ನವದೆಹಲಿ: ಪಂಜಾಬ್ ಕಿಂಗ್ಸ್ ತಂಡದ ಸ್ಫೋಟಕ ದಾಂಡಿಗ ಕ್ರಿಸ್ ಗೇಲ್ ಬಗ್ಗೆ ಯಾರಿಗೂ ಪರಿಚಯವೇ ಬೇಕಿಲ್ಲ. ಸಿಕ್ಸರ್ ವಿಚಾರಕ್ಕೆ ಬಂದಾಗ ಮೊದಲ ಹೆಸರು ಬರುವುದೇ ಯೂನಿವರ್ಸಲ್ ಬಾಸ್ ಗೇಲ್, ಚುಟುಕು ಕ್ರಿಕೆಟ್ನಲ್ಲಿ 1000ಕ್ಕೂ ಹೆಚ್ಚು ಸಿಕ್ಸರ್ ಸಿಡಿಸಿದ ವಿಶ್ವದ ಏಕೈಕ ಆಟಗಾರನೆಂಬ ಹೆಸರಿಗೆ ಗೇಲ್ ಭಾಜನರಾಗಿದ್ದಾರೆ. ಈಗಲೂ ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದ್ದಾರೆ.
ಕ್ರಿಕೆಟ್ ಹೊರತುಪಡಿಸಿದರೆ, ಗೇಲ್ ತುಂಬಾ ಮೋಜು-ಮಸ್ತಿ ಮಾಡುವ ಹವ್ಯಾಸ ಹೊಂದಿದ್ದಾರೆ. ಅದಕ್ಕೆ ಉದಾಹರಣೆ ಅವರ ಇನ್ಸ್ಟಾಗ್ರಾಂನಲ್ಲಿರುವ ಸಾಕಷ್ಟು ವಿಡಿಯೋಗಳೇ ಸಾಕ್ಷಿ. ಇಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ ಸೆಣಸಾಡಲಿದ್ದು, ನಿನ್ನೆ ಸಂಜೆಯೇ ಪಂಜಾಬ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಗೇಲ್ಗೆ ಸಂಬಂಧಿಸಿದ ವಿಡಿಯೋವೊಂದನ್ನು ಶೇರ್ ಮಾಡಿ ಕೊಂಡಿದೆ. ವಿಡಿಯೋಗೆ ಗೇಲ್ ಅವರು "ಎಗ್-ಸೆಪ್ಸೆನಲ್" ಬ್ರೇಕ್ಫಾಸ್ಟ್ ಎಂಜಾಯ್ ಮಾಡುತ್ತಿದ್ದಾರೆ ಎಂದು ಅಡಿಬರಹ ನೀಡಲಾಗಿದೆ.
ಇಂದು ಎಲ್ಲರೂ ಏಳುವ ಮುಂಚೆಯೇ ನಾನು ಎದ್ದು ಬಿಟ್ಟೆ ಎಂದಿರುವ ಗೇಲ್, ಹೋಟೆಲ್ನ ಊಟದ ಏರಿಯಾಗೆ ಬಂದು ಏಕಾಂಗಿಯಾಗಿ ನೆಮ್ಮದಿಯಿಂದ ತಮ್ಮ ಬ್ರೇಕ್ಫಾಸ್ಟ್ ಮುಗಿಸಿದ್ದಾರೆ. ಈ ವೇಳೆ ಆಮ್ಲೆಟ್ ಸವಿದ ಗೇಲ್, ಕೊನೆಯಲ್ಲಿ ತಮಗೆ ಚೆನ್ನಾಗಿ ಉಣಬಡಿಸಿದ ಹೋಟೆಲ್ ಸಿಬ್ಬಂದಿಗೆ ಧನ್ಯವಾದ ತಿಳಿಸುತ್ತಾ ಕಲ್ಲಂಗಡಿ ಹಣ್ಣಿನ ತುಣುಕೊಂದನ್ನು ತಿನ್ನುತ್ತಾ ವಿಡಿಯೋ ಮುಗಿಸಿದರು.
ಇನ್ನು ಐಪಿಎಲ್ ವಿಚಾರಕ್ಕೆ ಬಂದರೆ ಗೇಲ್ ಮೂರು ಪಂದ್ಯಗಳಲ್ಲಿ 61 ರನ್ ಮಾತ್ರ ಕಲೆಹಾಕಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ 40 ರನ್ ಕಲೆಹಾಕುವ ಮೂಲಕ ಉತ್ತಮವಾಗಿ ಟೂರ್ನಿ ಆರಂಭಿಸಿದ ಗೇಲ್ ಉಳಿದ ಚೆನ್ನೈ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಎರಡು ಪಂದ್ಯಗಳಲ್ಲಿ ಕ್ರಮವಾಗಿ 10 ಮತ್ತು 11 ರನ್ ಕಲೆಹಾಕಿದರು.
ಟೂರ್ನಿಯಲ್ಲಿ ಪಂಜಾಬ್ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಕೈಚೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಪಂಜಾಬ್ ಕುಸಿದಿದೆ. ಇಂದು ಎಸ್ಆರ್ಎಚ್ ವಿರುದ್ಧ ನಡೆಯುವ ಪಂದ್ಯದಲ್ಲಿ ಪಂಜಾಬ್ ಮತ್ತೆ ಪುಟಿದೇಳುತ್ತಾ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್)