ಅಡಿಲೇಡ್: ಬಲಿಷ್ಠ ದಕ್ಷಿಣ ಆಫ್ರಿಕಾ ತಂಡಕ್ಕೆ ನೆದರ್ಲೆಂಡ್ ತಂಡ ಶಾಕ್ ನೀಡಿದೆ. ಇಂದು ನಡೆದ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ನಿರ್ಣಾಯಕ ಪಂದ್ಯದಲ್ಲಿ ನೆದರ್ಲೆಂಡ್ ವಿರುದ್ಧ ಸೋಲು ಅನುಭವಿಸುವ ಮೂಲಕ ದಕ್ಷಿಣ ಆಫ್ರಿಕಾದ ಸೆಮಿಫೈನಲ್ ಕನಸು ಭಗ್ನಗೊಂಡಿದೆ. ಇತ್ತ ಹರಿಣಗಳ ಸೋಲು ಟೀಮ್ ಇಂಡಿಯಾಗೆ ವರವಾಗಿದೆ. ಭಾರತ ಸಮಿಫೈನಲ್ ಹಾದಿ ಸುಗಮವಾಗಿದೆ.
ಇಂದು ಅಡಿಲೇಡ್ನ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ನೆದರ್ಲೆಂಡ್, ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 158 ರನ್ ಕಲೆಹಾಕಿತು. 159 ರನ್ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಲಷ್ಟೇ ಶಕ್ತವಾಯಿತು. ಬಲಿಷ್ಠ ಆಫ್ರಿಕಾ ತಂಡ ದುರ್ಬಲ ನೆದರ್ಲೆಂಡ್ ಎದುರು ಮಂಡಿಯೂರಿದ್ದು, ಕ್ರಿಕೆಟ್ ಪ್ರೇಮಿಗಳ ಅಚ್ಚರಿಗೆ ಕಾರಣವಾಗಿದೆ.
ಸದ್ಯ ಗ್ರೂಪ್ 2ರಲ್ಲಿ ಭಾರತ ತಂಡ ಸಮೀಸ್ ಪ್ರವೇಶ ಖಚಿತಪಡಿಸಿಕೊಂಡಿದೆ. ಗ್ರೂಪ್ 2ರಲ್ಲಿ ಸಮೀಸ್ಗೆ ಪ್ರವೇಶ ಪಡೆಯುವ ಮತ್ತೊಂದು ತಂಡ ಯಾವುದೆಂಬುದು ಇಂದೇ ನಿರ್ಧಾರವಾಗಲಿದೆ. ಸದ್ಯ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯುತ್ತಿದ್ದು, ಇದರಲ್ಲಿ ಗೆಲುವು ಸಾಧಿಸುವ ತಂಡ ಸಮೀಸ್ ಪ್ರವೇಶಿಸಲಿದೆ. ಈ ಎರಡು ತಂಡಗಳು ಅಂಕಪಟ್ಟಿಯಲ್ಲಿ 4 ಅಂಕಗಳನ್ನು ಹೊಂದಿವೆ. ಪಟ್ಟಿಯಲ್ಲಿ 6 ಅಂಕಗಳೊಂದಿಗೆ ಭಾರತ ಅಗ್ರಸ್ಥಾನದಲ್ಲಿದೆ. ಇಂದು ಭಾರತ ಜಿಂಬಾಬ್ವೆಯನ್ನು ಎದುರಿಸಲಿದೆ. ಮಧ್ಯಾಹ್ನ 1.30ಕ್ಕೆ ಮೆಲ್ಬೋರ್ನ್‌ನಲ್ಲಿ ಪಂದ್ಯ ನಡೆಯಲಿದೆ. ದಕ್ಷಿಣ ಆಫ್ರಿಕಾ ತಂಡ 5 ಅಂಕಗಳನ್ನು ಹೊಂದಿತ್ತು. ಆದರೆ, ಇಂದಿನ ಸೋಲಿನಿಂದಾಗಿ ಟೂರ್ನಿಯಿಂದಲೇ ತಂಡ ಹೊರಬಿದ್ದಿದೆ. (ಏಜೆನ್ಸೀಸ್)