ನವದೆಹಲಿ: ಭಾರತದ ಯುವ ಪಡೆ ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಹಿರಿಯ ಆಟಗಾರರನ್ನು ಒಳಗೊಂಡ ಟೀಮ್ ಇಂಡಿಯಾ ಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲೇ ಗೆಲುವಿಗಾಗಿ ಹರಸಾಹಸ ಪಟ್ಟಿತು. ಸುಲಭವಾಗಿ ಗೆಲ್ಲಬಹುದಾದ ಪಂದ್ಯವನ್ನು ಡ್ರಾನಲ್ಲಿ ಮುಗಿಸಿತು. ಹೀಗಾಗಿ ಹಿರಿಯ ಮೇಲಿನ ಭರವಸೆಯನ್ನು ಮುಖ್ಯ ಕೋಚ್ ಗೌತಮ್ ಗಂಭೀರ್ ಇದೀಗ ಕಳೆದುಕೊಂಡಿದ್ದಾರೆ.
ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೂರು ಏಕದಿನ ಸರಣಿಯ ಭಾಗವಾಗಿ ಶುಕ್ರವಾರ ಕೊಲಂಬೊ ಮೈದಾನದಲ್ಲಿ ಮೊದಲ ಏಕದಿನ ಪಂದ್ಯ ನಡೆಯಿತು. ಉಭಯ ತಂಡಗಳ ನಡುವಿನ ಪಂದ್ಯ ಟೈನಲ್ಲಿ ಅಂತ್ಯಗೊಂಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತು. ತಂಡದಲ್ಲಿ ವೆಲ್ಲಾಲೆ (67*) ಮತ್ತು ನಿಶಾಂಕ (56) ಮಿಂಚಿದರು. ಭಾರತದ ಬೌಲರ್‌ಗಳಲ್ಲಿ ಅರ್ಷದೀಪ್ ಸಿಂಗ್ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದರು.
ಬಳಿಕ 231 ರನ್‌ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಟೀಮ್ ಇಂಡಿಯಾ 47.5 ಓವರ್‌ಗಳಲ್ಲಿ ನಿಖರವಾಗಿ 230 ರನ್‌ಗಳಿಗೆ ಆಲೌಟಾಯಿತು. ಇದರಿಂದ ಈ ಪಂದ್ಯ ಟೈ ಆಯಿತು. ಏಕದಿನ ಪಂದ್ಯವಾದ್ದರಿಂದ ಸೂಪರ್ ಓವರ್ಗೆ ಅವಕಾಶ ಸಿಗಲಿಲ್ಲ. ಭಾರತ ತಂಡದಲ್ಲಿ ನಾಯಕ ರೋಹಿತ್ ಶರ್ಮ ಮಾತ್ರ 58 ರನ್ ಗಳಿಸಿ ಮಿಂಚಿದರು.
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸುಲಭವಾಗಿ ಗೆಲ್ಲಬಹುದಿತ್ತು. ಆದರೆ, ಹಿರಿಯ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ (24), ಶ್ರೇಯಸ್ ಅಯ್ಯರ್ (23) ಮತ್ತು ಕೆಎಲ್ ರಾಹುಲ್ (31) ವೈಫಲ್ಯದಿಂದ ಭಾರತಕ್ಕೆ ಗೆಲ್ಲಲು ಸಾಧ್ಯವಾಗಲಿಲ್ಲ. ಹಿರಿಯ ಆಟಗಾರರ ವೈಫಲ್ಯದಿಂದಾಗಿ ಕೋಚ್ ಗೌತಮ್ ಗಂಭೀರ್ ಯುವ ಆಟಗಾರರ ಮೇಲೆ ಇದೀಗ ಭರವಸೆ ಇಡಬೇಕಾಗಿದೆ. ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನು ಸೂರ್ಯಕುಮಾರ್ ಯಾದವ್ ನೇತೃತ್ವದ ಯುವ ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿದ್ದು ಗೊತ್ತೇ ಇದೆ. ಆ ಸರಣಿಯಲ್ಲಿ ಯುವ ಆಟಗಾರರಾದ ಸೂರ್ಯಕುಮಾರ್, ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಷಬ್ ಪಂತ್ ಮತ್ತು ರಿಯಾನ್ ಪರಾಗ್ ಅದ್ಭುತ ಪ್ರದರ್ಶನ ನೀಡಿದರು. ಗಂಭೀರ್ ತಮ್ಮ ಭವಿಷ್ಯದ ಭರವಸೆಯನ್ನು ಅವರ ಮೇಲೆ ಇರಿಸಬೇಕಾಗಿದೆ.
ಮುಂಬರುವ ಚಾಂಪಿಯನ್ಸ್ ಟ್ರೋಫಿ 2025, ಏಕದಿನ ವಿಶ್ವಕಪ್ ಮತ್ತು ಟಿ20 ವಿಶ್ವಕಪ್ ಗೆಲ್ಲಲು ಗೌತಮ್ ಗಂಭೀರ್, ಈ ಯುವ ಆಟಗಾರರ ಮೇಲೆ ಹೆಚ್ಚು ಗಮನಹರಿಸಬೇಕು. ಏಕೆಂದರೆ? ಅಷ್ಟರೊಳಗೆ ರೋಹಿತ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಲಭ್ಯರಾಗುತ್ತಾರಾ? ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡಿದೆ. ಅದಕ್ಕಾಗಿಯೇ ಗಂಭೀರ್ ತನ್ನೆಲ್ಲ ಭರವಸೆಯನ್ನು ಯುವ ಟೀಮ್ ಇಂಡಿಯಾ ಮೇಲೆ ಇಟ್ಟುಕೊಂಡಿದ್ದಾರೆ ಎಂದು ಹೇಳಲಾಗಿದೆ. (ಏಜೆನ್ಸೀಸ್)