆಚ್ಚು ವೀಕ್ಷಣೆ ಪಡೆದ ಟಾಪ್-10 ಪಂದ್ಯಗಳ ಪಟ್ಟಿ ಇಂತಿದೆ…
ಐಪಿಎಲ್ 16ನೇ ಆವೃತ್ತಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ಮೂಲಕ ಆರಂಭಗೊಂಡಿತು. ಇದೀಗ ಈ ಪಂದ್ಯವನ್ನು ಬರೋಬ್ಬರಿ 5.6 ಕೋಟಿ ಜನರು ವೀಕ್ಷಿಸಿದ್ದಾರೆ ಎಂದು ಸ್ಟಾರ್ ಸ್ಫೋರ್ಟ್ಸ್ ಹೇಳಿಕೊಂಡಿದೆ. ಇದು ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ವೀಕ್ಷಣೆ ಪಡೆದ ಪಂದ್ಯವಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವಿನ ಪಂದ್ಯವನ್ನು 5.2 ಕೋಟಿ ಜನರು ವೀಕ್ಷಿಸಿದ್ದಾರೆ. ಪ್ರತಿ ಬಾರಿ ಐಪಿಎಲ್ನಲ್ಲಿ ಸಿಎಸ್ಕೆ ಹಾಗೂ ಆರ್ಸಿಬಿ ನಡುವಣ ಪಂದ್ಯ ಸಾಕಷ್ಟು ಕುತೂಹಲಕ್ಕೆ ಕಾರಣವಾಗುತ್ತದೆ. ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಈ ಎರಡು ತಂಡಗಳು ಹೊಂದಿವೆ. ಹೀಗಾಗಿ ಯಾವ ತಂಡ ಗೆಲ್ಲುತ್ತದೆ ಎಂಬ ನೀರಿಕ್ಷೆಯೂ ಹೆಚ್ಚಿರುತ್ತದೆ.
ಅತೀ ಹೆಚ್ಚು ವೀಕ್ಷಣೆ ಪಡೆದ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತಾ ನೈಟ್ ರೈಡರ್ಸ್ ನಡುವಿನ ಸೀಸನ್ನ 33ನೇ ಪಂದ್ಯವೂ ಒಂದು. ಈ ಪಂದ್ಯವನ್ನು 5.1 ಕೋಟಿ ಜನರು ಸ್ಟಾರ್ ಸ್ಪೋರ್ಟ್ಸ್ ಮೂಲಕ ವೀಕ್ಷಿಸಿದ್ದಾರೆ.