ಕ್ರೀಡೆ

ನಾವು ಆ ಒಂದು ಮಿಸ್ಟೇಕ್ ಮಾಡಬಾರದಿತ್ತು... ಆಸಿಸ್​ ವಿರುದ್ಧ ಸೋಲಿಗೆ ಹರ್ಮನ್​ಪ್ರೀತ್​ ಕೌರ್ ಬೇಸರ! Harmanpreet Kaur ​

ವಿಶಾಖಪಟ್ಟಣ : ಪ್ರಸ್ತುತ ನಡೆಯುತ್ತಿರುವ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಟೀಮ್​ ಇಂಡಿಯಾ ಸತತ ಎರಡನೇ ಸೋಲು ಅನುಭವಿಸಿ, ಸಂಕಷ್ಟಕ್ಕೆ ಸಿಲುಕಿದೆ. ಭಾನುವಾರ (ಅ.14) ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ ಹರ್ಮನ್​ಪ್ರೀತ್​ ಕೌರ್ (Harmanpreet Kaur)​ ಪಡೆ, ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಮೂರು ವಿಕೆಟ್‌ಗಳ ಸೋಲು ಅನುಭವಿಸಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್​ ಇಂಡಿಯಾ 48.5 ಓವರ್‌ಗಳಲ್ಲಿ 330 ರನ್ ಗಳಿಸಿತು. ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳಲ್ಲಿ, ಆರಂಭಿಕರಾದ ಸ್ಮೃತಿ ಮಂಧಾನ (80 ರನ್​, 66 ಎಸೆತ, 9 ಬೌಂಡರಿ, 3 ಸಿಕ್ಸರ್‌) ಮತ್ತು ಪ್ರತೀಕ್ ರಾವಲ್ (75 ರನ್​, 96 ಎಸೆತ, 10 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳನ್ನು ಗಳಿಸಿ ತಂಡಕ್ಕೆ ಆಸರೆಯಾದರು. ಹರ್ಲೀನ್ ಡಿಯೋಲ್ (38), ರಾಡ್ರಿಕ್ಸ್ (33) ಮತ್ತು ರಿಚಾ ಘೋಷ್ (32) ಕೂಡ ಉತ್ತಮ ಪ್ರದರ್ಶನ ನೀಡಿದರು. ಆಸೀಸ್ ಬೌಲರ್‌ಗಳಲ್ಲಿ ಅನ್ನಾಬೆಲ್ಲೆ ಸದರ್ಲ್ಯಾಂಡ್ ಐದು ವಿಕೆಟ್ ಪಡೆದರೆ, ಸೋಫಿ ಮೊಲಾನು ಮೂರು ವಿಕೆಟ್​ ಪಡೆದರು.

ಬಳಿಕ ಟೀಮ್​ ಇಂಡಿಯಾ ನೀಡಿದ್ದ 331 ರನ್​ ಗುರಿ ಬೆನ್ನತ್ತಿದ ಆಸಿಸ್ ಪರ​ ಅಲಿಸಾ ಹೀಲಿ (142 ರನ್​, 107 ಎಸೆತ, 21 ಬೌಂಡರಿ, 3 ಸಿಕ್ಸರ್) ಭರ್ಜರಿ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಎಲಿಸ್ ಪೆರ್ರಿ (ಅಜೇಯ 47 ರನ್​, 52 ಎಸೆತ, 5 ಬೌಂಡರಿ, 1 ಸಿಕ್ಸರ್), ಆಶ್ಲೇ ಗಾರ್ಡ್ನರ್ (45 ರನ್​, 46 ಎಸೆತ, 3 ಬೌಂಡರಿ, 1 ಸಿಕ್ಸರ್) ಮತ್ತು ಫೋಬೆ ಲಿಚ್‌ಫೀಲ್ಡ್ (40 ರನ್​, 39 ಎಸೆತ, 6 ಬೌಂಡರಿ, 1 ಸಿಕ್ಸರ್) ಉತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡಿದರು. ಒಟ್ಟಾರೆ ಆಸೀಸ್ ತಂಡ 49 ಓವರ್‌ಗಳಲ್ಲಿ 331 ರನ್‌ಗಳ ಗುರಿಯನ್ನು ಏಳು ವಿಕೆಟ್‌ಗಳ ನಷ್ಟಕ್ಕೆ ತಲುಪಿತು.

ಪಂದ್ಯದ ನಂತರ, ನಾಯಕಿ ಹರ್ಮನ್​ಪ್ರೀತ್​​ ಕೌರ್ ಮಾತನಾಡಿ, ತಂಡದ ಸೋಲಿಗೆ ಕಾರಣ ಏನೆಂಬುದನ್ನು ವಿವರಿಸಿದರು. ಕೆಳ ಕ್ರಮಾಂಕದ ಬ್ಯಾಟಿಂಗ್​ ವೈಫಲ್ಯದಿಂದಾಗಿ ನಾವು ಸೋತೆವು ಎಂದು ಹೇಳಿದರು. ತಂಡವು ಪಡೆದ ಆರಂಭವನ್ನು ಪರಿಗಣಿಸಿದರೆ, ನಾವು 30 ರಿಂದ 40 ರನ್ ಹೆಚ್ಚು ಪಡೆಯಬಹುದಿತ್ತು. ಆ ರನ್ ಗಳಿಸಿದ್ದರ, ಫಲಿತಾಂಶವೇ ವಿಭಿನ್ನವಾಗಿರುತ್ತಿತ್ತು. ಆದರೆ, ಕೊನೆಯ ಆರು ಮತ್ತು ಏಳು ಓವರ್‌ಗಳಲ್ಲಿ ನಾವು ಸತತವಾಗಿ ವಿಕೆಟ್‌ಗಳನ್ನು ಕಳೆದುಕೊಂಡೆವು ಎಂದು ಹರ್ಮನ್​ಪ್ರೀತ್​ ಹೇಳಿದರು.

ವಿಶಾಖಪಟ್ಟಣ ಮೈದಾನ ಬ್ಯಾಟಿಂಗ್‌ಗೆ ಉತ್ತಮವಾಗಿದೆ. ಆದರೆ, ಅದರ ಲಾಭ ಪಡೆಯಲು ನಮಗೆ ಸಾಧ್ಯವಾಗುತ್ತಿಲ್ಲ. ಕಳೆದ ಕೆಲವು ಪಂದ್ಯಗಳಿಂದ ಆರಂಭಿಕರು ಉತ್ತಮ ಆರಂಭ ನೀಡುತ್ತಿದ್ದಾರೆ. ಈ ರೀತಿಯಾಗಿ, ನಾವು ದೊಡ್ಡ ಸ್ಕೋರ್‌ಗಳನ್ನು ಗಳಿಸಲು ಸಾಧ್ಯವಾಗಿದೆ. ಈ ಪಂದ್ಯದಲ್ಲೂ ನಾವು ಉತ್ತಮವಾಗಿ ಆಡಿದ್ದೇವೆ. ಆದಾಗ್ಯೂ, ಕೊನೆಯ 5 ಓವರ್‌ಗಳಲ್ಲಿ ವಿಕೆಟ್‌ಗಳನ್ನು ಕಳೆದುಕೊಳ್ಳುವುದು ದೊಡ್ಡ ಸೋಲು. ಕಳೆದ ಮೂರು ಪಂದ್ಯಗಳಲ್ಲಿ ಇದೇ ರೀತಿ ಆಗಿದ್ದರೂ ಮಧ್ಯಮ ಕ್ರಮಾಂಕ ಇನ್ನು ಲಯ ಕಂಡುಕೊಂಡಿಲ್ಲ ಎಂದು ಹರ್ಮನ್ ಹೇಳಿದರು.

ಈ ಪಂದ್ಯದ ಮೊದಲ 40 ಓವರ್‌ಗಳಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ಅತ್ಯುತ್ತಮವಾಗಿತ್ತು ಎಂದು ಹರ್ಮನ್​ಪ್ರೀತ್​ ಹೇಳಿದರು. ಆದರೆ, ಕೊನೆಯ 10 ಓವರ್‌ಗಳಲ್ಲಿ ಅವರು ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ ಎಂದರು. ಆಟದಲ್ಲಿ ಇದೆಲ್ಲ ಸ್ವಾಭಾವಿಕವಾಗಿ ಸಂಭವಿಸುತ್ತವೆ. ಆಟಗಾರರು ಯಾವಾಗಲೂ ಶೇ. 100 ರಷ್ಟು ಪ್ರದರ್ಶನ ನೀಡಲು ಸಾಧ್ಯವಿಲ್ಲ ಆದರೆ, ಮುಂದಿನ ಪಂದ್ಯಗಳಲ್ಲಿ ಹೇಗೆ ಚೇತರಿಸಿಕೊಳ್ಳುತ್ತಾರೆ ಎಂಬುದು ಬಹಳ ಮುಖ್ಯ. ಏಕೆಂದರೆ, ಮುಂದಿನ ಎರಡೂ ಪಂದ್ಯಗಳು ಬಹಳ ನಿರ್ಣಾಯಕ ಎಂದು ಹರ್ಮನ್​ಪ್ರೀತ್​ ಹೇಳಿದರು.

ಆಸೀಸ್ ವಿರುದ್ಧ ಸೋತ ನಂತರವೂ, ನಮ್ಮ ತಂಡದಲ್ಲಿ ಕೆಲವು ಪಾಸಿಟಿವ್​ ಅಂಶಗಳು ಕೂಡ ಗೋಚರಿಸಿವೆ. ತೆಲುಗು ಹುಡುಗಿ ಶ್ರೀ ಚರಣಿ ತುಂಬಾ ಚೆನ್ನಾಗಿ ಆಡುತ್ತಿದ್ದಾರೆ ಮತ್ತು ಅವರು ತಮ್ಮ ಉತ್ತಮ ಬೌಲಿಂಗ್‌ನಿಂದ ಆಸೀಸ್ ಬ್ಯಾಟ್ಸ್‌ಮನ್‌ಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಆಸಿಸ್‌ನ ಅಗ್ರ ಆಟಗಾರ್ತಿ ಹೀಲಿಯನ್ನು ಸಹ ಚರಣಿ ಕಾಡಿದರು ಮತ್ತು ಸುಲಭವಾಗಿ ರನ್‌ಗಳನ್ನು ಬಿಟ್ಟುಕೊಡಲಿಲ್ಲ ಎಂದರು.

ಇನ್ನು ತಂಡದ ಸಂಯೋಜನೆಯ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಲಾಗುವುದು. ಇದೇ ಸಂಯೋಜನೆಯೊಂದಿಗೆ ಈ ಹಿಂದೆ ಯಶಸ್ಸನ್ನು ಸಾಧಿಸಿದ್ದೇವೆ. ಎರಡು ಪಂದ್ಯಗಳನ್ನು ಸೋತ ಮಾತ್ರಕ್ಕೆ ಈ ಸಂಯೋಜನೆ ತಪ್ಪು ಎಂದು ನಾನು ಭಾವಿಸುವುದಿಲ್ಲ. ಈಗೇನಿದ್ದರೂ ಮುಂಬರುವ ಪಂದ್ಯಗಳತ್ತ ಗಮನಹರಿಸುವುದೇ ನಮ್ಮ ಆದ್ಯತೆಯಾಗಿದೆ. ಆ ಪಂದ್ಯಗಳಲ್ಲಿ ನಾವು ನಮ್ಮ ಅತ್ಯುತ್ತಮ ಪ್ರದರ್ಶನ ನೀಡುತ್ತೇವೆ ಎಂದು ಹರ್ಮನ್​ಪ್ರೀತ್​ ಹೇಳಿದರು. (ಏಜೆನ್ಸೀಸ್​)