ನವದೆಹಲಿ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅತಿಥೇಯರು ಮೇಲುಗೈ ಸಾಧಿಸಿದ್ದು, ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ವಶಪಡಿಸಿಕೊಂಡಿದ್ದಾರೆ. ಇನ್ನು ಸರಣಿಯ ಐದನೇ ಪಂದ್ಯ ಮಾರ್ಚ್ 07ರಂದು ಧರ್ಮಾಶಾಲಾದಲ್ಲಿ ಆರಂಭವಾಗಲಿದ್ದು, ಇದಕ್ಕೂ ಮುನ್ನ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ವೆಲ್ಲಿಂಗ್ಟನ್ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಸೋಲಿನೊಂದಿಗೆ ನ್ಯೂಜಿಲೆಂಡ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-25 ರ ಅಂಕಪಟ್ಟಿಯಲ್ಲಿ ಒಂದು ಸ್ಥಾನ ಕುಸಿತ ಕಂಡಿದೆ. ಇದರೊಂದಿಗೆ ಎರಡನೇ ಸ್ಥಾನದಲ್ಲಿದ್ದ ಟೀಮ್ ಇಂಡಿಯಾ ಅಗ್ರಸ್ಥಾನಕ್ಕೇರಿದೆ.
2023-25ರ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಈ ಆವೃತ್ತಿಯಲ್ಲಿ 8 ಪಂದ್ಯಗಳನ್ನಾಡಿದ್ದು, 5ರಲ್ಲಿ ಗೆಲುವು ಸಾಧಿಸಿದೆ. 2 ಪಂದ್ಯಗಳಲ್ಲಿ ಸೋಲು ಕಂಡಿದ್ದು, 1 ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಒಟ್ಟಾರೆ 62 ಅಂಕಗಳನ್ನು ಪಡೆದಿರುವ ಟೀಂ ಇಂಡಿಯಾ 64.58 ಪಿಸಿಟಿಯೊಂದಿಗೆ ಅಗ್ರಸ್ಥಾನದಲ್ಲಿದೆ.
5 ಪಂದ್ಯಗಳಲ್ಲಿ 3ರಲ್ಲಿ ಗೆಲುವು ಸಾಧಿಸಿರುವ ಕಿವೀಸ್ 36 ಅಂಕಗಳೊಂದಿಗೆ (60.00 ಪಿಸಿಟಿ) 2ನೇ ಸ್ಥಾನದಲ್ಲಿದೆ. 11 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿರುವ ಆಸೀಸ್ 59.09 ಪಿಸಿಟಿಯೊಂದಿಗೆ 78 ಅಂಕ ಪಡೆದು 3ನೇ ಸ್ಥಾನ, 2 ಪಂದ್ಯಗಳಲ್ಲಿ 1ರಲ್ಲಿ ಗೆಲುವು ಸಾಧಿಸಿರುವ ಬಾಂಗ್ಲಾದೇಶ 12 ಅಂಕಗಳೊಂದಿಗೆ 4ನೇ ಸ್ಥಾನ ಹಾಗೂ 5 ಪಂದ್ಯಗಳಲ್ಲಿ 2ರಲ್ಲಿ ಗೆಲುವು ಸಾಧಿಸಿರುವ ಪಾಕಿಸ್ತಾನ 36.66 ಪಿಸಿಟಿಯೊಂದಿಗೆ 22 ಅಂಕ ಪಡೆದು 5ನೇ ಸ್ಥಾನದಲ್ಲಿದೆ.