ಕ್ರೀಡೆ

ಬದಲಾಗದ ಪಾಕ್​ ನಿಲುವು ಭಾರತಕ್ಕೆ Champions Trophy ಸ್ಥಳಾಂತರಿಸಲು ಯೋಜನೆ ರೂಪಿಸಿದ ICC

ನವದೆಹಲಿ: 2025ರ ಫೆಬ್ರವರಿ 19ರಿಂದ ಮಾರ್ಚ್​ 09ರವರೆಗೂ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿ (Champions Trophy) ವಿವಾದಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದ್ದು, ಸದ್ಯ ಹುಟ್ಟಿಕೊಂಡಿರುವ ಸಮಸ್ಯೆಗಳಿಗೆ ಇದುವರೆಗೂ ಯಾವುದೇ ಪರಿಹಾರ ಸಿಕ್ಕಿಲ್ಲ. ಈಗಾಗಲೇ ಭದ್ರತೆಯ ಕಾರಣ ನೀಡಿ ಭಾರತ (Team India) ಪಾಕ್​ ನೆಲದಲ್ಲಿ ಆಡುವುದಿಲ್ಲ ಎಂದು ಹೇಳಿದ್ದು, ಹೈಬ್ರಿಡ್​ ಮಾದರಿಯಲ್ಲಿ ನಡೆಸಿದರೆ ಮಾತ್ರ ಭಾಗಿಯಾಗುವುದಾಗಿ ಹೇಳಿದೆ. ಆದರೆ, ಪಾಕಿಸ್ತಾನ ಮಾತ್ರ ಒಂದಿಲ್ಲೊಂದು ಕಾರಣ ನೀಡಿ ಹೈಬ್ರಿಡ್​ ಮಾದರಿಯಲ್ಲಿ ಟೂರ್ನಿ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದು, ಐಸಿಸಿ ಇನ್ನೂ ಟೂರ್ನಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ.

ಉಗ್ರವಾದ (Terrorism) ಹಾಗೂ ಆರ್ಥಿಕ ಸಂಕಷ್ಟದಿಂದ (Financial Crisis) ಬಳಲುತ್ತಿರುವ ಪಾಕಿಸ್ತಾನಕ್ಕೆ 28 ವರ್ಷಗಳ ಬಳಿಕ ಐಸಿಸಿ ಟೂರ್ನಿ (ICC Tourney) ಆಯೋಜನೆ ಮಾಡುವ ಅವಕಾಶ ದೊರೆತ್ತಿದ್ದು, ಇದನ್ನು ಕಳೆದುಕೊಳ್ಳಲು ಪಾಕ್​ ಸರ್ಕಾರ ಹಾಗೂ ಅಲ್ಲಿನ ಕ್ರಿಕೆಟ್​ ಮಂಡಳಿ ಸಿದ್ದವಿಲ್ಲ. ಹೀಗಾಗಿ ಭಾರತದ ಮನವೊಲಿಸಲು ಶತಪ್ರಯತ್ನ ಮಾಡುತ್ತಿದ್ದು, ಟೀಮ್​ ಇಂಡಿಯಾದ ಎಲ್ಲಾ ಪಂದ್ಯಗಳನ್ನು ಲಾಹೋರ್​ನ ಗಡಾಫಿ ಕ್ರೀಢಾಂಗಣದಲ್ಲಿ ಬಿಗಿಭದ್ರತೆಯೊಂದಿಗೆ ನಡೆಸುವುದಾಗಿ ಹೇಳಿದೆ.

ಭಾರತದಂತೆ ಪಾಕಿಸ್ತಾನ ಕೂಡ ಗಟ್ಟಿ ನಿಲುವನ್ನು ತಾಳಿದ್ದು, ಐಸಿಸಿ ಬದಲಿ ತಾಣದ ಹುಡುಕಾಟದಲ್ಲಿದೆ. ಈಗಾಗಲೇ ದಕ್ಷಿಣ ಆಫ್ರಿಕಾಕ್ಕೆ (South Africa) ಟೂರ್ನಿಯನ್ನು ಸ್ಥಳಾಂತರಿಸಲು ಐಸಿಸಿ (ICC) ಯೋಜನೆ ರೂಪಿಸಿದ್ದು, ಇದೆಲ್ಲದರ ನಡುವೆ ಇದೀಗ ಟೂರ್ನಿಯನ್ನು (Champions Trophy) ಭಾರತದಲ್ಲಿ ಆಯೋಜಿಸಲು ಐಸಿಸಿ ಯೋಜನೆ ಹಾಕಿಕೊಂಡಿದ್ದು, ಈ ಬಗ್ಗೆ ಪ್ರಸ್ತಾವನೆಯನ್ನು ಇರಿಸಿದೆ ಎಂದು ಹೇಳಲಾಗಿದೆ. Sports Tak ವರದಿ ಮಾಡಿರುವ ಪ್ರಕಾರ ಪಾಕಿಸ್ತಾವವು ಭಾರತದಂತೆ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದು, ಈ ನಿಟ್ಟಿನಲ್ಲಿ ಐಸಿಸಿ ಟೂರ್ನಿಯನ್ನು (Champions Trophy) ಭಾರತದಲ್ಲಿ ಆಯೋಜಿಸಲು ಮುಂದಾಗಿರುವುದಾಗಿ ವರದಿಯಾಗಿದೆ. ಈ ವಿಚಾರ ಇನ್ನು ಮಾತುಕತೆ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ಹೊರಬೀಳಲಿದೆ.

ಆರ್ಥಿಕ ಸಂಕಷ್ಟದ ಭಯ

ಭಾರತ ತಂಡ (Team India) ಚಾಂಪಿಯನ್ಸ್ ಟ್ರೋಫಿ (Champions Trophy) ಆಡಲು ಪಾಕಿಸ್ತಾನಕ್ಕೆ ತೆರಳದಿದ್ದರೆ ಆ ದೇಶದ ಕ್ರಿಕೆಟ್ ಮಂಡಳಿಗೆ ಭಾರಿ ನಷ್ಟವಾಗಲಿದೆ. ಈಗಾಗಲೇ ಪಾಕಿಸ್ತಾನ ನಷ್ಟದ ಹಾದಿಯಲ್ಲಿದ್ದು, ಕ್ರಿಕೆಟ್​ನಲ್ಲಿ ಟೀಮ್​ ಇಂಡಿಯಾಗೆ (Team India) ಇರುವ ಕ್ರೇಜ್​ ಬೇರೆ ಯಾವ ದೇಶಕ್ಕೂ ಇಲ್ಲ. ಹೀಗಾಗಿ ಟೀಮ್​ ಇಂಡಿಯಾ ಪಾಕಿಸ್ತಾನಕ್ಕೆ ಹೋದಲ್ಲಿ ಅದರಿಂದ ಆರ್ಥಿಕವಾಗಿಯೂ ಲಾಭವಾಗಲಿದೆ ಮತ್ತು ಪಾಕ್​ ಮೇಲೆ ಇರುವ ಕಳಂಕವೂ ದೂರವಾಗಲಿದೆ ಎಂಬ ನಂಬಿಕೆಯಲ್ಲಿ ಅಲ್ಲಿನ ಕ್ರಿಕೆಟ್​ ಮಂಡಳಿ ಹಾಗೂ ಸರ್ಕಾರ ಕಾದು ಕುಳಿತಿದೆ. ಅಲ್ಲದೇ, ಉಭಯ ದೇಶಗಳ ನಡುವಿನ ಸಂಬಂಧವೂ ಕೂಡ ಕ್ರಿಕೆಟ್​ ಮೂಲಕ ಮತ್ತೆ ಚಿಗುರಲಿದೆ ಎಂಬ ನಿರೀಕ್ಷೆಯಲ್ಲಿದೆ. ಆದರೆ, ಪಿಸಿಬಿ (PCB) ನಿರೀಕ್ಷೆಗೆ ಬಿಸಿಸಿಐ (BCCI) ಆಘಾತ ನೀಡಿದ್ದು, ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಬರುವುದಿಲ್ಲ ಎಂದು ಕಡ್ಡಿ ಮರಿದಂತೆ ಹೇಳಿದೆ.

ಇದಲ್ಲದೆ ಭದ್ರತೆಯ ಕಾರಣದಿಂದಾಗಿ ಭಾರತದ ಪಂದ್ಯಗಳನ್ನು ಲಾಹೋರ್​ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಸುವುದಾಗಿ ತಿಳಿಸಿದ್ದು, ಇದಕ್ಕಾಗಿ ಕ್ರೀಡಾಂಗಣದ ಪಕ್ಕದಲ್ಲಿರುವ ಐದು ಎಕರೆ ಜಮೀನನ್ನು ಸ್ವಾದೀನಪಡಿಸಿಕೊಳ್ಳಲಾಗಿದ್ದು, ಭಾರತದ ಆಟಗಾರರು ಹಾಗೂ ಸಿಬ್ಬಂದಿ ಉಳಿದುಕೊಳ್ಳಲು 5 ಸ್ಟಾರ್​ ಹೋಟೆಲ್​ ನಿರ್ಮಿಸುತ್ತಿರುವುದಾಗಿ ಪಿಸಿಬಿ ತಿಳಿಸಿದೆ. ಇದಲ್ಲದೆ ಭಾರತ ತಂಡ ಪಾಕಿಸ್ತಾನಕ್ಕೆ ಬರುವುದರಿಂದ ಉಭಯ ದೇಶಗಳ ನಡುವಿನ ಸಂಬಂಧ ಸ್ವಲ್ಪಮಟ್ಟಿಗೆ ಸರಿಹೋಗಬಹುದು ಎಂದು ಪಿಸಿಬಿ ಆಶಿಸಿದೆ. ಆದರೆ, ಪಾಕಿಸ್ತಾನ ಆಸೆಗೆ ಭಾರತ ತಣ್ಣೀರು ಎರಚಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಿದೆ.