IND vs BAN : ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯ ಭಾಗವಾಗಿ ಭಾರತ ಮತ್ತು ಬಾಂಗ್ಲಾದೇಶ ಇಂದು (ಸೆ. 24) ಪರಸ್ಪರ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ದುಬೈ ಕ್ರೀಡಾಂಗಣ ವೇದಿಕೆಯಾಗಲಿದೆ. ಸತತ ಗೆಲುವಿನೊಂದಿಗೆ ಉತ್ತಮ ಲಯದಲ್ಲಿರುವ ಟೀಮ್ ಇಂಡಿಯಾವನ್ನು ನಾವು ಸೋಲಿಸುತ್ತೇವೆ ಎಂದು ಬಾಂಗ್ಲಾದೇಶ ತಂಡದ ಮುಖ್ಯ ಕೋಚ್ ಫಿಲ್ ಸಿಮ್ಮನ್ಸ್ ಸವಾಲು ಹಾಕಿದ್ದಾರೆ. ಭಾರತವನ್ನು ಸೋಲಿಸುವುದು ನಮಗೆ ಅಸಾಧ್ಯವಲ್ಲ ಎಂದು ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿ ಸಿಮ್ಮನ್ಸ್ ಹೇಳಿದರು.
ಭಾರತವನ್ನು ಸೋಲಿಸುವುದು ನಮಗೆ ಅಸಾಧ್ಯವಲ್ಲ. ಪ್ರತಿಯೊಂದು ತಂಡಕ್ಕೂ ಟೀಮ್ ಇಂಡಿಯಾವನ್ನು ಸೋಲಿಸುವ ಸಾಮರ್ಥ್ಯವಿದೆ. ಪಂದ್ಯದ ದಿನದಂದು ಮೈದಾನದಲ್ಲಿ ಉತ್ತಮವಾಗಿ ಪ್ರದರ್ಶನ ನೀಡುವ ತಂಡ ಗದ್ದೇ ಗೆಲ್ಲುತ್ತದೆ. ಅಲ್ಲದೆ, ಹಿಂದಿನ ದಾಖಲೆಗಳ ಆಧಾರದ ಮೇಲೆ ವಿಜೇತರನ್ನು ನಿರ್ಧರಿಸಲಾಗುವುದಿಲ್ಲ ಎಂದು ಸಿಮನ್ಸ್ ಹೇಳಿದರು.
ಕ್ರೀಡಾಂಗಣದಲ್ಲಿ ಆ ಮೂರುವರೆ ಗಂಟೆಗಳಲ್ಲಿ ಅವರು ಹೇಗೆ ಆಡುತ್ತಾರೆ ಎಂಬುದರ ಮೇಲೆ ಪಂದ್ಯದ ಫಲಿತಾಂಶ ಅವಲಂಬಿತವಾಗಿರುತ್ತದೆ. ನಾವು ನಮ್ಮ ಕೈಯಲ್ಲಿ ಸಾಧ್ಯವಾದಷ್ಟು ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ. ಪ್ರಸ್ತುತ ಟೀಮ್ ಇಂಡಿಯಾ ವಿಶ್ವದ ನಂಬರ್ 1 ತಂಡವಾಗಿದೆ. ಆ ತಂಡದ ವಿರುದ್ಧ ಆಡುವಾಗ ಖಂಡಿತವಾಗಿಯೂ ಒಂದು ಹೈಪ್ ಇದ್ದೇ ಇರುತ್ತದೆ. ಬಾಂಗ್ಲಾದೇಶ ಆಟಗಾರರು ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ಸಿಮನ್ಸ್ ತಮ್ಮ ತಂಡದ ಆಟಗಾರರಿಗೆ ಸಲಹೆ ನೀಡಿದರು.
ಇದನ್ನೂ ಓದಿ: ಭಾರತ ಮಾತ್ರ ಎಂದಿಗೂ…ಹ್ಯಾರಿಸ್ ರೌಫ್ ಬೆಂಬಲಿಸಿ ನಾಲಿಗೆ ಹರಿಬಿಟ್ಟ ಪಾಕ್ ರಕ್ಷಣಾ ಸಚಿವ! Haris Rauf
ನಮ್ಮ ತಂಡದಲ್ಲಿ ಗುಣಮಟ್ಟದ ಬೌಲರ್‌ಗಳಿದ್ದಾರೆ. ಅವರು ಖಂಡಿತವಾಗಿಯೂ ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಕಾಡಲಿದ್ದಾರೆ. ನಾವು ಈ ಹಿಂದಿನ ಪಂದ್ಯಗಳಲ್ಲಿ ಕೆಲವು ತಪ್ಪುಗಳನ್ನು ಮಾಡಿದ್ದೇವೆ. ಆದರೆ, ಆ ತಪ್ಪುಗಳನ್ನು ಸರಿಪಡಿಸಲು ಮತ್ತು ಟೀಮ್ ಇಂಡಿಯಾವನ್ನು ಸೋಲಿಸಲು ನಾವು ಒಟ್ಟಾಗಿ ಪ್ರಯತ್ನಿಸುತ್ತೇವೆ ಎಂದು ಸಿಮನ್ಸ್ ಹೇಳಿದರು. ಹಿಂದಿನ ಪಂದ್ಯಗಳ ದಾಖಲೆಗಳ ಬಗ್ಗೆ ನಾವು ಚಿಂತಿಸುವುದಿಲ್ಲ. ನಾವೇನಿದ್ದರೂ ಅತ್ಯುತ್ತಮ ಪ್ರದರ್ಶನ ನೀಡುವತ್ತ ಮಾತ್ರ ಗಮನಹರಿಸುತ್ತೇವೆ ಎಂದು ತಿಳಿಸಿದರು. (ಏಜೆನ್ಸೀಸ್)