Mobile Phone : ಕ್ರಿಕೆಟ್ ತವರು ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಒಂದು ಕುತೂಹಲಕಾರಿ ಘಟನೆ ಬೆಳಕಿಗೆ ಬಂದಿದೆ. ಬ್ಯಾಟ್ಸ್‌ಮನ್ ಓರ್ವ ರನ್ ಗಳಿಸುತ್ತಿದ್ದಾಗ, ಅವರ ಪ್ಯಾಂಟ್ ಜೇಬಿನಿಂದ ಮೊಬೈಲ್ ಫೋನ್ ಕೆಳಗೆ ಜಾರಿ ಪಿಚ್ ಮೇಲೆ ಬಿದ್ದಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವ್ಯಾಪಕವಾಗಿ ಚರ್ಚೆಯಾಗುತ್ತಿದೆ.
ಇತ್ತೀಚೆಗೆ ನಡೆದ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯವೊಂದರಲ್ಲಿ ಲಂಕಾಷೈರ್ ಮತ್ತು ಗ್ಲೌಸೆಸ್ಟರ್‌ಶೈರ್ ಮುಖಾಮುಖಿಯಾಗಿತ್ತು. ಈ ಕೂತೂಹಲಕಾರಿ ಘಟನೆ ಲಂಕಾಷೈರ್ ತಂಡದ ಇನ್ನಿಂಗ್ಸ್ ಸಮಯದಲ್ಲಿ ಸಂಭವಿಸಿದೆ. ಇನ್ನಿಂಗ್ಸ್‌ನ 114ನೇ ಓವರ್‌ನಲ್ಲಿ ಜೋಶ್ ಶಾ ಬೌಲಿಂಗ್ ಮಾಡಿದರು. ಈ ವೇಳೆ ಲಂಕಾಷೈರ್ ಬ್ಯಾಟ್ಸ್‌ಮನ್ ಟಾಮ್ ಬೈಲಿ, ಫೈನ್ ಲೆಗ್ ಕಡೆಗೆ ಶಾಟ್ ಆಡಿದರು. ಅಲ್ಲದೆ, ಎರಡು ರನ್ ಸಹ ಗಳಿಸಿದರು.
ಇದೇ ಸಂದರ್ಭದಲ್ಲಿ, ಬೈಲಿ ಅವರು ನಾನ್-ಸ್ಟ್ರೈಕರ್ ತುದಿಯನ್ನು ಮುಟ್ಟಿ ಎರಡನೇ ರನ್ ಪೂರ್ಣಗೊಳಿಸಲು ಮತ್ತೆ ಕ್ರೀಸ್ಗೆ ಓಡುವಾಗ ಮೊಬೈಲ್ ಫೋನ್ ಅವರ ಜೇಬಿನಿಂದ ಬಿದ್ದಿತು. ಇದೀಗ ವಿಡಿಯೋ ವೈರಲ್ ಆಗಿದ್ದು, ಫೋನ್ ಕೊಂಡೊಯ್ಯಲು ಅವರಿಗೆ ಅವಕಾಶ ನೀಡಿದ್ದು ಯಾರು ಎಂದು ಕೇಳುತ್ತಿದ್ದಾರೆ.
ಐಸಿಸಿ ನಿಯಮಗಳ ಪ್ರಕಾರ, ಯಾವುದೇ ಆಟಗಾರನು ಪಂದ್ಯದ ಸಮಯದಲ್ಲಿ ಸಂವಹನಕ್ಕಾಗಿ ಬಳಸುವ ಯಾವುದೇ ಗ್ಯಾಜೆಟ್ ಅನ್ನು ಕೊಂಡೊಯ್ಯಬಾರದು. ನಿರ್ದಿಷ್ಟವಾಗಿ ಹೇಳುವುದಾದರೆ, ಆಟಗಾರರು ಬಸ್ಸಿನಿಂದ ಇಳಿದ ತಕ್ಷಣ ಮೊಬೈಲ್ ಫೋನ್‌ಗಳನ್ನು ಲಾಕರ್‌ನಲ್ಲಿ ಇಡಬೇಕಾಗುತ್ತದೆ. ಪಂದ್ಯದ ನಂತರವೇ ಆಟಗಾರರಿಗೆ ಅವರ ಫೋನ್‌ಗಳನ್ನು ಹಿಂತಿರುಗಿಸಲಾಗುತ್ತದೆ.
ಕೆಲವೊಂದು ಅಸಾಮಾನ್ಯ ಸಂದರ್ಭಗಳಲ್ಲಿ, ಅಂಪೈರ್‌ಗಳ ಅನುಮತಿಯೊಂದಿಗೆ ಫೋನ್‌ಗಳನ್ನು ಬಳಸಬಹುದು. ಆದರೆ, ಪಂದ್ಯ ನಡೆಯುತ್ತಿರುವಾಗ ಅವುಗಳನ್ನು ಮೈದಾನಕ್ಕೆ ತೆಗೆದುಕೊಂಡು ಹೋಗಲು ಅನುಮತಿಸಲಾಗುವುದಿಲ್ಲ. ಆದರೆ, ಬೈಲಿ ಅವರು ಅದು ಹೇಗೆ ಫೋನ್ ತೆಗೆದುಕೊಂಡು ಹೋದರು ಅನ್ನೋ ಪ್ರಶ್ನೆ ಮೂಡಿದೆ. ಸದ್ಯ ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. (ಏಜೆನ್ಸೀಸ್)