ಕ್ರೀಡೆ

ಆಸ್ಟ್ರೇಲಿಯಾ-ಇಂಗ್ಲೆಂಡ್​ ಪಂದ್ಯದ ಆರಂಭಕ್ಕೂ ಮುನ್ನ ಲಾಹೋರ್​ ಸ್ಟೇಡಿಯಂನಲ್ಲಿ ಮೊಳಗಿತು ಭಾರತದ ರಾಷ್ಟ್ರಗೀತೆ! Indian National Anthem

Indian National Anthem : ಮಿನಿ ಏಕದಿನ ವಿಶ್ವಕಪ್​ ಎಂದೇ ಖ್ಯಾತಿ ಪಡೆದಿರುವ ಚಾಂಪಿಯನ್ಸ್ ಟ್ರೋಫಿಯನ್ನು ಈ ಬಾರಿ ಪಾಕಿಸ್ತಾನ ಆಯೋಜನೆ ಮಾಡಿದೆ. ಫೆ.19ರಂದು ಆರಂಭವಾದ ಈ ಮೆಗಾ ಈವೆಂಟ್​ ಇಂದಿಗೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇಂದು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದ ಆರಂಭಕ್ಕೂ ಮುನ್ನ ಒಂದು ಅಚ್ಚರಿ ಘಟನೆ ನಡೆದಿದೆ. ಅದೇನೆಂದರೆ, ಭಾರತದ ರಾಷ್ಟ್ರಗೀತೆಯನ್ನು ನುಡಿಸಲಾಗಿದೆ.

ಹೌದು, ಭಾರತ ಮತ್ತು ಪಾಕಿಸ್ತಾನ ಸಾಂಪ್ರದಾಯಿಕ ಎದುರಾಳಿಗಳು ಎಂಬುದು ನಿಮಗೆ ಗೊತ್ತಿದೆ. ಭದ್ರತಾ ದೃಷ್ಟಿಯಿಂದ ಭಾರತ ತನ್ನೆಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಮೊನ್ನೆಯಷ್ಟೇ (ಫೆ.20) ಟೀಮ್​ ಇಂಡಿಯಾ ಬಾಂಗ್ಲಾದೇಶದ ವಿರುದ್ಧ ಮೊದಲ ಪಂದ್ಯವನ್ನು ಆಡಿ ಭರ್ಜರಿ ಗೆಲುವು ದಾಖಲಿಸಿದೆ. ನಾಳೆ (ಫೆ.23) ಇಂಡೋ-ಪಾಕ್​ ನಡುವೆ ಹೈವೋಲ್ಟೇಜ್​ ಪಂದ್ಯ ದುಬೈನಲ್ಲಿ ನಡೆಯಲಿದೆ.

ಯಾವುದೇ ಐಸಿಸಿ ಟೂರ್ನಿಯಾಗಿರಲಿ ಪಂದ್ಯದ ಆರಂಭಕ್ಕೂ ಮುನ್ನ ಆಯಾ ತಂಡಗಳ ರಾಷ್ಟ್ರಗೀತೆ ನುಡಿಸುವುದು ಸಾಮಾನ್ಯ. ಆದರೆ, ಪಾಕಿಸ್ತಾನದ ಲಾಹೋರ್​ನ ಗಡಾಫಿ ಕ್ರೀಡಾಂಗಣದಲ್ಲಿ ಇಂದು ನಡೆದಿದ್ದೇ ಬೇರೆ.

ಇಂದು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ನಡುವೆ ಗಡಾಫಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ. ಪಂದ್ಯಕ್ಕೂ ಮುನ್ನ ಎರಡೂ ತಂಡಗಳ ರಾಷ್ಟ್ರಗೀತೆಗಳನ್ನು ನುಡಿಸಲಾಗುತ್ತದೆ. ಈ ವೇಳೆ ಮಹಾ ಮಿಸ್ಟೇಕ್​ ಒಂದು ನಡೆದಿದೆ. ಅದೇನೆಂದರೆ, ಈ ಮೆಗಾ ಸರಣಿಯನ್ನು ಆಯೋಜಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆಸ್ಟ್ರೇಲಿಯಾದ ರಾಷ್ಟ್ರಗೀತೆಯ ಬದಲಿಗೆ ಕ್ರೀಡಾಂಗಣದಲ್ಲಿ ಭಾರತದ ರಾಷ್ಟ್ರಗೀತೆಯನ್ನು ಪ್ಲೇ ಮಾಡಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇಂಗ್ಲೆಂಡ್ ರಾಷ್ಟ್ರಗೀತೆ ಮುಗಿದ ನಂತರ ಆಸ್ಟ್ರೇಲಿಯಾದ ರಾಷ್ಟ್ರಗೀತೆ ನುಡಿಸಬೇಕಿತ್ತು. ಆದರೆ, ಭಾರತದ ರಾಷ್ಟ್ರಗೀತೆಯನ್ನು ಎರಡು ಸೆಕೆಂಡ್​​ಗಳ ಕಾಲ ನುಡಿಸಲಾಯಿತು. ಈ ತಪ್ಪು ಅರಿವಾದ ತಕ್ಷಣ, ಅಧಿಕಾರಿಗಳು ಹಾಡನ್ನು ಆಫ್ ಮಾಡಿದರು. ಈ ವೇಳೆ ಕ್ರೀಡಾಂಗಣದಲ್ಲಿ ಅನೇಕ ಮಂದಿ ಕೂಗಾಡಿದರು. ಈ ಘಟನೆಯ ವಿಡಿಯೋ ಈಗ ವೈರಲ್ ಆಗುತ್ತಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. (ಏಜೆನ್ಸೀಸ್​)