More

    ಸೋತವರ ಕಾಳಗದಲ್ಲಿ ಗೆಲುವಿಗೆ ಹೋರಾಟ; ಪಂಜಾಬ್ ಕಿಂಗ್ಸ್ -ಸನ್‌ರೈಸರ್ಸ್‌ ಹೈದರಾಬಾದ್ ಹಣಾಹಣಿ

    ಚೆನ್ನೈ: ಟೂರ್ನಿ ಆರಂಭಗೊಂಡು 12 ದಿನಗಳಾದರೂ ಇದುವರೆಗೆ ಗೆಲುವು ಕಾಣದ ಏಕೈಕ ತಂಡ ಎನಿಸಿಕೊಂಡಿರುವ ಸನ್‌ರೈಸರ್ಸ್‌ ಹೈದರಾಬಾದ್ ಹಾಗೂ ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿರುವ ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್-14ರ ತಮ್ಮ 4ನೇ ಪಂದ್ಯದಲ್ಲಿ ಬುಧವಾರ ಎದುರಾಗಲಿವೆ. ಸೋತವರ ಗೆಲುವಿನ ಹೋರಾಟಕ್ಕೆ ಚೆಪಾಕ್‌ನ ಎಂಎ ಚಿದಂಬರಂ ಸ್ಟೇಡಿಯಂ ಸಜ್ಜಾಗಿದೆ.

    ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರುವ ಸನ್‌ರೈಸರ್ಸ್‌ ತಂಡ ಗೆಲುವಿಗಾಗಿ ಪರಿತಪಿಸುತ್ತಿದೆ. ವಿಶ್ವ ಶ್ರೇಷ್ಠ ಆರಂಭಿಕ ಜೋಡಿ ತಂಡದಲ್ಲಿದ್ದರೂ ಕಳಪೆ ಮಧ್ಯಮ ಕ್ರಮಾಂಕವೇ ತಂಡಕ್ಕೆ ದೊಡ್ಡ ಮಾರಕವಾಗಿದೆ. ತಂಡಕ್ಕೆ ಹನ್ನೊಂದರ ಬಳಗದ ಆಯ್ಕೆಯೇ ದೊಡ್ಡ ಗೊಂದಲ ಮಯವಾಗಿದೆ. ಕಳೆದ ಪಂದ್ಯದಲ್ಲಿ ನಾಲ್ಕು ಬದಲಾವಣೆ ಮಾಡಿಕೊಂಡಿದ್ದರೂ ಮುಂಬೈ ಎದುರು 13 ರನ್‌ಗಳಿಂದ ಮುಗ್ಗರಿಸಿತ್ತು. ಕೇವಲ 35 ರನ್‌ಗಳ ಅಂತರದಲ್ಲಿ 7 ವಿಕೆಟ್ ಕೈಚೆಲ್ಲಿದ್ದೇ ತಂಡದ ಮಧ್ಯಮ ಕ್ರಮಾಂಕದ ಕಳಪೆ ನಿರ್ವಹಣೆಯನ್ನು ತೋರುತ್ತದೆ. ಮತ್ತೊಂದೆಡೆ, ರಾಜಸ್ಥಾನ ರಾಯಲ್ಸ್ ಎದುರು 4 ರನ್‌ಗಳಿಂದ ಜಯ ದಾಖಲಿಸಿದ ಬಳಿಕ ಸತತ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಸಿಎಸ್‌ಕೆ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶರಣಾಗಿತ್ತು. ಕರ್ನಾಟಕದ ಆರಂಭಿಕ ಜೋಡಿ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಫಾರ್ಮ್‌ಗೆ ಮರಳಿರುವುದು ಪ್ಲಸ್ ಪಾಯಿಂಟ್. ಆದರೆ, ಮಧ್ಯಮ ಕ್ರಮಾಂಕದಲ್ಲಿ ನಿರೀಕ್ಷಿತ ನಿರ್ವಹಣೆ ಕಂಡುಬರುತ್ತಿಲ್ಲ. ಭರವಸೆ ಮೊಹಮದ್ ಶಮಿ ಹಾಗೂ ಆಸ್ಟ್ರೇಲಿಯಾದ ಜೇ ರಿಚರ್ಡ್‌ಸನ್ ಹಾಗೂ ರಿಲಿ ಮೆರೆಡಿತ್ ದುಬಾರಿಯಾಗುತ್ತಿದ್ದಾರೆ. ಯುವ ವೇಗಿ ಅರ್ಷದೀಪ್ ಸಿಂಗ್ ಉತ್ತಮ ನಿರ್ವಹಣೆ ನೀಡುತ್ತಿದ್ದಾರೆ.

    ಸನ್‌ರೈಸರ್ಸ್‌: ಮುಂಬೈ ಎದುರು ನಾಲ್ಕು ಬದಲಾವಣೆಯೊಂದಿಗೆ ಕಣಕ್ಕಿಳಿದಿದ್ದ ಸನ್‌ರೈಸರ್ಸ್‌ ತಂಡ ಈ ಪಂದ್ಯದಲ್ಲೂ ಕೆಲ ಬದಲಾವಣೆ ಮಾಡಿಕೊಳ್ಳುವುದು ಪಕ್ಕಾ ಆಗಿದೆ. ಅಭಿಷೇಕ್ ಶರ್ಮ, ಅಬ್ದುಲ್ ಸಮದ್ ಬದಲಿಗೆ ಕೇದಾರ್ ಜಾಧವ್, ಪ್ರಿಯಂ ಗಾರ್ಗ್ ಸ್ಥಾನ ಪಡೆಯಬಹುದು. ನಟರಾಜನ್ ಬದಲಿಗೆ ಸ್ಥಾನ ಪಡೆದಿದ್ದ ಖಲೀಲ್ ಅಹ್ಮದ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದು, ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
    ಕಳೆದ ಪಂದ್ಯ: ಮುಂಬೈ ಎದುರು 13 ರನ್ ಸೋಲು
    ಪಂಜಾಬ್ ಕಿಂಗ್ಸ್: ದುಬಾರಿಯಾಗುತ್ತಿರುವ ರಿಲೀ ಮೆರಿಡಿತ್ ಹಾಗೂ ಜೇ ರಿಚರ್ಡ್‌ಸನ್ ಇಬ್ಬರಲ್ಲಿ ಒಬ್ಬರ ಬದಲಿಗೆ ಕ್ರಿಸ್ ಜೋರ್ಡನ್, ಸತತ ವೈಫಲ್ಯ ಅನುಭವಿಸುತ್ತಿರುವ ನಿಕೋಲಸ್ ಪೂರನ್ ಬದಲಿಗೆ ಮೊಯ್ಸಿಸ್ ಹೆನ್ರಿಕ್ಸ್ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.
    ಕಳೆದ ಪಂದ್ಯ: ಡೆಲ್ಲಿ ಎದುರು 6 ವಿಕೆಟ್ ಸೋಲು

    ಮುಖಾಮುಖಿ: 16, ಸನ್‌ರೈಸರ್ಸ್‌: 11, ಪಂಜಾಬ್ ಕಿಂಗ್ಸ್ : 5
    ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
    ಆರಂಭ: ಮಧ್ಯಾಹ್ನ 3.30

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts