India vs New Zealand: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನ ಎರಡನೇ ದಿನದಾಟದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡದ ಬೌಲಿಂಗ್ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ ಕೇವಲ 46 ರನ್ಗಳ ಅಲ್ಪ ಮೊತ್ತಕ್ಕೆ ಸರ್ವಪತನ ಕಂಡಿದೆ.
ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್, ಕೆ.ಎಲ್. ರಾಹುಲ್, ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ಯಾವುದೇ ರನ್ ಖಾತೆ ತೆರೆಯದೇ ಶೂನ್ಯಕ್ಕೆ ಔಟಾಗುವ ಮೂಲಕ ಭಾರಿ ನಿರಾಸೆ ಮೂಡಿಸಿದರು.
ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ದಿನದ ಆಟ ಮಳೆಯಿಂದಾಗಿ ರದ್ದಾಯಿತು. ಇಂದು ಎರಡನೇ ದಿನ ಆಟ ಆರಂಭಿಸಿದ ಭಾರತ ತೀರಾ ಕಳಪೆ ಪ್ರದರ್ಶನವನ್ನು ನೀಡಿದೆ. ರಿಷಭ್ ಪಂತ್ (20) ಹಾಗೂ ಯಶಸ್ವಿ ಜೈಸ್ವಾಲ್ (13) ರನ್ ಬಿಟ್ಟರೆ ಉಳಿದ ಯಾವೊಬ್ಬ ಬ್ಯಾಟ್ಸ್ಮನ್ ಕೂಡ ಎರಡಂಕಿಯನ್ನು ದಾಟಲಿಲ್ಲ. ಅಂತಿಮವಾಗಿ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 31.2 ಓವರ್ಗಳಲ್ಲಿ ಕೇವಲ 46 ರನ್ಗೆ ಸರ್ವಪತನ ಕಂಡಿತು.
ನ್ಯೂಜಿಲೆಂಡ್ ಪರ ಮಿಂಚಿನ ಬೌಲಿಂಗ್ ದಾಳಿ ಮಾಡಿದ ಮ್ಯಾಟ್ ಹೆನ್ರಿ 5 ವಿಕೆಟ್ ಪಡೆದರೆ, ಹೆನ್ರಿಗೆ ಸಾಥ್ ನೀಡಿದ ವಿಲಿಯಂ ಒರೂರ್ಕೆ 4 ವಿಕೆಟ್ ಕಬಳಿಸಿ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳನ್ನು ಕಾಡಿದರು. ಉಳಿದಂತೆ ಟಿಮ್ ಸೌಥಿ ಒಂದು ವಿಕೆಟ್ ಗಳಿಸಿದರು.
ಕಡಿಮೆ ಮೊತ್ತಕ್ಕೆ ಆಲೌಟ್ ಆಗುವ ಮೂಲಕ ಟೀಮ್ ಇಂಡಿಯಾ ಅನಪೇಕ್ಷಿತ ದಾಖಲೆ ಬರೆದಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಕಡಿಮೆ ಮೊತ್ತಕ್ಕೆ ಕುಸಿದ ಮೂರನೇ ತಂಡ ಎನಿಸಿಕೊಂಡಿದೆ. ಅಲ್ಲದೆ, ಇದು ತವರಿನಲ್ಲಿ ಭಾರತದ ಅತ್ಯಂತ ಕಡಿಮೆ ಟೆಸ್ಟ್ ಮೊತ್ತವಾಗಿದೆ.
ಟೆಸ್ಟ್ ಪಂದ್ಯದಲ್ಲಿ ಭಾರತದ ಅತ್ಯಂತ ಕಡಿಮೆ ಮೊತ್ತ
* 2020ರಲ್ಲಿ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 36ಕ್ಕೆ ಆಲೌಟ್
* 1974ರಲ್ಲಿ ಲಂಡನ್‌ನಲ್ಲಿ ಇಂಗ್ಲೆಂಡ್ ವಿರುದ್ಧ 42ಕ್ಕೆ ಆಲೌಟ್
* 2024ರಲ್ಲಿ ಬೆಂಗಳೂರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 46ಕ್ಕೆ ಆಲೌಟ್
* 1947ರಲ್ಲಿ ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 58ಕ್ಕೆ ಆಲೌಟ್
* 1952 ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ವಿರುದ್ಧ 58ಕ್ಕೆ ಆಲೌಟ್
ಇನ್ನು ತವರಿನಲ್ಲಿ 1987ರಲ್ಲಿ ದೆಹಲಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 75 ರನ್ಗೆ ಆಲ್ ಔಟ್ ಆಗಿತ್ತು. (ಏಜೆನ್ಸೀಸ್)