

Haris Rauf : ಏಷ್ಯಾ ಕಪ್ ಪಂದ್ಯಾವಳಿಯ ಭಾಗವಾಗಿ ಭಾನುವಾರ (ಸೆ.21) ನಡೆದ ಸೂಪರ್-4 ಹಂತದ ಮೊದಲ ಪಂದ್ಯದಲ್ಲಿ ಭಾರತ, ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಅನೇಕ ಕುತೂಹಲಕಾರಿ ಸಂಗತಿಗಳು ನಡೆದವು. ಅವುಗಳಲ್ಲಿ ಪಾಕ್ ಬೌಲರ್ ಹ್ಯಾರಿಸ್ ರೌಫ್ ಮಾಡಿದ 6-0 ಸಿಗ್ನಲ್ ಕೂಡ ಒಂದು. ಈ ಸಿಗ್ನಲ್ ಭಾರಿ ಆಕ್ರೋಶಕ್ಕೆ ಗುರಿಯಾಗಿದೆ. ಇದರ ನಡುವೆ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ರೌಫ್ ಬೆನ್ನಿಗೆ ನಿಂತಿದ್ದಾರೆ.
ಭಾರತದ ಆರಂಭಿಕ ಆಟಗಾರರಾದ ಅಭಿಷೇಕ್ ಶರ್ಮಾ ಮತ್ತು ಶುಭಮಾನ್ ಗಿಲ್ ಭರ್ಜರಿ ಬ್ಯಾಟಿಂಗ್ ಮೂಲಕ ಪಾಕ್ ಬೌಲರ್ಗಳ ಬೆವರಿಳಿಸುವಾಗ ಕಂಗಾಲಾದ ಹ್ಯಾರಿಸ್ ರೌಫ್ ಅವರನ್ನು ಕೆಣಕಲು ಪ್ರಾರಂಭಿಸಿದರು. ಆಪರೇಷನ್ ಸಿಂಧೂರ ಸಮಯದಲ್ಲಿ, ಪಾಕಿಸ್ತಾನವು 6 ಭಾರತೀಯ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿದೆ. ಅಲ್ಲಿನ ಮಾಧ್ಯಮಗಳಲ್ಲಿ ಸುಳ್ಳು ಪ್ರಚಾರ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ರೌಫ್ ಮೈದಾನದಲ್ಲಿ ಕೈ ಮೂಲಕ 6-0 ಸಿಗ್ನಲ್ ಮಾಡಿದರು.
ಈ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆ, ಪಾಕಿಸ್ತಾನದ ಡೈಲಿ ಟೈಮ್ಸ್ಗೆ ಅಂಕಣಕಾರ ಅಯಾಬ್ ಅಹ್ಮದ್ ಬರೆದ ಅಂಕದ ಫೋಟೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ರೀಪೋಸ್ಟ್ ಮಾಡಿರುವ ಆಸೀಫ್, ಹ್ಯಾರಿಸ್ ಹ್ಯಾರಿಸ್ ರೌಫ್ ಭಾರತೀಯರನ್ನು ಸರಿಯಾಗಿ ನಡೆಸಿಕೊಳ್ಳುತ್ತಿದ್ದಾರೆ. ಹಾಗೇ ಮುಂದುವರಿಸಿ. ಕ್ರಿಕೆಟ್ ಪಂದ್ಯಗಳು ನಡೆಯುತ್ತಿವೆ ಆದರೆ, ಭಾರತ ಮಾತ್ರ 6-0 ಅನ್ನು ಎಂದಿಗೂ ಮರೆಯುವುದಿಲ್ಲ. ಜಗತ್ತು ಕೂಡ ಅದನ್ನು ನೆನಪಿಸಿಕೊಳ್ಳುತ್ತದೆ ಎಂದು ಬರೆದುಕೊಂಡಿದ್ದಾರೆ.
ಆದಾಗ್ಯೂ, ಪಾಕಿಸ್ತಾನ ಹೇಳಿಕೊಳ್ಳುತ್ತಿರುವಂತೆ ಭಾರತದ ಯಾವುದೇ ವಿಮಾನವನ್ನು ಪಾಕ್ ಹೊಡೆದುರುಳಿಸಿರುವುದಕ್ಕೆ ಎಲ್ಲಿಯೂ ದೃಢೀಕರಣವಿಲ್ಲ. ಭಾರತದ ದಾಳಿಯನ್ನು ಇಡೀ ಜಗತ್ತು ನೋಡಿದೆ. ಸರ್ಗೋಧಾ, ನೂರ್ ಖಾನ್, ಜಕೋಬಾಬಾದ್ ಮತ್ತು ಸ್ಕಾರ್ಡು ಸೇರಿದಂತೆ ಪಾಕಿಸ್ತಾನದಾದ್ಯಂತ ಒಟ್ಟು 11 ವಾಯುನೆಲೆಗಳನ್ನು ಭಾರತ ನಾಶಪಡಿಸಿದೆ. ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿ ಎಂದು ಪರಿಗಣಿಸಲಾದ ರಾವಲ್ಪಿಂಡಿ ಬಳಿಯ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತ ನಡೆಸಿದ ದಾಳಿಯ ವಿಡಿಯೋಗಳು ವೈರಲ್ ಆಗಿವೆ. ಭಾರತವು ಬ್ರಹ್ಮೋಸ್ ಮತ್ತು ಸ್ಕಲ್ಪ್ ಕ್ಷಿಪಣಿಗಳೊಂದಿಗೆ ಪಾಕಿಸ್ತಾನಕ್ಕೆ ಭಯ ಹುಟ್ಟಿಸಿದೆ.
ಆಗಸ್ಟ್ ತಿಂಗಳಲ್ಲಿ ಭಾರತೀಯ ವಾಯುಪಡೆಯ ಮುಖ್ಯಸ್ಥ ಎಪಿ ಸಿಂಗ್ ಅವರು ಪಾಕಿಸ್ತಾನ ಆರು ವಿಮಾನಗಳನ್ನು ಕಳೆದುಕೊಂಡಿದೆ ಎಂದು ಹೇಳಿದ್ದರು. ಅವುಗಳಲ್ಲಿ ಐದು ಯುದ್ಧ ವಿಮಾನಗಳು ಮತ್ತು ಒಂದು ದೊಡ್ಡ ವಿಮಾನ (ಬಹುಶಃ AWACS ವಿಮಾನ) ಎಂದು ನಂಬಲಾಗಿದೆ. ಭಾರತದ ದಾಳಿಗಳು ಪಾಕಿಸ್ತಾನಕ್ಕೆ ಭಾರಿ ನಷ್ಟವನ್ನುಂಟುಮಾಡಿವೆ, ಅದಕ್ಕಾಗಿಯೇ ಪಾಕಿಸ್ತಾನ ಕದನ ವಿರಾಮಕ್ಕಾಗಿ ಹೆಣಗಾಡಿತು ಎಂದು ಹೇಳಿದರು. (ಏಜೆನ್ಸೀಸ್)