ಕ್ರೀಡೆ

ನಾಲ್ಕು ಕ್ಯಾಚ್​ ಬಿಟ್ಟ ಯಶಸ್ವಿ ಜೈಸ್ವಾಲ್​ ಬಗ್ಗೆ ಕೇಳಿದ್ದಕ್ಕೆ ಅಚ್ಚರಿ ಹೇಳಿಕೆ ನೀಡಿದ ಗೌತಮ್​ ಗಂಭೀರ್​! Gautam Gambhir

Gautam Gambhir : ನಿನ್ನೆ (ಜೂನ್​ 24) ಮುಕ್ತಾಯವಾದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್​ ಇಂಡಿಯಾ ಸೋಲುಂಡಿತು. ಈ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಐದು ಶತಕಗಳನ್ನು ಗಳಿಸಿದರು ಕೂಡ ಯಾವುದೇ ಪ್ರಯೋಜನವಾಗಲಿಲ್ಲ. ಇದಕ್ಕೆ ಪ್ರಮುಖ ಕಾರಣ ಭಾರತೀಯ ಆಟಗಾರರ ಕಳಪೆ ಫೀಲ್ಡಿಂಗ್. ಎರಡು ಇನ್ನಿಂಗ್ಸ್‌ಗಳಲ್ಲಿ ಏಳು ನಿರ್ಣಾಯಕ ಕ್ಯಾಚ್‌ಗಳನ್ನು ಕೈಬಿಟ್ಟ ಭಾರತೀಯ ಆಟಗಾರರ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಯಶಸ್ವಿ ಜೈಸ್ವಾಲ್ ಅವರ ಪ್ರದರ್ಶನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಅಭಿಮಾನಿಗಳು ಹೆಚ್ಚಾಗಿ ಆಕ್ರೋಶಗೊಂಡಿದ್ದಾರೆ. ಜೈಸ್ವಾಲ್​ ಅವರು ಎರಡು ಇನ್ನಿಂಗ್ಸ್‌ಗಳಲ್ಲಿ ನಾಲ್ಕು ನಿರ್ಣಾಯಕ ಕ್ಯಾಚ್‌ಗಳನ್ನು ಕೈಬಿಟ್ಟರು. ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬೆನ್ ಡಕೆಟ್ 97 ರನ್ ಗಳಿಸಿದ್ದಾಗ ಸಿರಾಜ್​ ಬೌಲಿಂಗ್​ನಲ್ಲಿ ಶಾಟ್​ ಆಡಲು ಹೋಗಿ ಕ್ಯಾಚ್ ನೀಡಿದರು. ಆದರೆ,​ ಯಶಸ್ವಿ ಜೈಸ್ವಾಲ್ ಆ ಕ್ಯಾಚ್​ ಅನ್ನು ಕೈಚೆಲ್ಲಿದರು. ಒಂದು ಜೀವದಾನ ಪಡೆದ ಡಕೆಟ್​ 149 ರನ್ ಗಳಿಸಿ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಕ್ರೀಡಾಭಿಮಾನಿಗಳು ಯಶಸ್ವಿ ಜೈಸ್ವಾಲ್​ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿರುವ ಸಮಯದಲ್ಲಿ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್, ಜೈಸ್ವಾಲ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ವಿಶ್ವದಲ್ಲಿರುವ ಅತ್ಯುತ್ತಮ ಫೀಲ್ಡರ್‌ಗಳು ಕೂಡ ಕಾಲಕಾಲಕ್ಕೆ ಈ ರೀತಿಯ ತಪ್ಪುಗಳನ್ನು ಮಾಡುತ್ತಾರೆ. ಅವರಲ್ಲಿ ಯಾರೂ ಉದ್ದೇಶಪೂರ್ವಕವಾಗಿ ಕ್ಯಾಚ್‌ಗಳನ್ನು ಬಿಡಲು ಬಯಸುವುದಿಲ್ಲ ಎಂದು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಜೈಸ್ವಾಲ್ ಅವರನ್ನು ಬೆಂಬಲಿಸಿ ಗಂಭೀರ್​ ಈ ಹೇಳಿಕೆ ನೀಡಿದರು.

ಈ ಪಂದ್ಯದ ಸೋಲಿಗೆ ನಾನು ಯಾರನ್ನೂ ದೂಷಿಸುವುದಿಲ್ಲ. ಕೆಲವೊಮ್ಮೆ ಆಟಗಾರರು ವಿಫಲರಾಗುತ್ತಾರೆ. ಕ್ರಿಕೆಟ್‌ನಲ್ಲಿ ಇದು ಸಹಜ. ಈ ಸೋಲು ನಿರಾಶಾದಾಯಕ. ಆಟಗಾರರು ಇನ್ನೂ ಹೆಚ್ಚಿನ ನೋವಿನಲ್ಲಿದ್ದಾರೆ ಎಂದು ನನಗೆ ತಿಳಿದಿದೆ. ಕೆಳ ಕ್ರಮಾಂಕದ ಬ್ಯಾಟಿಂಗ್ ನಿರಾಶಾದಾಯಕವಾಗಿತ್ತು. ಏಕೆಂದರೆ ನಾವು ಮೊದಲ ಇನ್ನಿಂಗ್ಸ್‌ನಲ್ಲಿ 40 ರನ್‌ಗಳಿಗೆ ಏಳು ವಿಕೆಟ್‌ಗಳನ್ನು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 30 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡೆವು. ನಾವು ಮೊದಲ ಇನ್ನಿಂಗ್ಸ್‌ನಲ್ಲಿ ಸುಮಾರು 600 ರನ್‌ಗಳನ್ನು ಗಳಿಸಬಹುದಿತ್ತು. ಆದರೆ, ಕೆಳ ಕ್ರಮಾಂಕದ ಬ್ಯಾಟಿಂಗ್ ಉತ್ತಮವಾಗಿರಲಿಲ್ಲ. ಎರಡನೇ ಟೆಸ್ಟ್ ಪಂದ್ಯದಲ್ಲಿ ನಾವು ಎಲ್ಲಾ ತಪ್ಪುಗಳನ್ನು ಸರಿಪಡಿಸಿಕೊಂಡು ಮೇಲುಗೈ ಸಾಧಿಸಬಹುದು ಎಂದು ನಾನು ಭಾವಿಸುತ್ತೇನೆ ಎಂದು ಗಂಭೀರ್ ಹೇಳಿದರು.

ಅಂದಹಾಗೆ, ಇಂಗ್ಲೆಂಡ್ ಮತ್ತು ಭಾರತ ನಡುವಿನ ಎರಡನೇ ಟೆಸ್ಟ್ ಪಂದ್ಯ ಮುಂದಿನ ಬುಧವಾರದಿಂದ ಆರಂಭವಾಗಲಿದೆ. (ಏಜೆನ್ಸೀಸ್​)