ತಿರುವನಂತಪುರಂ: ಇಲ್ಲಿನ ಗ್ರೀನ್ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆತಿಥೇಯ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ನಡುವಿನ ಐದು ಟಿ20 ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ (53), ಇಶಾನ್ ಕಿಶಾನ್ (52), ರುತುರಾಜ್ ಗಾಯಕ್ವಾಡ್ (58) ಆಕರ್ಷಕ ಅರ್ಧಶತಕಗಳ ನೆರವಿನಿಂದ ಟೀಮ್ ಇಂಡಿಯಾದ ಬೃಹತ್ ಮೊತ್ತವನ್ನು ಕಲೆಹಾಕಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 235 ರನ್ ಕಲೆಹಾಕಿತು. ಈ ಮೂಲಕ ಆಸೀಸ್ ಪಡೆಗೆ 236 ರನ್ಗಳ ಬೃಹತ್ ಗುರಿಯನ್ನು ನೀಡಿದೆ.
ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ರುತುರಾಜ್ ಗಾಯಕ್ವಾಡ್ ಮೊದಲ ವಿಕೆಟ್ಗೆ 77 ರನ್ಗಳ ಜತೆಯಾಟವಾಡಿ ಉತ್ತಮ ಆರಂಭ ಒದಗಿಸಿದರು. ಸ್ಫೋಟಕ ಬ್ಯಾಟಿಂಗ್ ಮಾಡಿದ ಜೈಸ್ವಾಲ್ ಕೇವಲ 25 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 53 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಮೂರನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದ ಇಶಾನ್ ಕಿಶಾನ್ ಕೂಡ ವೇಗವಾಗಿ ಬ್ಯಾಟ್ ಬೀಸಿದರು. ಕೇವಲ 32 ಎಸೆತಗಳನ್ನು ಎದುರಿಸಿದ ಕಿಶಾನ್ 3 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 52 ರನ್ ಗಳಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ನಾಯಕ ಸೂರ್ಯಕುಮಾರ್ ಯಾದವ್ 10 ಎಸೆತಗಳಲ್ಲಿ 1 ಸಿಕ್ಸರ್ ನೆರವಿನಿಂದ 19 ರನ್ ಗಳಿಸಿ ಔಟಾದರು.
ಆರಂಭಿಕರಾಗಿ ಕಣಕ್ಕಿಳಿದು ಕೊನೆಯ ಓವರ್ವರೆಗೂ ಕ್ರೀಸ್ನಲ್ಲಿದ್ದ ರುತುರಾಜ್ ಗಾಯಕ್ವಾಡ್ ತಾಳ್ಮೆಯ ಆಟವಾಡಿದರು. 43 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ ನೆರವಿನೊಂದಿಗೆ 58 ರನ್ಗಳಿಸಿ ಔಟಾದರು. 19ನೇ ಓವರ್ನಲ್ಲಿ ಕ್ರೀಸ್ಗೆ ಬಂದ ಭರವಸೆಯ ಆಟಗಾರ ರಿಂಕು ಸಿಂಗ್ ಕೊನೆಯಲ್ಲಿ ಅಬ್ಬರಿಸಿ ಬೊಬ್ಬಿರಿದರು. ಕೇವಲ 9 ಎಸೆತಗಳನ್ನು ಎದುರಿಸಿದ ರಿಂಕು 4 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 31 ರನ್ ಗಳಿಸಿ ಅಜೇಯರಾಗಿ ಉಳಿದರು. ತಿಲಕ್ ವರ್ಮ ಸಹ 7 ರನ್ಗಳ ಕಾಣಿಕೆ ನೀಡಿ ಅಜೇಯರಾಗಿ ಉಳಿದರು.
ಆಸೀಸ್ ಪರ ಮಾರ್ಕಸ್ ಸ್ಟೋನಿಸ್ ಒಂದು ವಿಕೆಟ್ ಪಡೆದರೆ, ನಾಥನ್ ಎಲಿಸ್ 3 ವಿಕೆಟ್ ಪಡೆದು ಮಿಂಚಿದರು.