ಕ್ರೀಡೆ

ಭಾರತದ ಬ್ಯಾಟಿಂಗ್ ವೈಫಲ್ಯ... ತಂಡಕ್ಕೆ ನೆರವಾದ ಸೂರ್ಯಕುಮಾರ್; ಹರಿಣಗಳಿಗೆ 134 ರನ್ ಟಾರ್ಗೆಟ್ ಫಿಕ್ಸ್

ಪರ್ತ್​​: ಟಿ-20 ವಿಶ್ವಕಪ್​ನ ಸೌತ್​​ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರೋಹಿತ್​ ಶರ್ಮಾ ಪಡೆ, ಆರಂಭದಲ್ಲಿ ಮುಗ್ಗರಿಸಿತು. ಸೌತ್​ ಆಫ್ರಿಕಾ ಬೌಲರ್​ಗಳ ಬೌಲಿಂಗ್ ದಾಳಿಗೆ ಭಾರತೀಯ ಬ್ಯಾಟ್ಸ್​ಮನ್​ಗಳು ತತ್ತರಿಸಿದರು.

ಇನ್ನಿಂಗ್ಸ್ ಆರಂಭಿಸಿದ ರೋಹಿತ್​ ಶರ್ಮಾ ಹಾಗೂ ಕೆ.ಎಲ್​.ರಾಹುಲ್ ಜೋಡಿ 21 ರನ್​ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಈ ಪಂದ್ಯದಲ್ಲೂ ಮುಗ್ಗರಿಸಿದ ರಾಹುಲ್ 9 ರನ್​ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ರೋಹಿತ್ ಶರ್ಮಾ ಆಟ 15 ರನ್​ಗಳಿಗೆ ಅಂತ್ಯವಾಯ್ತು.

ಮೊದಲ ಎರಡು ಪಂದ್ಯಗಳಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ್ದ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 12 ರನ್​ ಸಿಡಿಸಿ ನಿರಾಸೆ ಅನುಭವಿಸಿದರು. ಅಕ್ಷರ್ ಪಟೇಲ್ ಬದಲಿಗೆ ಅವಕಾಶ ಪಡೆದ ದೀಪಕ್ ಹೂಡ ಯಾವುದೇ ರನ್ ಕಲೆ ಹಾಕದೆ ವಿಕೆಟ್ ಒಪ್ಪಿಸಿದರು. ಹಾರ್ದಿಕ್​ ಪಾಂಡ್ಯಾ ಸ್ಲೋ ಬಾಲ್ ಗಮನಿಸಿದೆ ವಿಕೆಟ್ ಒಪ್ಪಿಸಬೇಕಾಗಿ ಬಂತು. ಪಾಂಡ್ಯಾ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಮಿಡಲ್ ಆರ್ಡರ್ ಜವಾಬ್ದಾರಿ ಹೊತ್ತು ಬಂದ ದಿನೇಶ್ ಕಾರ್ತಿಕ್ ನಿರಾಸೆ ಅನುಭವಿಸಿದರು. ತಂಡದ ಮೊತ್ತವನ್ನು ಹಿಗ್ಗಿಸುವುದರಲ್ಲಿ ಎಡವಿದ ಕಾರ್ತಿಕೆ 6 ರನ್​ ಗಳಸಿ ನಿರ್ಗಮಿಸಿದರು. ನಂತರ ಬಂದ ರವಿಚಂದ್ರನ್ ಅಶ್ವಿನ್ ಆಟ 7 ರನ್​ಗೆ ಅಂತ್ಯವಾಯ್ತು.

ಒಂದೆಡೆ ಸೌತ್​ಆಪ್ರಿಕಾ ಬೌಲಿಂಗ್ ದಾಳಿಗೆ ಭಾರತೀಯ ಬ್ಯಾಟ್ಸ್​ಮನ್​ಗಳು ಒಂದರ ಹಿಂದೆ ಒಬ್ಬರಂತೆ ವಿಕೆಟ್ ಒಪ್ಪಿಸುತ್ತಿದ್ದರೆ, ಸೂರ್ಯಕುಮಾರ್ ಯಾದವ್ ತಂಡಕ್ಕೆ ಆಸರೆಯಾದರು. ಕ್ರಿಸ್ ಕಚ್ಚಿ ನಿಂತ ಸೂರ್ಯಕುಮಾರ್ ಜವಾಬ್ದಾರಿಯುತ ಇನ್ನಿಂಗ್ಸ್​ ಕಟ್ಟಿದರು.

ಸೂರ್ಯಕುಮಾರ್ ಯಾದವ್ 40 ಎಸೆತಗಳನ್ನು ಎದುರಿಸಿ ಅರ್ಧಶತಕ ಸಹಿತ 68 ರನ್ ಗಳಸಿದರು. ಇನ್ನಿಂಗ್ಸ್​​ನಲ್ಲಿ 6 ಫೋರ್ ಹಾಗೂ 3 ಸಿಕ್ಸರ್ ಸಿಡಿಸಿ ಮಿಂಚಿದರು. ಸೂರ್ಯಕುಮಾರ್ ಯಾದವ್ ಆಟದಿಂದಾಗಿ ಭಾರತದ ಸ್ಕೋರ್​ ನೂರರ ಗಡಿ ದಾಟಲು ಸಾಧ್ಯವಾಯಿತು. ಕೊನೆಯಲ್ಲಿ ಎಡವಿದ ಸೂರ್ಯ ಕ್ಯಾಚ್ ನೀಡಿ ನಿರ್ಗಮಿಸಿದರು.

ನಂತರ ಬಂದ ಮೊಹಮ್ಮದ್ ಶಮಿ(0) ರನೌಟ್ ಆದರು. ಕೊನೆಯಲ್ಲಿ ಭುವನೇಶ್ವರ್ ಕುಮಾರ್ 4 ರನ್ ಹಾಗೂ ಆರ್ಷದೀಪ್ ಸಿಂಗ್ 2 ರನ್ ಗಳಿಸಿ ಅಜೇಯರಾಗಿ ಉಳಿದರು.

ನಿಗದಿತ 20 ಓವರ್​​ಗಳಲ್ಲಿ ಭಾರತ 9 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿದೆ. ಸೌತ್​ಆಫ್ರಿಕಾ ಪರ ಲುಂಗಿ ಎನ್ಗಿಡಿ 4 ಹಾಗೂ ವೇಯ್ನ್ ಪಾರ್ನೆಲ್ 3 ವಿಕೆಟ್ ಪಡೆದು ಮಿಂಚಿದರು. ಅನ್ರಿಚ್ ನಾರ್ಟ್ಜೆ 1 ವಿಕೆಟ್ ಪಡೆದುಕೊಂಡರು.