ಕ್ರೀಡೆ

ಇದೇ ನೋಡಿ ಪಾಕಿಸ್ತಾನದ ಮನಸ್ಥಿತಿ, ಸಂಸ್ಕೃತಿ... ಇವರೆಂದಿಗೂ ಬದಲಾಗಲ್ಲ, ಎಲ್ಲೆಡೆ ಆಕ್ರೋಶ! IND Vs PAK

IND Vs PAK : ಪಾಕಿಸ್ತಾನ ಎಂದರೆ ಮೊದಲು ನೆನಪಾಗುವುದೇ ಭಯೋತ್ಪಾದನೆ. ಉಗ್ರರ ನಾಡು ಎಂದೇ ಪಾಕ್​ ಜನಜನಿತ. ಅಲ್ಲಿ ಮದ್ದು-ಗುಂಡುಗಳ ಶಬ್ಧ ಸಾಮಾನ್ಯ. ಬಂದೂಕುಗಳಂತೂ ಆಟಿಕೆ ವಸ್ತುಗಳಂತಿವೆ. ರಕ್ತಪಾತವೂ ಸಹಜ ಎನ್ನುವಂತಿದೆ. ಉಗ್ರವಾದದಿಂದಲೇ ಕುಖ್ಯಾತಿ ಪಡೆದಿರುವ ಪಾಕಿಸ್ತಾನದ ಬಹುತೇಕ ಮಂದಿಯ ಮನಸ್ಥಿತಿಯು ಕೂಡ ಅದೇ ರೀತಿ ಇದೆ. ಅದಕ್ಕೆ ತಾಜಾ ಉದಾಹರಣೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಪಾಕ್​ ಆಟಗಾರನ ಅನುಚಿತ ವರ್ತನೆ ಎಂದು ಹೇಳಬಹುದು.

ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್‌ನಲ್ಲಿ ಭಾರತ ಮತ್ತು ಪಾಕ್​ ಪಂದ್ಯಗಳು ಹೆಚ್ಚು ಗಮನ ಸೆಳೆದಿವೆ. ಅಲ್ಲದೆ, ವಿವಾದಗಳು ಕೂಡ ಹೆಚ್ಚಾಗಿ ಸದ್ದು ಮಾಡುತ್ತಿವೆ. ಲೀಗ್​ ಹಂತದಲ್ಲಿ ಉಭಯ ತಂಡಗಳ ನಡುವೆ ನಡೆದ ಮೊದಲ ಪಂದ್ಯದಲ್ಲಿ ಭಾರತೀಯ ಆಟಗಾರರು ಪಂದ್ಯದ ಬಳಿಕ ಕೈಕುಲುಕದೇ ಇದ್ದಿದ್ದು ಈ ಹಿಂದೆ ವಿವಾದವಾಯಿತು. ಟೂರ್ನಿಯನ್ನು ಬಹಿಷ್ಕಾರ ಮಾಡುವ ಬೆದರಿಕೆಯನ್ನು ಸಹ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಹಾಕಿತ್ತು. ಆದರೆ, ಬಿಸಿಸಿಐ ನಿಲುವಿಗೆ ಹೆದರಿ ಯೂಟರ್ನ್​ ಹೊಡೆಯಿತು.

ಪಹಲ್ಗಾಮ್​ ದಾಳಿ ಮತ್ತು ಆಪರೇಷನ್​ ಸಿಂಧೂರವನ್ನು ಪ್ರಸ್ತಾಪಿಸಿ ಕ್ರೀಡೆಯನ್ನು ರಾಜಕೀಯಗೊಳಿಸಬೇಡಿ ಎಂದು ಬೊಬ್ಬೆ ಹೊಡೆಯುವ ಪಾಕಿಸ್ತಾನ ತನ್ನ ನರಿಬುದ್ದಿಯನ್ನು ಮಾತ್ರ ಬಿಟ್ಟಿಲ್ಲ. ಹೇಳುವುದು ವೇದಾಂತ ತಿನ್ನುವುದು ಬದನೇಕಾಯಿ ಎಂಬಂತೆ ಪಾಕಿಸ್ತಾನ ನಡೆದುಕೊಳ್ಳುತ್ತಿದೆ. ಪಾಕ್​ ಹಿರಿಯ ಆಟಗಾರರು ಕ್ರೀಡೆಯನ್ನು ರಾಜಕೀಯಗೊಳಿಸಬೇಡಿ ಎನ್ನುತ್ತಾರೆ. ಆದರೆ, ಅದೇ ಪಾಕ್​ ಆಟಗಾರರು ಮೈದಾನದಲ್ಲಿ ಪ್ರಚೋದನಾಕಾರಿ ಸನ್ನೆಗಳನ್ನು ಮಾಡುತ್ತಾರೆ. ಈ ಒಂದು ನಡೆ ಅವರ ಮನಸ್ಥಿತಿ ಎಂಥದ್ದು ಎಂಬುದನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ.

ಭಾನುವಾರ (ಸೆ.21) ಭಾರತ ವಿರುದ್ಧ ನಡೆದ ಸೂಪರ್-4 ಪಂದ್ಯದಲ್ಲಿ 34 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ನಂತರ ಸಾಹಿಬ್‌ಜಾದಾ ಫರ್ಹಾನ್ ಎಕೆ-47 ಬಂದೂಕಿನಂತೆ ತನ್ನ ಬ್ಯಾಟ್ ಅನ್ನು ಎತ್ತಿ ಸ್ಫೋಟಿಸುವ ಮೂಲಕ ಸಂಭ್ರಮಾಚರಣೆ ಮಾಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಎಲ್ಲಡೆ ಆಕ್ರೋಶ ವ್ಯಕ್ತವಾಗಿದೆ. ಈ ಉದ್ದೇಶಪೂರ್ವಕ ಸನ್ನೆ ಪಾಕ್​ ಮಂದಿಯ ಮನಸ್ಥಿತಿಯನ್ನು ತೋರಿಸಿದೆ. ಮದ್ದು ಗುಂಡು, ಹಿಂಸೆಯೇ ಪಾಕಿಸ್ತಾನದ ಜೀವಾಳ ಎಂಬುದನ್ನು ಫರ್ಹಾನ್​ ತಮ್ಮ ಸಂಭ್ರಮಾಚರಣೆ ಮೂಲಕ ಜಗಜ್ಜಾಹೀರು ಮಾಡಿದ್ದಾರೆ. ಅಲ್ಲದೆ, ಪಾಕಿಗಳ ಈ ಮನಸ್ಥಿತಿ ಎಂದಿಗೂ ಬದಲಾಗಲ್ಲ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ.

ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ (ಸೆ.21) ನಡೆದ ಏಷ್ಯಾಕಪ್ 2025ರ ಸೂಪರ್​-4 ಹಂತದ​ ಪಂದ್ಯದಲ್ಲಿ ಭಾರತ ತಂಡ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ನೀಡುವ ಮೂಲಕ ಪಾಕಿಸ್ತಾನವನ್ನು ಮಣಿಸಿತು. ಈ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು.

ಮೊದಲು ಬ್ಯಾಟಿಂಗ್​ ಮಾಡಿದ ಪಾಕಿಸ್ತಾನ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 171 ರನ್​ ಕಲೆಹಾಕಿತು. ಬಳಿಕ ಗುರಿ ಬೆನ್ನತ್ತಿದ ಭಾರತ 18.5 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ ಗುರಿ ಮುಟ್ಟಿತು. 19 ನೇ ಓವರ್‌ನಲ್ಲಿ ತಿಲಕ್ ವರ್ಮಾ ಶಾಹೀನ್ ಅಫ್ರಿದಿ ಎಸೆತದಲ್ಲಿ ಸಿಕ್ಸರ್ ಮತ್ತು ನಂತರ ಬೌಂಡರಿ ಬಾರಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಅವರು 19 ಎಸೆತಗಳಲ್ಲಿ 30 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು. (ಏಜೆನ್ಸೀಸ್​)